ತುರುವೇಕೆರೆ: ಮಾಹಿತಿ ಹಕ್ಕು ಯೋಜನೆಯನ್ನು ಜಾರಿಗೆ ತಂದ ಉದ್ದೇಶ ಸಾರ್ವಜನಿಕರ ಹಕ್ಕು ರಕ್ಷಣೆ ಆಗಲಿ ಹಾಗೂ ಸಾರ್ವಜನಿಕರಿಗೆ ತಾವು ಬಯಸುವ ಮಾಹಿತಿ ಸಾರ್ವಜನಿಕವಾಗಿ ಸಿಗಲಿ ಎಂಬುದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಾಹಿತಿ ಹಕ್ಕು ಯೋಜನೆಯನ್ನು ಕೆಲವರು ದುರುಪಯೋಗಪಡಿಸಿಕೊಂಡು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡ ವಿಷಾದಿಸಿದರು.
ಮಾಹಿತಿ ಹಕ್ಕಿನಡಿ ಕೇಳುವ ಪ್ರಶ್ನೆಗಳಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತಿರಬೇಕು. ಇಂದು ಸಾರ್ವಜನಿಕರ ಮುಂದೆ ಹೊಸ ವಿನ್ಯಾಸದಲ್ಲಿ ರೂಪುಗೊಂಡಿರುವ ಗ್ರಾಮ ಪಂಚಾಯ್ತಿ ಕಟ್ಟಡ ಪುನರ್ ನಿರ್ಮಾಣವಾಗಲು ಮಾಹಿತಿ ಹಕ್ಕಿನಡಿ ಕೇಳಿದ ಪ್ರಶ್ನೆಯೇ ಕಾರಣ ಎಂದರು. ಕೇವಲ ಮೇಲಧಿಕಾರಿಗಳನ್ನು ದೂರುವ ಬದಲು, ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಗಮನಹರಿಸಬೇಕು. ಇಲ್ಲಿಯ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸತೀಶ್ ಕುಮಾರ್ ಹಾಗೂ ಅವರ ತಂಡ, ಗ್ರಾಮ ಪಂಚಾಯ್ತಿಯ ವಿಸ್ತಿರಣಾಧಿಕಾರಿ ಉಮೇಶ್ ಹಾಗೂ ಕಾರ್ಯದರ್ಶಿ ಪುಷ್ಪಾ ರವರ ಸತತ ಹೋರಾಟದಿಂದಾಗಿ ಇಂದು ಉತ್ತಮವಾದ ಕಟ್ಟಡ ನಿರ್ಮಾಣವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ ಜನಪ್ರತಿನಿಧಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಅಧಿಕಾರಿಗಳು ಇದ್ದರೆ ಕುಗ್ರಾಮದಲ್ಲೂ ಉತ್ತಮ ಕಾರ್ಯ ಮಾಡಬಹುದು ಎಂಬುದಕ್ಕೆ ನಮ್ಮ ಗ್ರಾಮ ಪಂಚಾಯ್ತಿಯ ಪಿಡಿಓ ಉಮೇಶ್ ಹಾಗೂ ಕಾರ್ಯದರ್ಶಿ ಪುಷ್ಪಾರವರೇ ಸಾಕ್ಷಿ ಎಂದರು.ಶಾಸಕ ಎಂ.ಟಿ.ಕೃಷ್ಣಪ್ಪನವರು ಮಾವಿನಕೆರೆ ಗ್ರಾಮ ಪಂಚಾಯ್ತಿಯ ಸರ್ವತೋಮಖ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಸುಮಾರು ೧.೩೦ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ. ಇದರಿಂದಾಗಿ ಮಾವಿನಕೆರೆಯಲ್ಲಿ ಉತ್ತಮ ರಸ್ತೆಗಳು, ಚರಂಡಿ ಮತ್ತು ವಿದ್ಯುತ್ ನ ವ್ಯವಸ್ಥೆಯನ್ನು ಮಾಡಲು ಸಾಧ್ಯವಾಗಲಿದೆ ಎಂದು ಸತೀಶ್ ಕುಮಾರ್ ಹೇಳಿದರು. ಕಾರ್ಯಕ್ರಮದಲ್ಲಿ ಪಂಚಾಯ್ತಿಯ ಉಪಾಧ್ಯಕ್ಷೆ ಶಾರದಮ್ಮ, ಸದಸ್ಯರಾದ ಸುಲೋಚನಾ, ರುಕ್ಷಿಣಮ್ಮ, ವಿನೋದಾ, ದ್ರಾಕ್ಷಾಯಣಮ್ಮ, ಮುಖಂಡರಾದ ದೇವರಾಜು, ಗೋವಿಂದರಾಜು, ಲಿಂಗಪ್ಪ, ದಾನಿಗೌಡ, ಕರಡಗೆರೆ ಪ್ರಕಾಶ್, ತಾಲೂಕು ಪಂಚಾಯ್ತಿ ಪಂಚಾಯ್ತಿ ಲೆಕ್ಕಾಧಿಕಾರಿ ಜಯರಾಮ್, ಗ್ರಾಮ ಪಂಚಾಯ್ತಿಯ ವಿಸ್ತಿರಣಾಧಿಕಾರಿ ಉಮೇಶ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪುಷ್ಟಾ ಸ್ವಾಗತಿಸಿದರು. ತೇಜು ವಂದಿಸಿದರು.