ಧಾರವಾಡ: ಈ ಬಾರಿ ಯಾರು ತಮ್ಮ ಮನೆಗಳಲ್ಲಿ ಪರಿಸರ ಸ್ನೇಹಿಯಾಗಿ ಗಣೇಶೋತ್ಸವ ಆಚರಿಸುತ್ತಾರೆಯೋ ಅಂತಹ ಒಂದು ಲಕ್ಷ ಹು-ಧಾ ಅವಳಿ ನಗರ ನಾಗರಿಕರಿಗೆ ಇಕೋ ಭಕ್ತಿ ಸಂಭ್ರಮ ಕಾರ್ಯಕ್ರಮದ ಅಡಿ ಡಿಜಿಟಲ್ ಸರ್ಟಿಫಿಕೇಟ್ ನೀಡಲಾಗುವುದು ಎಂದು ಹು-ಧಾ ಮಹಾನಗರ ಪಾಲಿಕೆಯ ಮೇಯರ್ ಜ್ಯೋತಿ ಪಾಟೀಲ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಣ್ಣಿನ ಗಣೇಶ ಕೂರಿಸುವುದರಿಂದ ಹಿಡಿದು ಅಲಂಕಾರ ಹಾಗೂ ವಿಸರ್ಜನೆ ವರೆಗಿನ ಪರಿಸರ ಸ್ನೇಹಿ ಭಾವಚಿತ್ರಗಳನ್ನು ಹಂತ ಹಂತವಾಗಿ ಪಾಲಿಕೆ ನೀಡಿದ ವೆಬ್‌ಸೈಟ್‌ಗೆ ಕಳುಹಿಸಿದರೆ ಅವರಿಗೆ ಪಾಲಿಕೆಯಿಂದ ಗೌರವಾರ್ಥವಾಗಿ ಡಿಜಿಟಲ್ ಸರ್ಟಿಫಿಕೇಟ್ ನೀಡಲಾಗುವುದು. ಈ ಕುರಿತು ಮಾಹಿತಿಗಾಗಿ www.ecobhaktihdmc.com ಸಂಪರ್ಕಿಸಲು ಮೇಯರ್ ತಿಳಿಸಿದರು.20 ಅಡಿ ಪ್ಲಾಸ್ಟಿಕ್ ಬಾಟಲ್ ಇಲಿ: ಪಾಲಿಕೆಯು ಈ ಬಾರಿ ಗಣೇಶೋತ್ಸವದ ನಿಮಿತ್ತ ಪ್ಲಾಸ್ಟಿಕ್ ನಿಯಂತ್ರದ ಹಿನ್ನೆಲೆಯಲ್ಲಿ ಸುಮಾರು ಹತ್ತು ಸಾವಿರ ಪ್ಲಾಸ್ಟಿಕ್ ಬಾಟಲ್‌ಗಳಿಂದ 20 ಅಡಿಯ ಇಲಿಯ ಮೂರ್ತಿ ಸಿದ್ಧಪಡಿಸಿದ್ದು, ಈ ಮೂಲಕ ಪ್ಲಾಸ್ಟಿಕ್ ನಿಷೇಧದ ಜಾಗೃತಿ ಮಾಡಲಾಗುತ್ತಿದೆ. ಜತೆಗೆ ಅತಿಯಾದ ಶಬ್ದ ಹೊರಸೂಸುವ ಡಿಜೆಗಳನ್ನು ಬಳಸದೇ ಡೊಳ್ಳು, ಜಾಂಜ್ ಅಂತಹ ಭಾರತೀಯ ವಾದ್ಯಗಳನ್ನು ಬಳಸುವಂತೆಯೂ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಗಣೇಶೋತ್ಸವ ಹಿನ್ನೆಲೆಯಲ್ಲಿ ಹು-ಧಾ ಅವಳಿ ನಗರದಲ್ಲಿ 350 ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಪರವಾನಗಿಗೆ ಅರ್ಜಿ ಸಲ್ಲಿಸಿದ್ದು, ಮನೆ ಮನೆಗಳಲ್ಲೂ ಗಣೇಶ ಮೂರ್ತಿಗಳು ಪೂಜಿತಗೊಳ್ಳಲಿವೆ. ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆಗೆ ಅನುಕೂಲ ಆಗುವಂತೆ ಮರದ ಕೊಂಬೆಗಳನ್ನು ಕತ್ತರಿಸಲಾಗಿದ್ದು, ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿದೆ.₹61 ಲಕ್ಷ ವೆಚ್ಚದಲ್ಲಿ 72 ಬಾವಿಗಳನ್ನು ಸ್ವಚ್ಛಗೊಳಿಸಿದ್ದು, ಸಾರ್ವಜನಿಕರು ಅಲ್ಲಿ ಮೂರ್ತಿಗಳನ್ನು ವಿಸರ್ಜನೆ ಮಾಡಬಹುದು. ಜತೆಗೆ ಆಯಾ ವಲಯವಾರು ಗಣೇಶ ಮೂರ್ತಿ ವಿಸರ್ಜನೆಗೆ ಕೃತಕ ಬಾವಿಗಳನ್ನು ಸಹ ಸ್ಥಾಪಿಸಲಾಗಿದ್ದು, ಅವಳಿ ನಗರ ಜನರು ಸಂಭ್ರಮದಿಂದ ಗಣೇಶೋತ್ಸವ ಆಚರಿಸಲು ಮೇಯರ್ ಜ್ಯೋತಿ ಪಾಟೀಲ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಉಪ ಮೇಯರ್ ಸಂತೋಷ ಚಹ್ವಾಣ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಪಾಲಿಕೆ ಸದಸ್ಯರಾದ ಶಂಭು ಸಾಲಮನಿ ಇದ್ದರು.