ತಂತ್ರಜ್ಞಾನ ಅಭಿವೃದ್ಧಿಗೆ ಪ್ರೇರಣೆ ಕೀಟ ಪ್ರಪಂಚ!

KannadaprabhaNewsNetwork |  
Published : Sep 29, 2026, 02:30 AM IST
ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಗಮನ ಸೆಳೆಯುತ್ತಿರುವ ಕೀಟ ಪ್ರಪಂಚ ಪ್ರದರ್ಶನ  | Kannada Prabha

ಸಾರಾಂಶ

ದೈನಂದಿನ ಜೀವನದಲ್ಲಿ ಕಾಣುವ ಕೀಟಗಳು ಕೀಟ ಪ್ರಪಂಚದ ಒಂದು ಸಣ್ಣ ಭಾಗ ಮಾತ್ರ. ಪರಿಸರ ಸಮತೋಲನ, ಪರಾಗಸ್ಪರ್ಶ ಮತ್ತು ಆಹಾರ ಸರಪಳಿಯಲ್ಲಿ ಕೀಟಗಳ ಪಾತ್ರ ಮಹತ್ವದ್ದಾಗಿದೆ.

ಧಾರವಾಡ:

ಇಲ್ಲಿಯ ಕೃಷಿ ವಿವಿ ಆವರಣದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಕೃಷಿ ಮೇಳದ ಅಂಗವಾಗಿ ಪ್ರದರ್ಶಿತ ವಿಸ್ಮಯಕಾರಿ ಕೀಟ ಪ್ರಪಂಚವು, ಪ್ರಕೃತಿ ಮತ್ತು ಆಧುನಿಕ ತಂತ್ರಜ್ಞಾನದ ನಡುವಿನ ಅದ್ಭುತ ಸಂಬಂಧ ತೆರೆದಿಟ್ಟಿದ್ದು, ತೀವ್ರ ಗಮನ ಸೆಳೆದಿದೆ.

ಕೀಟಗಳ ವೈಶಿಷ್ಟ್ಯಮಯ ರಚನೆ, ಚಲನೆ, ಸಂವೇದನಾ ಸಾಮರ್ಥ್ಯ ಹಾಗೂ ಪರಿಸರಕ್ಕೆ ಹೊಂದಿಕೊಳ್ಳುವ ಗುಣಗಳು, ಈಗ ನಾವು ಸಂಶೋಧಿಸಿರುವ ಕೃತಕ ಬುದ್ಧಿಮತ್ತೆ ಮತ್ತು ಸ್ವಯಂಚಾಲಿತ ತಂತ್ರಜ್ಞಾನಗಳಿಗೆ ಪ್ರೇರಣೆಯಾಗಿವೆ.

ದೈನಂದಿನ ಜೀವನದಲ್ಲಿ ಕಾಣುವ ಕೀಟಗಳು ಕೀಟ ಪ್ರಪಂಚದ ಒಂದು ಸಣ್ಣ ಭಾಗ ಮಾತ್ರ. ಪರಿಸರ ಸಮತೋಲನ, ಪರಾಗಸ್ಪರ್ಶ ಮತ್ತು ಆಹಾರ ಸರಪಳಿಯಲ್ಲಿ ಕೀಟಗಳ ಪಾತ್ರ ಮಹತ್ವದ್ದಾಗಿದೆ. ವಿಶೇಷವಾಗಿ ಡ್ರ್ಯಾಗನ್‌ಫ್ಲೈಯ ಸಂಯುಕ್ತ ಕಣ್ಣುಗಳ ವಿಶಾಲ ದೃಷ್ಟಿಕೋನದಿಂದ ಪ್ರೇರಣೆ ಪಡೆದು ಕ್ಯಾಮೆರಾ ಮತ್ತು ಸೆನ್ಸರ್‌ಗಳ ಹೊಸ ವಿನ್ಯಾಸದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ರಸ್ತೆ, ಅಡಚಣೆ ಮತ್ತು ಸುತ್ತಮುತ್ತಲಿನ ವಸ್ತುಗಳನ್ನು ಗುರುತಿಸುವ ಸ್ವಯಂಚಾಲಿತ ವಾಹನಗಳ ತಂತ್ರಜ್ಞಾನದಲ್ಲಿ ಈ ರೀತಿಯ ಜೈವಿಕ ಪ್ರೇರಣೆ ಉಪಯುಕ್ತವಾಗಿದೆ ಎಂದು ಕೀಟ ಪ್ರಪಂಚ ತೋರಿಸಿಕೊಟ್ಟಿದೆ.

ಬಾವಲಿಗಳ ಪ್ರತಿಧ್ವನಿ-ಸ್ಥಾನ ನಿರ್ಣಯ ಸಾಮರ್ಥ್ಯವು ದೂರ ಮತ್ತು ದಿಕ್ಕು ಗುರುತಿಸುವ ತಂತ್ರಜ್ಞಾನಗಳಿಗೆ ಪ್ರೇರಣೆಯಾಗಿದೆ. ಇರುವೆಗಳ ಸಂಘಟಿತ ಕಾರ್ಯವೈಖರಿಯಿಂದ ‘Ant Colony Optimization’ನಂತಹ ವಿಧಾನಗಳು ಅಭಿವೃದ್ಧಿಯಾಗಿದ್ದು, ಮಾರ್ಗ ಆಯ್ಕೆ ಮತ್ತು ಸಂಕೀರ್ಣ ಸಮಸ್ಯೆಗಳ ಪರಿಹಾರದಲ್ಲಿ ಬಳಸಲಾಗುತ್ತಿವೆ.

ಹೀಗಾಗಿ ಪ್ರಕೃತಿ ಕೇವಲ ಸಂಪನ್ಮೂಲವಲ್ಲ; ಅದು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ನಿರಂತರ ಪ್ರೇರಣೆಯ ಮೂಲವಾಗಿದೆ. ಕೀಟಗಳ ಸೂಕ್ಷ್ಮ ಸಾಮರ್ಥ್ಯಗಳನ್ನು ಅಧ್ಯಯನ ಮಾಡುವ ಮೂಲಕ ಭವಿಷ್ಯದ ಎಐ ತಂತ್ರಜ್ಞಾನಕ್ಕೆ ಇನ್ನಷ್ಟು ಹೊಸ ಸಾಧ್ಯತೆಗಳು ತೆರೆದುಕೊಳ್ಳಬಹುದು ಎಂದು ಕೀಟಶಾಸ್ತ್ರರು ಮಾಹಿತಿ ನೀಡುತ್ತಾರೆ.

ಇದನ್ನು ಹೊರತುಪಡಿಸಿಯೂ ಕೀಟ ಪ್ರದರ್ಶನ ಗಮನ ಸೆಳೆಯುತ್ತಿದೆ. ಕೃಷಿಗೆ ಉಪಯುಕ್ತ ಹಾಗೂ ಹಾನಿಕಾರಕ ಕೀಟಗಳು ಯಾವುವು? ಅವುಗಳ ಜೀವನಕ್ರಮ ಹೇಗಿರುತ್ತದೆ? ಬೆಳೆಗಳ ಮೇಲೆ ಬೀರುವ ಪರಿಣಾಮ ಮತ್ತು ಕೀಟ ನಿಯಂತ್ರಣದ ವೈಜ್ಞಾನಿಕ ವಿಧಾನಗಳ ಕುರಿತು ಚಿತ್ರಗಳ ಸಮೇತ ಪ್ರದರ್ಶನವಿದೆ. ವಿದ್ಯಾರ್ಥಿಗಳು ಹಾಗೂ ಯುವಜನರು ಕೀಟ ಪ್ರದರ್ಶನದತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ವಿವಿಧ ಕೀಟಗಳ ಆಹಾರಗಳನ್ನು ಸಹ ಸಿದ್ಧಪಡಿಸಿ ಇಲ್ಲಿ ಇಡಲಾಗಿದೆ.

ಕೀಟಗಳೆಂದರೆ ಕೀಟಲೆ ಮಾತ್ರವಲ್ಲ!

ಕೀಟಗಳೆಂದರೆ ಕೇವಲ ಉಪದ್ರವಕಾರಿಗಳಲ್ಲ, ಬದಲಿಗೆ ಅವು ಪರಿಸರ ಹಾಗೂ ಕೃಷಿಯ ಅತಿಮುಖ್ಯ ಮಿತ್ರರು ಎಂಬುದು ಸಹ ಈ ಪ್ರದರ್ಶನದ ಉದ್ದೇಶ. ಕೆಂಪು ಚಗಳಿ ಇರುವೆಗಳು ಎಲೆಗಳನ್ನು ರೇಷ್ಮೆ ದಾರದಿಂದ ಹೊಲಿದು ಸುಂದರ ಗೂಡು ನಿರ್ಮಿಸುವುದರೊಂದಿಗೆ, ಹಾನಿಕಾರಕ ಕೀಟಗಳನ್ನು ತಿಂದು ರೈತರಿಗೆ ನೆರವಾಗುತ್ತವೆ. ಅಂತೆಯೇ, ಮಣ್ಣಿನ ಫಲವತ್ತತೆ ಹೆಚ್ಚಿಸುವ ಸೆಗಣಿ ಜೀರುಂಡೆಗಳು ಹಾಗೂ ಸುರಂಗ ತೋಡಿ ಮಣ್ಣಿನಲ್ಲಿ ನೀರು ಇಂಗುವ ಸಾಮರ್ಥ್ಯ ವೃದ್ಧಿಸುವ ಕಪ್ಪು ಸೈನಿಕ ಇರುವೆಗಳ ಪಾತ್ರ ಸ್ಮರಣೀಯ. ಇಲ್ಲಿಯ ಕೀಟಾಹಾರ ಪ್ರದರ್ಶನ ಮತ್ತೊಂದು ವಿಶೇಷತೆ. ಮಿಡತೆ, ಘೇಂಡಾ ದುಂಬಿ ಹಾಗೂ ಕೆಂಪು ಇರುವೆ ಚಟ್ನಿಯಂತಹ ಕೀಟಗಳಿಂದ ತಯಾರಿಸಿದ ಸ್ಯಾಂಡ್‌ವಿಚ್, ಪಿಜ್ಜಾ ಮತ್ತು ಸೂಪ್‌ಗಳು ಸಸ್ಯಾಹಾರಿಗಳ ಹುಬ್ಬೇರಿಸುವಂತೆ ಮಾಡಿದವು. ಈಶಾನ್ಯ ಭಾರತದಲ್ಲಿ ಚಾಲ್ತಿಯಲ್ಲಿರುವ ಈ ಆಹಾರ ಪದ್ಧತಿಯು ಭವಿಷ್ಯದ ಆಹಾರ ಬಿಕ್ಕಟ್ಟಿಗೆ ಪರಿಹಾರವಾಗಬಲ್ಲದು ಎಂಬುದನ್ನು ಇದು ಮುನ್ನೆಲೆಗೆ ತಂದಿತು.ಲೇಖನ - ಮೋಹನ ಮ. ಪಲ್ಲೇದ, ಐಶ್ವರ್ಯಾ ಬಾಳಿಕಾಯಿ, ಕವಿವಿ ಪತ್ರಿಕೋದ್ಯಮ ವಿಭಾಗದ 2ನೇ ವರ್ಷದ ವಿದ್ಯಾರ್ಥಿಗಳು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಕ್ರಮ ಅಗತ್ಯ: ರಮಿತಾ
ಮೂಡ್ಲಕಟ್ಟೆ ನರ್ಸಿಂಗ್‌ ಕಾಲೇಜಿನಿಂದ ಆತ್ಮಹತ್ಯೆ ತಡೆ ಮಾಸಾಚರಣೆ