ಬ್ರಿಟಿಷರ ಲಾಠಿ ಏಟನ್ನು ಧೈರ್ಯವಾಗಿ ಎದುರಿಸಲು ಶಕ್ತಿ ಕೊಟ್ಟಿದ್ದು ವಂದೇ ಮಾತರಂ. ದೇಶಕ್ಕೆ ಸ್ವತಂತ್ರ ಸಿಗುವ ವೇಳೆಗೆ ಅದು ತುಂಡಾಗಿತ್ತು. ಇದೀಗ ವಂದೇ ಮಾತರಂನ 150ನೇ ವರ್ಷದ ಹಿನ್ನೆಲೆಯಲ್ಲಿ ಪೂರ್ಣವಾಗಿ ಹಾಡಲು ಕೇಂದ್ರ ಸರ್ಕಾರ ಆದೇಶಿಸಿದೆ.
ಹುಬ್ಬಳ್ಳಿ:
ರಾಜ್ಯದ ಗೃಹ ಸಚಿವ (ಪ್ರಿಯಾಂಕ ಖರ್ಗೆ)ರಿಗೆ ಆರ್‌ಎಸ್‌ಎಸ್ ಎಂದರೆ ಚೇಳು ಕಡಿದಂಗೆ ಆಗುತ್ತದೆ. ಇನ್ನು ವಂದೇ ಮಾತರಂ ಹಾಡಲು ಕೂಡ ಅವರಿಗೆ ಭಯವಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲಜಿ ಟೀಕಿಸಿದರು.
ಇದೇ ವೇಳೆ ಹಿಂದೂ ದೇವಾಲಯಗಳ ನಿರ್ವಹಣೆಯ ಜವಾಬ್ದಾರಿ ಹಿಂದೂಗಳಿಗೆ ನೀಡಲಿ. ಹಿಂದೂಗಳು ಶಾಂತಿ ಪ್ರಿಯರಾಗಿದ್ದು ಯಾರ ತಂಟೆಗೂ ಹೋಗುವುದಿಲ್ಲ. ಆದರೆ, ಯಾರಾದರೂ ನಮ್ಮ ತಂಟೆಗೆ ಬಂದರೆ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು.
ಇಲ್ಲಿನ ರಾಣಿ ಚೆನ್ನಮ್ಮ ಮೈದಾನ (ಈದ್ಗಾ ಮೈದಾನದ)ದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ವಿಸರ್ಜನೆಯ ವೇಳೆ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ರಿಟಿಷರ ಲಾಠಿ ಏಟನ್ನು ಧೈರ್ಯವಾಗಿ ಎದುರಿಸಲು ಶಕ್ತಿ ಕೊಟ್ಟಿದ್ದು ವಂದೇ ಮಾತರಂ. ದೇಶಕ್ಕೆ ಸ್ವತಂತ್ರ ಸಿಗುವ ವೇಳೆಗೆ ಅದು ತುಂಡಾಗಿತ್ತು. ಇದೀಗ ವಂದೇ ಮಾತರಂನ 150ನೇ ವರ್ಷದ ಹಿನ್ನೆಲೆಯಲ್ಲಿ ಪೂರ್ಣವಾಗಿ ಹಾಡಲು ಕೇಂದ್ರ ಸರ್ಕಾರ ಆದೇಶಿಸಿದೆ. ಆದರೆ, ದೆಹಲಿಯ ವಂದೇ ಮಾತರಂ ಕರ್ನಾಟಕಕ್ಕೆ ಬರಲಿಲ್ಲ. ವಂದೇ ಮಾತರಂ ಹಾಡಲು ಯಾರ ಅಪ್ಪಣೆಯೂ ಬೇಕಾಗಿಲ್ಲ. ಎಲ್ಲರೂ ವಂದೇ ಮಾತರಂ ಪೂರ್ಣವಾಗಿ ಹಾಡಿ ಎಂದರು.
ಪ್ರಿಯಾಂಕ ಖರ್ಗೆ ಅವರ ಹೆಸರು ಹೇಳದೇ ಕುಟುಕಿದ ಅವರು, ಗೃಹಸಚಿವರಿಗೆ ಆರ್‌ಎಸ್‌ಎಸ್ ಕಂಡರೆ ಚೇಳು ಕಡಿದಂಗೆ ಆಗುತ್ತೆ. ವಂದೇ ಮಾತರಂ ಹಾಡಿದರೆ ಎಲ್ಲಿ ಕೈ-ಕಾಲು ಕಮಲದ್ದಾಗುತ್ತವೆ ಎಂಬ ಭಯ ಅವರನ್ನು ಕಾಡುತ್ತಿದೆ ಎಂದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರಗೆ ಹಿಂದೂಗಳನ್ನು ವಿರೋಧಿಸಿದರೆ ಅವರ ಕುರ್ಚಿಗೆ ಕಂಟಕ ಬರುತ್ತದೆ ಎಂಬುದು ಗೊತ್ತಿದೆ. ಹೀಗಾಗಿ ಅವರು ಇದೀಗ ಮಠ ಮಂದಿರಗಳನ್ನು ಸುತ್ತುತ್ತಿದ್ದಾರೆ. ಅವರಂತೆ ಗೃಹಮಂತ್ರಿಗೂ ಒಳ್ಳೆಯ ಬುದ್ಧಿ ಬರಲಿ ಎಂದು ಆಶಿಸುತ್ತೇನೆ ಎಂದರು.
ಹಿಂದೆ ಹಿಂದೂಗಳು ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಗೆ ಹೊಡಿ ಎಂದು ಹೇಳುತ್ತಿದ್ದೆವು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ನಮ್ಮ ತಂಟೆಗೆ ಬಂದರೆ ತಕ್ಕ ಉತ್ತರ ನೀಡುವ ಸಾಮರ್ಥ್ಯ ನಮ್ಮಲ್ಲಿದೆ ಎಂದು ಗುಡುಗಿದರು.
ಹಿಂದೆ ದೇಶದಲ್ಲಿದ್ದ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂದು ಬರೀ ಹೇಳುತ್ತಿದ್ದರು. ಆದರೆ ಈಗ ಉಗ್ರಗಾಮಿಗಳನ್ನು ಅವರ ನೆಲಕ್ಕೆ ನುಗ್ಗಿ ಸದೆಬಡಿದು ಅಲ್ಲಾನ ಪಾದಕ್ಕೆ ಸೇರಿಸುವ ಕೆಲಸ ಮಾಡುವ ಸರ್ಕಾರ ಬಂದಿದೆ. ಸಿಂಹದಂತಿರುವ ಹಿಂದೂ ಸಮಾಜಕ್ಕೆ ಸಿಂಹದಂತಹ ನಾಯಕತ್ವ ಸಿಕ್ಕಿದೆ ಎಂದರು.
ಮುಸ್ಲಿಂ ಹುಡುಗಿಯರು ಉಳಿಯಲಿಕ್ಕಿಲ್ಲ:
ದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿವೆ. ಮುಸ್ಲಿಮರು ತಮ್ಮ ಮಕ್ಕಳಿಗೆ ಬುದ್ಧಿ ಹೇಳಬೇಕು. ನಮಗೆ ರಾಮನಂತೆ ಏಕಪತ್ನಿ ವೃತಸ್ಥರಾಗುವುದು ಗೊತ್ತಿದೆ. ಕೃಷ್ಣನಂತೆ ಹದಿನಾರು ಸಾವಿರ ಹೆಂಡರನ್ನು ಹೊಂದುವುದು ಗೊತ್ತಿದೆ. ಹಿಂದೂ ಹುಡುಗರು ಮುಸ್ಲಿಮ ಹುಡುಗಿಯರನ್ನು ಲವ್ ಮಾಡಲು ಆರಂಭಿಸಿದರೆ ಮುಸ್ಲಿಮರಿಗೆ ಒಂದು ಹುಡುಗಿ ಕೂಡ ಸಿಗಲ್ಲ ಎಂದ ಅವರು, ಲವ್ ಜಿಹಾದ್ ನಿಲ್ಲಿಸಬೇಕು. ಇಲ್ಲವೇ ಮುಸ್ಲಿಂ ಹುಡುಗಿಯರನ್ನು ಪ್ರೀತಿ ಮಾಡಿ ಎಂದು ಹಿಂದೂ ಯುವಕರಿಗೆ ಗೋಪಾಲಜೀ ಕರೆ ನೀಡಿದರು.
ಇಲ್ಲಿನ ಮುಸ್ಲಿಮರೇನು ಅರಬ್‌ನಿಂದ ಬಂದವರಲ್ಲ. ನಮ್ಮ ದೇಶದವರೇ, ಹಿಂದೆ ಮತಾಂತರಗೊಂಡವರು ಎಂದ ಅವರು, ಹಿಂದೂ ದರ್ಮೀಯರನ್ನು ಮುಸ್ಲಿಂರು ಇಪ್ತಿಯಾರ್ ಕೂಟಕ್ಕೆ ಕರೆಯುತ್ತಾರೆ. ನಮ್ಮ ನಾಯಕರು ಹೋಗುತ್ತಾರೆ. ಹಾಗೆ ನೀವು ನಮ್ಮ ಗಣೇಶ ಹಬ್ಬಕ್ಕೆ ಬನ್ನಿ. ಮುಸ್ಲಿಮರು ನಮಾಜ್ ಮಾಡಲು ನಮ್ಮ ಅಭ್ಯಂತರವಿಲ್ಲ. ನಮ್ಮ ಗಣೇಶನ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದರು.
ಹಿಂದೂ ದೇವಸ್ಥಾನ ನೀಡಿ:
ಕೋಟ್ಯಂತರ ಮಸೀದಿ, ಚರ್ಚ್‌ಗಳಿವೆ. ಅಲ್ಲಿನ ಆದಾಯದ ಮೇಲೆ ಸರ್ಕಾರ ಕಣ್ಣಿಟ್ಟಿಲ್ಲ. ಅಲ್ಲಿ ಆಡಳಿತಾಧಿಕಾರಿ ನೇಮಿಸುವ ತಾಕತ್ತು ಸರ್ಕಾರಕ್ಕಿಲ್ಲ. ಆದರೆ ಹಿಂದೂ ದೇವಾಲಯಗಳ ಆದಾಯದ ಮೇಲೆ ಸರ್ಕಾರ ಕಣ್ಣಿಟ್ಟಿದೆ. ಮುಜರಾಯಿ ಇಲಾಖೆ ಮೂಲಕ ಆಡಳಿತ ನಡೆಸುತ್ತಿದೆ. ಹಿಂದೂ ದೇವಾಲಯಗಳ ನಿರ್ವಹಣೆ ಜವಾಬ್ದಾರಿ ಹಿಂದೂಗಳಿಗೆ ನೀಡಿ. ಇದಕ್ಕಾಗಿ ಕಮಿಟಿ ರಚಿಸಿ ನಿರ್ಧಾರ ಕೈಗೊಳ್ಳಲಿ ಎಂದು ಆಗ್ರಹಿಸಿದರು. ನಾವು ಸಮರ್ಥವಾಗಿ ನಿರ್ವಹಿಸಿ ತೋರಿಸುತ್ತೇವೆ ಎಂದರು.
ಎದುರಾಗುತ್ತಿರುವ ಬರಗಾಲಕ್ಕೆ ಗೋಹತ್ಯೆ ಕೂಡ ಕಾರಣ. ಗೋಮಾತೆಯನ್ನು ರಕ್ಷಿಸಬೇಕು ಎಂದರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.