ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಭಿಮಾನಿಗಳಾದ ಕುಮಾರನಹಳ್ಳಿ ಮಹೇಶಪ್ಪ, ಆಕಾಶ್ ಬಣಕಾರ್, ಆಟೋ ಹನುಮಂತಪ್ಪ ಹರಿಹರ, ಜಿಲ್ಲಾ ಮಂತ್ರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮತ್ತು ಅಧಿಕಾರಿಗಳ ವಿರುದ್ಧ ಶಾಸಕ ಬಿ.ಪಿ.ಹರೀಶ ಗಂಭೀರ ಆರೋಪ ಮಾಡುತ್ತಿದ್ದು, ಅದಕ್ಕೆ ಸಮರ್ಪಕ ಉತ್ತರ ನೀಡದೇ, ವಿಷಯಾಂತರ ಮಾಡುವ, ಜನರ ಗಮನ ಬೇರೆಡೆ ಸೆಳೆಯುವ ಕೆಲಸವನ್ನು ವ್ಯವಸ್ಥಿತವಾಗಿ ಕೆಲವರು ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಸಚಿವರ ಅಕ್ರಮದ ಬಗ್ಗೆ ಬಿ.ಪಿ.ಹರೀಶ ಮಾಡಿರುವ ಆರೋಪಗಳ ಪರವಾಗಿ ಬಹಿರಂಗ ಚರ್ಚೆಗೆ ನಾವು ಸಿದ್ಧವಿದ್ದೇವೆ. ಚಿಕ್ಕಬಿದರಿ, ದುಗ್ಗಾವತಿ, ಕಡತಿ ಭಾಗಗಳಲ್ಲಿ ಹಳ್ಳ, ಕಂದಾಯ, ಅರಣ್ಯ ಭೂಮಿ ಒತ್ತುವರಿ ಮಾಡಿದ್ದು, ಬಡ ದೀನ ದಲಿತರ ಜಮೀನುಗಳನ್ನು ಕಬಳಿಸಿರುವ ಬಗ್ಗೆ ಶಾಸಕ ಬಿ.ಪಿ.ಹರೀಶ ಹಿಂದಿನಿಂದಲೂ ಪ್ರಶ್ನಿಸುತ್ತ, ಸಂತ್ರಸ್ತರ ಪರ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಆದರೆ, ಸಚಿವರು ಹರೀಶ್‌ರ ಆರೋಪಕ್ಕೆ ಸರಿಯಾಗಿ ಪ್ರತಿಕ್ರಿಯೆ ನೀಡುವುದಕ್ಕೆ ಸಿದ್ಧರಿಲ್ಲ ಎಂದು ದೂರಿದರು.ಶಾಸಕ ಹರೀಶರ ತಂದೆ ಸಮಾಧಿ ಎಲ್ಲಿದೆಯೆಂಬುದಾಗಿ ಪ್ರಸ್ತುತವಲ್ಲದ ಪ್ರಶ್ನೆಯನ್ನು ಸಚಿವರು ಮಾಡಿದ್ದಾರೆ. ಹರೀಶರ ಜೊತೆಗೆ ತಾವು ಕ್ರಿಕೆಟ್ ಆಡುತ್ತಿದ್ದೆನೆಂಬ ಬಾಲಿಶ ಹೇಳಿಕೆ ನೀಡಿದ್ದಾರೆ. ಇದೆಲ್ಲವೂ ಜಿಲ್ಲಾ ಮಂತ್ರಿಗಳ ಜಾಣತನದ ನಡೆಯೆಂಬುದು ಸಾಮಾನ್ಯ ಜನರಿಗೂ ಅರ್ಥವಾಗುತ್ತದೆ. ಕಲ್ಲೇಶ್ವರ ಮಿಲ್ ಹಿಂಭಾಗದ ಜಮೀನಿಗೆ ಕಾಡಜ್ಜ ಗ್ರಾಮದ ಕೃಷಿ ಇಲಾಖೆ ಜಮೀನು ಹಾಗೂ ಇತರೆ ಸರ್ಕಾರಿ ಜಮೀನುಗಳಿಂದ 5 ಸಾವಿರಕ್ಕಿಂತ ಅದಿಕ ಲೋಡ್ ಮಣ್ಣನ್ನು ಅಕ್ರಮವಾಗಿ ತುಂಬಿ, ಸಾಗಾಟ ಮಾಡಿದ್ದರ ವಿರುದ್ಧ ಧ್ವನಿ ಎತ್ತಿದ ಶಾಸಕ ಹರೀಶ್‌ರ ವಿರುದ್ಧ ಜಾತಿ ನಿಂದನೆ ಕೇಸ್ ಮಾಡಿಸಿದ್ದು, ಇದು ಶೋಭೆ ತರುವ ಸಂಗತಿಯಲ್ಲ ಎಂದು ಆಕ್ಷೇಪಿಸಿದರು.
ನಾವು ಏನು ಬೇಕಾದರೂ, ಎಂತಹ ಅಕ್ರಮಗಳನ್ನಾದರೂ ಮಾಡುತ್ತೇವೆ. ನೀವು ಅಂತಹದ್ದನ್ನೆಲ್ಲಾ ಪ್ರಶ್ನೆ ಮಾಡಬೇಡಿ ಎಂಬಂತಿದೆ ಸಚಿವರ ವರ್ತನೆ. ಆದರೆ ಹರಿಹರ ಶಾಸಕ ಬಿ.ಪಿ. ಹರೀಶ ಚಿಕ್ಕಬಿದರಿ, ದುಗ್ಗಾವತಿ, ಕಡತಿ ಗ್ರಾಮಗಳ ಬಡ ದಲಿತ, ಹಿಂದುಳಿದ ವರ್ಗಗಳ ರೈತರ ಪರವಾಗಿಯೇ ದ್ವನಿ ಎತ್ತಿರುವುದು. ಮಂತ್ರಿಗಳಿಗೆ ಇದು ನೆನಪಿರಲಿ, ಈ ಬಗ್ಗೆ ಮಂತ್ರಿಗಳು ಚರ್ಚೆಗೆ ಬಂದರೆ ನಾವು ದಾಖಲೆ ಸಮೇತ ಬಹಿರಂಗ ಚರ್ಚೆಗೆ ತಯಾರಿದ್ದೇವೆ ಎಂದು ಹೇಳಿದರು.ಶಾಸಕ ಹರೀಶ್ ಅಭಿಮಾನಿಗಳಾದ ನಾಗೇನಹಳ್ಳಿ ಅಂಜಿನಪ್ಪ, ದುಗ್ಗಾವತಿ ಕೆಂಚಪ್ಪ, ಮಾರುತಿ ಯಾದವ್ ಚಿಕ್ಕ ಬಿದರಿ ಇತರರು ಇದ್ದರು.