ಜಿ. ಸೋಮಶೇಖರ
ಕನ್ನಡಪ್ರಭ ವಾರ್ತೆ ಕೊಟ್ಟೂರುಇತ್ತೀಚೆಗೆ ಎರಡು ದಿನ ಸುರಿದ ಮಳೆ ತಾಲೂಕಿನ ರೈತರಲ್ಲಿ ಆಶಾಭಾವ ಮೂಡಿಸಿದ್ದು, ಮುಂಗಾರು ಕೈ ಕೊಟ್ಟಿದ್ದು, ಹಿಂಗಾರು ಕೈಹಿಡಿಯಬಹುದು ಎಂದು ಅನ್ನದಾತರು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಸಂಪೂರ್ಣ ಮಳೆಗಾಲ ಮುಗಿದೇ ಹೋಯಿತು ಎಂದು ಹಲುಬುತ್ತಿದ್ದ ರೈತವರ್ಗ ಇತ್ತೀಚೆಗೆ ಮಳೆ ಬಿದ್ದಿದ್ದಕ್ಕೆ ನಿಟ್ಟುಸಿರು ಬಿಟ್ಟಿದೆ. ಇದೀಗ ರೈತರು ಬರಿದಾಗಿದ್ದ ಕೃಷಿಭೂಮಿಗಳಲ್ಲಿ ಮತ್ತೆ ಕೃಷಿ ಚಟುವಟಿಕೆಗಳನ್ನು ಆರಂಭಿಸುವ ತವಕದಲ್ಲಿದ್ದಾರೆ.ತಾಲೂಕಿನಲ್ಲಿ 38523 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಭೂಮಿ ಇದೆ. ಈ ಪೈಕಿ 28 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ಮುಂಗಾರಿಗಾಗಿ ಹಲವು ಬಗೆಯ ಬೆಳೆ ಬಿತ್ತನೆ ಮಾಡಿದ್ದರು. ಆದರೆ ಮಳೆ ಕೈಕೊಟ್ಟಿದ್ದರಿಂದ ಬೆಳೆಹಾನಿಯಾಗಿತ್ತು. ಇದರಿಂದ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದರು.
ಇತ್ತೀಚೆಗೆ ಎರಡು ದಿನ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಹರ್ಷಗೊಂಡಿದ್ದಾರೆ. ರೈತರು ಶೇಂಗಾ ಸೂರ್ಯಕಾಂತಿ, ಕಡಲೆ ಮತ್ತಿತರ ಬಿತ್ತನೆ ಬೀಜಗಳನ್ನು ಬಿತ್ತನೆಗೆ ಜಮೀನನ್ನು ಸಜ್ಜುಗೊಳಿಸುತ್ತಿದ್ದಾರೆ. ತಾಲೂಕಿನಲ್ಲಿ 500 ಹೆಕ್ಟೇರ್ ಪ್ರದೇಶಗಳಲ್ಲಿ ಶೇಂಗಾ, 300 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 1500 ಹೆಕ್ಟೇರ್‌ನಲ್ಲಿ ಕಡಲೆ ಬಿತ್ತನೆ ಕೈಗೊಳ್ಳುವ ನಿರೀಕ್ಷೆ ಇದೆ.ಈ ಬೆಳಗಳಾದರೂ ಸಂಪೂರ್ಣ ಬೆಳೆಯಲು ಆಗಾಗ ಮಳೆ ಬರಲಿ ಎಂಬುದು ರೈತರ ಸದ್ಯದ ನಿರೀಕ್ಷೆ. ಹಾಗಾದರೆ ಮಾತ್ರ ಅಲ್ಪ ಪ್ರಮಾಣದಲ್ಲಾದರೂ ಬೆಳೆ ಕಂಡುಕೊಳ್ಳಬಹುದೆಂಬ ನಿರೀಕ್ಷೆಯನ್ನು ರೈತರು ಇಟ್ಟುಕೊಂಡಿದ್ದಾರೆ. ಹೀಗಾಗಿ ಸಾಲ ಮಾಡಿಯಾದರೂ ಹಿಂಗಾರು ಬಿತ್ತನೆ ಕೈಗೊಳ್ಳುವ ಆಶಯವನ್ನು ರೈತರು ಹೊಂದಿದ್ದಾರೆ. ಉತ್ತಮ ಫಸಲು ಬಂದರೆ ಮುಂಗಾರು ಹಂಗಾಮಿಗಾಗಿ ಮಾಡಿದ್ದ ಸಾಲವನ್ನು ತೀರಿಸಬಹುದು ಎನ್ನುತ್ತಾರೆ ಅನ್ನದಾತರು.ರೈತರ ನಿರೀಕ್ಷೆ:
ಇತ್ತೀಚೆಗೆ ಸುರಿದ ಮಳೆ ರೈತರಲ್ಲಿ ಆಶಾಭಾವನೆಯನ್ನು ಉಂಟುಮಾಡಿದ್ದು, ಸೂರ್ಯಕಾಂತಿ, ಶೇಂಗಾ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಹಿಂಗಾರಿಯಾದರೂ ನಮ್ಮ ಕೈಹಿಡಿಯಲಿ ಎಂಬುದೇ ನಮ್ಮ ನಿರೀಕ್ಷೆ ಎನ್ನುತ್ತಾರೆ ರೈತ ಕಾಳಾಪುರದ ಕೊಟ್ರೇಶ್.ಅಗತ್ಯ ಕ್ರಮ:
ಬಿತ್ತನೆಗೆ ಬೇಕಾಗುವ ಬೀಜ- ರಸಗೊಬ್ಬರವನ್ನು ಕೃಷಿ ಕೇಂದ್ರದ ಗೋದಾಮಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಿಕೊಳ್ಳಲಾಗಿದೆ. ಯಾವುದೇ ರೈತರಿಗೆ ತೊಂದರೆಯಾಗದಂತೆ ಅವಶ್ಯಕತೆಗನುಗುಣವಾಗಿ ಬಿತ್ತನೆ ಬೀಜಗಳನ್ನು ವಿತರಿಸಲು ಕ್ರಮ ಕೈಗೊಂಡಿದ್ದೇವೆ ಎಂದರು ಕೃಷಿ ಅಧಿಕಾರಿ ಶ್ಯಾಮಸುಂದರ್.