- ಆಶುಚಿಯ ಆಗರವಾಗಿರುವ ಸಾಲು ಸಾಲು ಮಾರುಕಟ್ಟೆ- ಬಳಕೆಯಾಗದ ಶೌಚಾಲಯ
ಕನ್ನಡಪ್ರಭ ವಾರ್ತೆ ತರೀಕೆರೆ
ಜನಸಾಮಾನ್ಯರ ಮುಕ್ತ ಮಾರುಕಟ್ಟೆ ಎಂದು ರಾಜ್ಯಾದ್ಯಂತ ಖ್ಯಾತಿ ಪಡೆದಿದ್ದ ಪುರಸಭೆಯಿಂದ ಪಟ್ಟಣದಲ್ಲಿ ಪ್ರತಿ ಶುಕ್ರವಾರ ನಡೆಯುತ್ತಿದ್ದ ತರೀಕೆರೆ ವಾರದ ಸಂತೆ ನಗರೋತ್ಧಾನ ಯೋಜನೆಯಡಿ ನಿರ್ಮಿಸಿರುವ ಅಂಗಡಿ ಮಳಿಗೆಗಳ ಬಳಿ ಸ್ಥಳಾಂತರವಾದರೂ ಈ ಮಾರುಕಟ್ಟೆಯಲ್ಲಿನ ಮೂಲಸೌಕರ್ಯ ಕೊರತೆಯಿಂದ ಹಿಂದಿನಂತೆ ಸಂತೆ ವ್ಯವಹಾರ ಜನೋಪಯೋಗಿಯಾಗದೇ ಉಳಿದಿದೆ.ಹಲವಾರು ಮಳಿಗೆಗಳು ವ್ಯಾಪಾರಸ್ಥರ ಅನುಕೂಲಕ್ಕಾಗಿ ತಲೆ ಎತ್ತಿ ನಿಂತಿದ್ದರೂ ಪ್ರಯೋಜನಕ್ಕೆ ಬಾರದಾಗಿದೆ ಎಂಬುದು ವಿಪರ್ಯಾಸವೇ ಸರಿ. ನಗರೋತ್ಥಾನ ಯೋಜನೆಯಡಿ ಲಕ್ಷಾಂತರ ಖರ್ಚು ಮಾಡಿ ಪುರಸಭೆ ಕಟ್ಟಿಸಿದ ಮಳಿಗೆಗಳ ಉದ್ಘಾಟನೆಯೂ ಆಗಿದೆ. ಹಂತ 03ರಡಿ ನಿರ್ಮಾಣವಾದ ಮಾರುಕಟ್ಟೆ ಮಳಿಗೆಗಳನ್ನು ಹರಾಜು ಸಹ ಮಾಡಲಾಗಿದೆ. ಆದರೂ ಸಂತೆ ವ್ಯಾಪಾರ ಮಾತ್ರ ಈ ಮಳಿಗೆಗಳಲ್ಲಿ ನಡೆಯುತ್ತಿಲ್ಲ. ಬದಲಿಗೆ ಮಾರುಕಟ್ಟೆಯ ಮುಂದೆಯೇ ಅಂಗಡಿ ಹಾಕಿ ವ್ಯಾಪಾರ ನಡೆಸುವುದರಿಂದ ಗ್ರಾಹಕರು ಸಹ ಅಲ್ಲೆ ವ್ಯಾಪಾರ ಮಾಡುತ್ತಿದ್ದು ನಿರ್ಮಾಣವಾಗಿರುವ ಮಳಿಗೆಗಳು ಉಪಯೋಗಕ್ಕೆ ಬಾರದೆ ಧೂಳು ತುಂಬಿ, ನೈರ್ಮಲ್ಯದ ಆಗರವಾಗಿದೆ.
ಆದರೆ ಈಗ ಪಟ್ಟಣದ ಎಪಿಎಂಸಿ ಸಮೀಪದಲ್ಲಿ ಸಂತೆ ಮೈದಾನಕ್ಕೆ ಸ್ಥಳಾಂತರಗೊಂಡು ನಗರೋತ್ಥಾನ ಹಂತ 03 ಯೋಜನೆಯಡಿ ₹70 ಲಕ್ಷ ಹಾಗೂ ಮುಖ್ಯಮಂತ್ರಿಗಳ ಅಮೃತ್ ನಗರೋತ್ಧಾನ ಯೋಜನೆ ಹಂತ-04 ರಡಿ ₹72 ಲಕ್ಷ ಸೇರಿ ಸಾಲು ಸಾಲು ಮಳಿಗೆಗಳು ನಿರ್ಮಿಸಿ, ಎಲ್ಲ ಮಳಿಗೆಗೂ ನೆಲಹಾಸು, ಮೇಲ್ಚಾವಣಿ ಒದಗಿಸಿದೆ.
ವಿಶಾಲವಾದ ಮಾರುಕಟ್ಟೆಗಳ ಸನಿಹದಲ್ಲೇ ಪುರಸಭೆ ಶೌಚಾಲಯ ನಿರ್ಮಿಸಿ ವರ್ಷಗಳೇ ಉರುಳಿದರೂ ಈವರೆಗೂ ಸಾರ್ವಜನಿಕರ ಉಪಯೋಗದಿಂದ ದೂರವೇ ಉಳಿದಿದೆ. ಮಳಿಗೆಗಳ ಸ್ಥಳಕ್ಕೆ ಗ್ರಾಹಕರು ಬರುತ್ತಿಲ್ಲ. ಅಲ್ಲಿ ನಾವು ಅಂಗಡಿ ಇಟ್ಟರೆ ನಮ್ಮ ವ್ಯಾಪಾರ ವಹಿವಾಟು ಗತಿ ಏನು ಎಂದು ವರ್ತಕರು ಕೇಳುತ್ತಾರೆ ಎಂದು ಪುರಸಭೆ ಅಧಿಕಾರಿಗಳು ಹೇಳುತ್ತಾರೆ. ಈ ಸಮಸ್ಯೆ ಬಗೆ ಹರಿಯುವುದು ಹೇಗೆ, ಲಕ್ಷಾಂತರ ವ್ಯಯಿಸಿ ನಿರ್ಮಿಸಿದ ಮಾರುಕಟ್ಟೆ ವರ್ತಕರಿಗೆ ಮತ್ತು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಮಾಡುವುದಾದರೂ ಹೇಗೆ ಎಂಬುದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ.ಪುರಸಭೆ ವರ್ತಕರು ಮತ್ತು ಗ್ರಾಹಕರ ಮನ ಒಲಿಸಿ ಜನರು ಮಳಿಗೆಗಳತ್ತ ಬರುವಂತೆ ಉತ್ತಮ ರಸ್ತೆ, ದೀಪ, ಕುಡಿಯುವ ನೀರು ಇತ್ಯಾದಿ ಮೂಲ ಸೌಲಭ್ಯ ಒದಗಿಸಬೇಕು. ಮಳಿಗೆಗಳ ಸುತ್ತಲ ವಾತಾವರಣ ಶುಚಿಗೊಳಿಸಬೇಕು. ಮಾರುಕಟ್ಟೆ ಸುತ್ತ ಉತ್ತಮ ಪರಿಸರ ನಿರ್ಮಿಸಿ ಸಾರ್ವಜನಿಕರು ಈ ಮಾರುಕಟ್ಟೆಗಳಿಗೆ ಬರಲು ಅನುಕೂಲವಾಗುವಂತೆ ಶುಚಿತ್ವ ಕಾಪಾಡಲು ಸುಸಜ್ಜಿತ ರಸ್ತೆ, ಬೀದಿ ದೀಪ, ಕುಡಿಯುವ ನೀರು ಇತ್ಯಾದಿ ಸೌಲಭ್ಯ ಒದಗಿಸಿದರೆ ವರ್ತಕರಿಗೆ, ಸಾರ್ವಜ ನಿಕರಿಗೆ ಅನುಕೂಲವಾಗುವ ಜೊತೆ ತರೀಕೆರೆ ಶುಕ್ರವಾರದ ಸಂತೆ ಮತ್ತೆ ತನ್ನ ಹಿಂದಿನ ವೈಭವ ಗಳಿಸಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ. ಮಳೆಗಾಲ ಬಂತೆಂದರೆ ಸಂತೆಮಾಳ ಕೆಸರಿನಿಂದ ತುಂಬುತ್ತದೆ. ಮಳೆಯಿಂದ ಅಂಗಡಿಗಳಿಗೆ ಮಣ್ಣು ಧೂಳು ಹರಿದು ಬರುತ್ತದೆ. ಸಂತೆ ಮಾಳದಲ್ಲಿ ಸಮರ್ಪಕ ರಸ್ತೆ ನಿರ್ಮಿಸಿ, ಕುಡಿಯುವ ನೀರಿನ ಸೌಲಭ್ಯರು ಮತ್ತು ಪ್ರಕಾಶಮಾನವಾದ ಬೆಳಕು ಬೀರುವ ವಿದ್ಯುತ್ ಬೀದಿ ದೀಪಗಳನ್ನು ಒದಗಿಸಬೇಕು. ಸಂತೆ ಮಾಳದಲ್ಲಿ ಶುಚಿತ್ವ ಕಾಪಾಡುವುದು ಇತ್ಯಾದಿ ಸೇರಿ ಮೂಲಸೌಲಭ್ಯ ಒದಗಿಸಬೇಕು ಎಂದು ಪುರಸಭೆ ಮಾಜಿ ಸದಸ್ಯ ಸುರೇಶ್ ಅಭಿಪ್ರಾಯಪಡುತ್ತಾರೆ. -- ಕೋಟ್ -- ನಗರೋತ್ಥಾನ ಯೋಜನೆ ಹಂತ 03ರ ಅಡಿ ನಿರ್ಮಿಸಿರುವ ಮಾರುಕಟ್ಟೆ ವರ್ತಕರ ಸಂಖ್ಯೆಗೆ ಅನುಗುಣವಾಗಿರದೆ ನಗರೋತ್ಥಾನ ಯೋಜನೆ 04ರ ಹಂತದಲ್ಲಿ ಇನ್ನೂ ಹೆಚ್ಚಿನ ಮಾರುಕಟ್ಟೆನ್ನು ನಿರ್ಮಿಸುವ ಕಾಮಗಾರಿಯಡಿ ನಿರ್ಮಿಸುತ್ತಿರುವ ಮಳಿಗೆಗಳು ಮುಕ್ತಾಯ ಹಂತದಲ್ಲಿವೆ. ನಿರ್ಮಾಣ ಕಾರ್ಯ ಮುಕ್ತಾಯಗೊಂಡ ನಂತರ ಈ ಮಾರುಕಟ್ಟೆಗಳನ್ನು ಕೂಡ ಹರಾಜು ಮಾಡಿ ವರ್ತಕರು ಉಪಯೋಗಿಸುವಂತೆ ಮನವಿ ಮಾಡಲಾಗುವುದು, ಪುರಸಭೆ ಅರ್ಥಿಕತೆಗೆ ಅನುಗುಣವಾಗಿ ರಸ್ತೆ, ವಿದ್ಯುತ್ ಮೂಲಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ತಾಹಿರಾ ತಸ್ನೀಮ್ ಪ್ರಭಾರ ಮುಖ್ಯಾಧಿಕಾರಿ, ಪುರಸಭೆ19ಕೆಟಿಆರ್.ಕೆ.1ತರೀಕೆರೆ ಶುಕ್ರವಾರದ ಸಂತೆಮಾಳದಲ್ಲಿ ನಗರೋತ್ಧಾನ ಯೋಜನೆಡಿಯಲ್ಲಿ ನಿರ್ಮಾಣಗೊಂಡ ಸಂತೆ ಮಾಳದ ಪುರಸಭೆ ಮಾರುಕಟ್ಟೆ ಖಾಲಿ... ಖಾಲಿ,,,,