ಕನ್ನಡಪ್ರಭ ವಾರ್ತೆ ಪಾವಗಡ
ಗ್ರಾಪಂ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ಖಂಡಿಸಿ ಗ್ರಾಪಂ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಅಧ್ಯಕ್ಷರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಪಳವಳ್ಳಿ ಗ್ರಾಪಂನಲ್ಲಿ ನಡೆದಿದೆ.ತಾಲೂಕಿನ ಪಳವಳ್ಳಿ ಗ್ರಾಪಂನಲ್ಲಿ ಕಾಂಗ್ರೆಸ್, ಜೆಡಿಎಸ್ ಬೆಂಬಲಿತ ಒಟ್ಟು 17 ಮಂದಿ ಸದಸ್ಯರಿದ್ದು ವಿವಿಧ ಯೋಜನೆಯ ಗ್ರಾಮೀಣ ಪ್ರಗತಿ ವಿಚಾರವಾಗಿ ಮಂಗಳವಾರ ಗ್ರಾಪಂನಲ್ಲಿ ಸಾಮಾನ್ಯ ಸಭೆ ಕರೆಯಲಾಗಿತ್ತು. 17ಮಂದಿ ಗ್ರಾಪಂ ಸದಸ್ಯರ ಪೈಕಿ 11ಮಂದಿ ಸದಸ್ಯರು ಗೈರು ಹಾಜರಾಗಿದ್ದು ಈ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆ ಮೊಟಕುಗೊಳಿಸಲಾಗಿದೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಸದಸ್ಯ ಗೋವಿಂದಪ್ಪ ವಸತಿ ಹಂಚಿಕೆ, ನೈರ್ಮಲ್ಯ, ನರೇಗಾ ಅನುಷ್ಠಾನ ಸೇರಿದಂತೆ ಅಭಿವೃದ್ಧಿ ಕಾರ್ಯದಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಅಧ್ಯಕ್ಷರು ವಿಫಲವಾಗಿದ್ದಾರೆ. ಏಕಪಕ್ಷೀಯ ನಿರ್ಣಯ ಹಾಗೂ ಹಿಟ್ಲರ್ ದರ್ಪ ಧೋರಣೆ ಹೊಂದಿದ್ದು ಇದನ್ನು ವಿರೋಧಿಸಿ ಸಾಮಾನ್ಯ ಸಭೆಗೆ ಗೈರು ಹಾಜರಾಗಿದ್ದೇವೆ ಎಂದು ತಿಳಿಸಿದರು. ಪಿಎಂಜಿಎಸ್‌ವೈ ಯೋಜನೆ ಅಡಿಯಲ್ಲಿ ಅರ್ಹರಿಗೆ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರ 40 ಮನೆ ಮಂಜೂರಾತಿ ಆದೇಶ ಜಾರಿಪಡಿಸಿದ್ದು ಈ ಮನೆಗಳ ಹಂಚಿಕೆ ವಿಚಾರವಾಗಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಪಕ್ಷೀಯವಾಗಿ ಗ್ರಾಪಂ ಅಧ್ಯಕ್ಷ ದಿನೇಶ್ ಅವರೊಬ್ಬರೇ ಆದೇಶಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು. ಇನ್ನೂ ಗ್ರಾಪಂ ಪಿಡಿಒ ಹನುಮರಾಜ್ ಸಹ ಸದಸ್ಯರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಉದಾಸೀನತೆ ತೋರಿ ಪಂಚಾಯತ್ ರಾಜ್ ಇಲಾಖೆಯ ನಿಯಮಗಳನ್ನೇ ಗಾಳಿ ತೂರಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರಿದರು. ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ಹಾಗೂ ಅಧ್ಯಕ್ಷರು ತಮಗೆ ಮನಸ್ಸಿಗೆ ತಿಳಿದಂತೆ ಆದೇಶಗಳನ್ನು ಮಾಡಿದ್ದು, ಇದರಿಂದಾಗಿ ಅರ್ಹರು ಯೋಜನೆಯಿಂದ ವಂಚಿತರಾಗಿದ್ದಾರೆ. ಜೊತೆಗೆ ಅಭಿವೃದ್ಧಿಯಲ್ಲಿ ಗ್ರಾಪಂ ಹಿಂದುಳಿದಿದೆ ಎಂದರು. ಈ ಸಂಬಂಧ ಶೀಘ್ರವೇ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರಿಗೆ ದೂರು ನೀಡುವುದಾಗಿ ತಿಳಿಸಿದರು. ಈ ಕುರಿತು ಮಾತನಾಡಿದ ಪಿಡಿಒ ಹನುಮರಾಜ್, ಸದಸ್ಯರ ಆರೋಪದಲ್ಲಿ ಹುರುಳಿಲ್ಲ. ಎಲ್ಲವೂ ನಿಯಮದಂತೆ ನಡೆದಿದೆ. ಇಂದಿನ ಸಭೆಗೆ ಸದಸ್ಯರಿಗೆ ನೋಟೀಸ್ ನೀಡಲಾಗಿತ್ತು.ಕೋರಂ ಕೊರತೆ ಕಾರಣ ಸಭೆ ಮುಂದೂಡಲಾಗಿದೆ ಎಂದು ತಿಳಿಸಿದರು.