ಅಣ್ಣಿಗೇರಿ:
ಪಟ್ಟಣದಲ್ಲಿ ಅಖಿಲ ಕರ್ನಾಟಕ ರೈತ ಸಂಘದ ಹಸಿರು ಸೇನೆಯ ರಾಜ್ಯಾಧ್ಯಕ್ಷ ಮಹಾದೇವಿ ಹುಯಿಲಗೋಳ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಎನ್.ಎಚ್. ಕೋನರಡ್ಡಿ ಅವರಿಗೆ ರೈತರು ಮನವಿ ನೀಡುತ್ತಿದ್ದರು. ಈ ವೇಳೆ ರೈತ ನಾಯಕ ಭದ್ರಾಪುರದ ಹನುಮಂತ ಕಂಬಳಿ ಎಂಬುವರು ರಾಜ್ಯ ಸರ್ಕಾರದ ಕೆಲವು ಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ. ಈ ಮಾತನ್ನು ಕೇಳಿದ ಶಾಸಕ ಕೋನರಡ್ಡಿ ಕೋಪಗೊಂಡು ಮನವಿ ನೀಡುವ ವೇಳೆ ಏನನ್ನೂ ಮಾತನಾಡಬಾರದು ಎಂದು ಹೇಳಿ ನಂತರ ಅವಾಚ್ಯ ಪದ ಬಳಸಿದ್ದಾರೆ. ಇದರಿಂದಾಗಿ ಕೆಲ ರೈತರು ಆಕ್ರೋಶಗೊಂಡರು. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಶಾಸಕರನ್ನು ಅಲ್ಲಿಂದ ಕರೆದುಕೊಂಡು ಹೋದ ಘಟನೆ ನಡೆಯಿತು.
ಹೋರಾಟಕ್ಕೆ ತೀರ್ಮಾನ:
ರೈತರ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಶಾಸಕ ಎನ್.ಎಚ್. ಕೋನರಡ್ಡಿ ಇದೀಗ ರೈತರನ್ನೇ ಅವಾಚ್ಯ ಮಾತುಗಳನ್ನಾಡಿದ್ದಾರೆ. ಇದು ಅವರ ಸ್ಥಾನಕ್ಕೆ ಶೋಭೆ ತರುವಂತಹದಲ್ಲ. ನಾನು ಕೂಡಾ ಹೋರಾಟದ ಹಾದಿಯಿಂದಲೇ ಈ ಸ್ಥಾನಕ್ಕೆ ಬಂದಿದ್ದೇನೆ. ಈ ಕುರಿತು ರೈತರೊಂದಿಗೆ ಚರ್ಚಿಸಿ ಶಾಸಕರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ರೈತ ಹೋರಾಟಗಾರ ಹನುಮಂತಪ್ಪ ಕಂಬಳಿ ತಿಳಿಸಿದರು.