ಗಜೇಂದ್ರಗಡ: ಬಡವರ, ಅನಾಥರ ಹಾಗೂ ನಿರ್ಗತಿಕರ ಬಗ್ಗೆ ಸಹಾನುಭೂತಿ ತೋರುವ ಮೂಲಕ ಉದಾರವಾಗಿ ದಾನ-ಧರ್ಮ ಮಾಡುವುದೇ ನಿಜವಾದ ರಂಜಾನ್ ಹಬ್ಬ ಆಚರಣೆ ಎಂದು ಧರ್ಮಗುರು ಮೌಲಾನಾ ನೂರಾನಿ ಖುಸ್ತಾರಿ ಹೇಳಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಗುರುವಾರ ನಡೆದ ಈದ್-ಉಲ್-ಫಿತರ್ ನಿಮಿತ್ತ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮಾತನಾಡಿದ ಅವರು, ಪವಿತ್ರ ಕುರಾನಿನಲ್ಲಿ ಹೇಳಿದ ಎಲ್ಲ ವ್ರತಗಳು, ಆಚಾರ-ವಿಚಾರಗಳು, ರೀತಿ-ನೀತಿಗಳು ಮಾನವನಿಗೆ ತನ್ನ ನೈತಿಕ ಮಟ್ಟ ಸುಧಾರಿಸುವ ಸಾಧನೆಗಳಾಗಿವೆ. ತಿಂಗಳ ಉಪವಾಸ ವ್ರತಾಚರಣೆಯ ಮೂಲಕ ಮನಸ್ಸಿನ ಕಲ್ಮಶ ಮತ್ತು ವೈರತ್ವ ಭಾವನೆಗಳನ್ನು ದೂರಮಾಡಿ ಸಹೋದರತ್ವ, ಸಹಬಾಳ್ವೆಯ ಮೂಲಕ ಸಮಾಜದಲ್ಲಿ ಏಳ್ಗೆ, ಶಾಂತಿ, ಸೌಹಾರ್ದತೆ ಮೂಡಿಸುವ ನಿಟ್ಟಿನಲ್ಲಿ ಬಾಂಧವ್ಯ ಬೆಳೆಸಿ ವಿಶ್ವ ಮಾನವರಾಗೋಣ ಎಂದರು.ಬೆಳಗ್ಗೆ ಇಲ್ಲಿನ ಜಾಮೀಯಾ ಮಸೀದಿಯಿಂದ ಅಲ್ಲಾಹನ ನಾಮಸ್ಮರಣೆ ಮಾಡುತ್ತಾ ಪಟ್ಟಣದ ದುರ್ಗಾವೃತ್ತ, ಕೆ.ಕೆ. ವೃತ್ತ ಮಾರ್ಗವಾಗಿ ಕಾಲ್ನಡಿಗೆಯೊಂದಿಗೆ ಸಂಚರಿಸುವ ಮೂಲಕ ಈದ್ಗಾ ಮೈದಾನ ತಲುಪಿ ಈದ್ ಉಲ್ ಫಿತರ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ನಾಡಿನಲ್ಲಿ ಬಿರು ಬೇಸಿಗೆಯಿಂದ ಜನತೆ ತತ್ತರಿಸಿದ್ದು, ಮಳೆಗಾಗಿ ಪ್ರಾರ್ಥಿಸುವಂತೆ ಸಮಾಜದ ಬಾಂಧವರು ಮನವಿ ಮಾಡಿದ್ದರಿಂದ ಮೌಲಾನಾ ನೂರಾನಿ ಖುಸ್ತಾರಿ ಅವರು ವಿಶೇಷ ಪ್ರಾರ್ಥನೆಯನ್ನು ನೆರವೇರಿಸಿದರು.
ಈ ವೇಳೆ ಮೌಲಾನಾರಾದ ರಫೀಕ್ ಹಾಳಗಿ, ಯಾಸೀನ್ ಹಿರೇಹಾಳ, ಖಲೀಲ ಅಹ್ಮದ ಖಾಜಿ, ಟಕ್ಕೇದ ದರ್ಗಾದ ಸೈಯದ್ ನಿಜಾಮುದ್ದೀನ್ ಶಾ ಮಕಾನದಾರ, ಅಂಜುಮನ್ ಇಸ್ಲಾಂ ಸಂಸ್ಥೆಯ ಚೇರ್‌ಮನ್ ಹಸನ ತಟಗಾರ, ಪುರಸಭೆ ಸದಸ್ಯರಾದ ರಾಜು ಸಾಂಗ್ಲೀಕರ, ಮುರ್ತುಜಾ ಡಾಲಾಯತ್ ಹಾಗೂ ಎಂ.ಎಚ್. ಕೋಲಕಾರ, ಎ.ಡಿ. ಕೋಲಕಾರ, ಸುಭಾನಸಾಬ್ ಆರಗಿದ್ದಿ, ಮಕ್ತುಂಸಾಬ್ ಮುಧೋಳ, ದಾವಲ ತಾಳಿಕೋಟಿ, ನಾಸಿರಅಲಿ ಸುರಪುರ, ಡಿ.ಬಿ. ವಣಗೇರಿ, ಮಹ್ಮದ ನಾಲಬಂದ, ಸಮದ್ ಕೋಲಕಾರ, ಎ.ಕೆ. ಒಂಟಿ, ಮೌಲಾಸಾಬ ಸೈಯದ್, ಫಯಾಜ್ ತೋಟದ, ಮಾಸುಮಲಿ ಮದಗಾರ, ಶಾಮೀದ ಮಾಲ್ದಾರ, ಇಮ್ರಾನ ಅತ್ತಾರ, ರಸೂಲ್ ಮಾಲ್ದಾರ್, ಹೈದರಲಿ ಹುನಗುಂದ ಸೇರಿದಂತೆ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಮುಸ್ಲಿಂ ಬಾಂಧವರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.