ಕನಿಷ್ಠ ವೇತನ ಪರಿಷ್ಕರಣೆ ಆದೇಶ ತಕ್ಷಣ ಜಾರಿಯಾಗಲಿ

KannadaprabhaNewsNetwork |  
Published : Aug 11, 2026, 01:30 AM IST
10ಎಚ್ಎಸ್ಎನ್12 | Kannada Prabha

ಸಾರಾಂಶ

ಕನಿಷ್ಠ ವೇತನ ಪರಿಷ್ಕರಣೆ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಆಗ್ರಹಿಸಿದರು. ಕಾರ್ಮಿಕ ಇಲಾಖೆಯಿಂದ ಕನಿಷ್ಠ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಧಿಸೂಚನೆ/ಆದೇಶ ಹೊರಡಿಸಲಾಗಿದ್ದು, ವಿವಿಧ ವರ್ಗಗಳಾದ ಅಕುಶಲ ಅರೆಕುಶಲ ಕುಶಲ ಹಾಗೂ ಅತ್ಯಂತ ಕುಶಲ ನೌಕರರಿಗೆ ಪರಿಷ್ಕೃತ ವೇತನ ದರ ನಿಗದಿಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದರು. ಈ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ ಅಂತಿಮ ಅಧಿಸೂಚನೆ ಹೊರಡಿಸುವ ಅಗತ್ಯವಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳು, ನಿಗಮಗಳು, ಮಂಡಳಿಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ೪.೫ ಲಕ್ಷ ಹೊರಗುತ್ತಿಗೆ ನೌಕರರ ಹಿತದೃಷ್ಟಿಯಿಂದ ಕನಿಷ್ಠ ವೇತನ ಪರಿಷ್ಕರಣೆ ಕುರಿತು ಈಗಾಗಲೇ ಹೊರಡಿಸಿರುವ ಕರಡು ಅಧಿಸೂಚನೆಯನ್ನು ತಕ್ಷಣ ಅಂತಿಮಗೊಳಿಸಿ, ಪರಿಷ್ಕೃತ ವೇತನ ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘ ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಇದೇ ವೇಳೆ ದಲಿತ ಹಿರಿಯ ಮುಖಂಡ ಕೃಷ್ಣದಾಸ್ ಮತ್ತು ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ರಂಗನಾಥ್ ಮಾಧ್ಯಮದೊಂದಿಗೆ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಜೀವನ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹೊರಗುತ್ತಿಗೆ ನೌಕರರಿಗೆ ಪ್ರಸ್ತುತ ನೀಡುತ್ತಿರುವ ವೇತನವು ಜೀವನ ನಿರ್ವಹಣೆಗೆ ಸಮರ್ಪಕವಾಗಿಲ್ಲ. ಹೀಗಾಗಿ ಕನಿಷ್ಠ ವೇತನ ಪರಿಷ್ಕರಣೆ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಆಗ್ರಹಿಸಿದರು. ಕಾರ್ಮಿಕ ಇಲಾಖೆಯಿಂದ ಕನಿಷ್ಠ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಧಿಸೂಚನೆ/ಆದೇಶ ಹೊರಡಿಸಲಾಗಿದ್ದು, ವಿವಿಧ ವರ್ಗಗಳಾದ ಅಕುಶಲ ಅರೆಕುಶಲ ಕುಶಲ ಹಾಗೂ ಅತ್ಯಂತ ಕುಶಲ ನೌಕರರಿಗೆ ಪರಿಷ್ಕೃತ ವೇತನ ದರ ನಿಗದಿಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದರು. ಈ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ ಅಂತಿಮ ಅಧಿಸೂಚನೆ ಹೊರಡಿಸುವ ಅಗತ್ಯವಿದೆ ಎಂದರು. ಸರ್ಕಾರದ ವಿವಿಧ ಇಲಾಖೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಇತರೆ ಸರ್ಕಾರಿ ಸಂಸ್ಥೆಗಳಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಎಲ್ಲ ಅರ್ಹ ನೌಕರರಿಗೂ ಪರಿಷ್ಕೃತ ಕನಿಷ್ಠ ವೇತನ ಅನ್ವಯವಾಗುವಂತೆ ಸರ್ಕಾರ ಸ್ಪಷ್ಟ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು. ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ಪಾವತಿಸುವ ಗುತ್ತಿಗೆದಾರರು ಹಾಗೂ ಸಂಸ್ಥೆಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಮೇಲ್ವಿಚಾರಣಾ ವ್ಯವಸ್ಥೆ ರೂಪಿಸಬೇಕು. ಪರಿಷ್ಕೃತ ವೇತನ ಜಾರಿಗೆ ಬಂದ ನಂತರ ಅರ್ಹ ನೌಕರರಿಗೆ ದೊರೆಯಬೇಕಾದ ಬಾಕಿ ವೇತನ ವ್ಯತ್ಯಾಸವನ್ನು ಪಾವತಿಸುವ ಕುರಿತು ಕೂಡ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು. ಇದರೊಂದಿಗೆ ಕನಿಷ್ಠ ವೇತನದ ಜತೆಗೆ ಕಾನೂನುಬದ್ಧವಾಗಿ ಅನ್ವಯಿಸುವ ಇತರೆ ಸೌಲಭ್ಯಗಳು ಹಾಗೂ ಭತ್ಯೆಗಳನ್ನು ನೌಕರರಿಗೆ ಸಮರ್ಪಕವಾಗಿ ನೀಡುವಂತೆ ಖಾತರಿಪಡಿಸಬೇಕು. ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳನ್ನು ನೇಮಿಸಿ, ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಕನಿಷ್ಠ ವೇತನ ಸಮರ್ಪಕವಾಗಿ ಜಾರಿಯಾಗುತ್ತಿದೆಯೇ ಎಂಬುದನ್ನು ನಿಯಮಿತವಾಗಿ ಪರಿಶೀಲಿಸಬೇಕು ಎಂದು ಹೇಳಿದರು.

ನೌಕರರ ಶ್ರಮಕ್ಕೆ ನ್ಯಾಯಯುತ ಪ್ರತಿಫಲ ದೊರೆಯುವುದು ಸಾಮಾಜಿಕ ನ್ಯಾಯದ ಪ್ರಮುಖ ಅಂಶವಾಗಿದೆ. ಬೆಲೆ ಏರಿಕೆ ಹಾಗೂ ಜೀವನ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರು ಅತ್ಯಂತ ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುವಂತಾಗಿದೆ ಎಂದರು. ಹೀಗಾಗಿ ಸರ್ಕಾರ ಮಾನವೀಯ ಹಾಗೂ ಕಾರ್ಮಿಕಪರ ದೃಷ್ಟಿಕೋನದಿಂದ ಸಮಸ್ಯೆಯನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು. ಈಗಾಗಲೇ ಆರಂಭಿಸಿರುವ ಕನಿಷ್ಠ ವೇತನ ಪರಿಷ್ಕರಣೆ ಪ್ರಕ್ರಿಯೆಯನ್ನು ಮತ್ತಷ್ಟು ವಿಳಂಬಗೊಳಿಸದೆ, ಕರಡು ಆದೇಶವನ್ನು ದೃಢೀಕರಿಸಿ ಅಂತಿಮ ಅಧಿಸೂಚನೆ ಹೊರಡಿಸಬೇಕು. ಪರಿಷ್ಕೃತ ಕನಿಷ್ಠ ವೇತನವನ್ನು ತಕ್ಷಣದಿಂದಲೇ ಪರಿಣಾಮಕಾರಿಯಾಗಿ ಜಾರಿಗೆ ತಂದು, ರಾಜ್ಯದ ಸುಮಾರು ೪.೫ ಲಕ್ಷ ಹೊರಗುತ್ತಿಗೆ ನೌಕರರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ದಲಿತ ಹಿರಿಯ ಮುಖಂಡ ಎಚ್. ಕೆ. ಸಂದೇಶ್, ಹುಡಾ ಮಾಜಿ ಅಧ್ಯಕ್ಷ ಕೃಷ್ಣಕುಮಾರ್‌, ರಂಗಸ್ವಾಮಿ ಗುಡ್ಡೇನಹಳ್ಳಿ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಹಾಸನದ ಕ್ರೀಡಾಪಟುಗಳ ಸಾಧನೆ
ಸಿಲಿಂಡರ್ ಸ್ಫೋಟಗೊಂಡು ತಾಯಿ ಮಗಳ ಸ್ಥಿತಿ ಗಂಭೀರ