ತಾಲೂಕಿನ ಕೆಸರೊಳ್ಳಿ ಗ್ರಾಮವನ್ನು ಪ್ರವೇಶಿಸುವ ಕ್ರಾಸ್‌ನಿಂದ ಡೋಮಗೇರಾ ಕ್ರಾಸ್ ವರೆಗೂ ತೆರಳುವ ಸುಪಾ-ಆಣ್ಣಿಗೇರಿ ರಾಜ್ಯ ಹೆದ್ದಾರಿ-28 ಇಂದು ಜವರಾಯನ ದಾರಿಯಾಗಿ ಪರಿಣಮಿಸಿದೆ.
ಕನ್ನಡಪ್ರಭ ವಾರ್ತೆ ಹಳಿಯಾಳ
ತಾಲೂಕಿನ ಕೆಸರೊಳ್ಳಿ ಗ್ರಾಮವನ್ನು ಪ್ರವೇಶಿಸುವ ಕ್ರಾಸ್‌ನಿಂದ ಡೋಮಗೇರಾ ಕ್ರಾಸ್ ವರೆಗೂ ತೆರಳುವ ಸುಪಾ-ಆಣ್ಣಿಗೇರಿ ರಾಜ್ಯ ಹೆದ್ದಾರಿ-28 ಇಂದು ಜವರಾಯನ ದಾರಿಯಾಗಿ ಪರಿಣಮಿಸಿದೆ. ಈ ಮಾರ್ಗದಲ್ಲಿ ವಾರಕ್ಕೊಮ್ಮೆ-ಅಥವಾ ತಪ್ಪಿದ್ದರೇ ತಿಂಗಳಿಗೊಮ್ಮೆ ರಸ್ತೆ ಅಪಘಾತವಾಗುವುದು ನಿಶ್ಚಿತ. ನೆರೆಯ ಜೋಯಿಡಾ-ದಾಂಡೇಲಿ ತಾಲೂಕಿನ ಪರಿಸರ ಪ್ರವಾಸಿ ತಾಣಗಳಿಗೆ ಮುಖ್ಯ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿರುವುದರಿಂದ ಈ ಹೆದ್ದಾರಿಯಲ್ಲಿ ವಾಹನಗಳ ಮತ್ತು ಪ್ರವಾಸಿಗರ ಸಂಖ್ಯೆ ತೀರಾ ಹೆಚ್ಚು. ಪ್ರತಿ ವರ್ಷ ಈ ರಸ್ತೆಯ ಸುಧಾರಣೆಯಾಗುತ್ತದೇ ಹೊರತು ಅಪಘಾತ ಸಂಭವಿಸಲು ಮುಖ್ಯ ಕಾರಣವಾದ ಕಡಿದಾದ ರಸ್ತೆ ತಿರುವುಗಳನ್ನು ಸರಿಪಡಿಸುವ ಕಾರ್ಯವಂತೂ ಮಾಡಲು ಆಡಳಿತ ಮುಂದಾಗದೇ ಇರುವುದರಿಂದ ಅನಾಹುತಗಳು-ಅಪಘಾತಗಳು ಮುಂದುವರೆದಿವೆ.ಅಪಾಯಕಾರಿ ರಸ್ತೆ ತಿರುವು:ಕೆಸರೊಳ್ಳಿ ಗ್ರಾಮಕ್ಕೆ ಪ್ರವೇಸಿಸುವ ಮಾರ್ಗ(ಕ್ರಾಸ)ದಿಂದ ಹಿಡಿದು ಡೊಮಗೇರಾ ಗ್ರಾಮಕ್ಕೆ ಸಂಪರ್ಕಿಸುವ ಮಾರ್ಗವಂತೋ ಬಾರಿ ತಿರುವುಗಳಿಂದ ಕೂಡಿದೆ. ರಸ್ತೆಗಳ ತಿರುವಿನಲ್ಲಿಯೇ ಬೃಹತ್ ಮರಗಳಿವೆ. ಮೇಲಾಗಿ ರಸ್ತೆಯು ಚಿಕ್ಕದಾಗಿದ್ದು, ರಸ್ತೆ ಅಂಚಿನಲ್ಲಿ ಹಾಕಿರುವ ಮಣ್ಣು ಹರಿದು ಹೋಗಿರುವುದರಿಂದ ಎದುರುಗಡೆಯಿಂದ ವಾಹನ ಬರುತ್ತಿರುವುದನ್ನು ಕಂಡು ಸೈಡ್ ನೀಡಲು ಡಾಂಬರ್ ರಸ್ತೆಯಿಂದ ತುಸು ಕೆಳಗಿಳಿದರೇ ಸಾಕು, ಅದೃಷ್ಟ ಸರಿಯಾಗಿದ್ದರೇ ಬಚಾವ್ ಆಗುತ್ತಿರಿ. ಇದೇ ಮಾರ್ಗದಲ್ಲಿ ಬಾರಿ ಸರಕುಗಳನ್ನು ತುಂಬಿದ ವಾಹನಗಳು, ಪ್ರವಾಸಿಗರ ವಾಹನಗಳ ಓಡಾಟ ಹೆಚ್ಚು. ಹೊರಗಡೆಯಿಂದ ಆಗಮಿಸುವ ಪ್ರವಾಸಿಗರಿಗೆ ಈ ರಸ್ತೆಯಲ್ಲಿನ ಅಪಾಯಕಾರಿ ತಿರುವಿನ ಬಗ್ಗೆ ಅರಿವು ಕಡಿಮೆ, ಕಳೆದ ವರ್ಷದಿಂದ ಈವರೆಗೆ ಹಲವಾರು ಅಪಘಾತಗಳು ಸಂಭವಿಸಿವೆ. ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಹಲವರಿಗೆ ಗಾಯಗಳಾಗಿವೆ. ಕಳೆದ ವಾರವಷ್ಟೇ ಹದಿನಾರರ ಪ್ರಾಯದ ಯುವಕನೊರ್ವ ರಸ್ತೆ ತಿರುವನ್ನು ಗಮನಿಸದ ಪರಿಣಾಮ ಬೈಕ್ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಈ ಮಾರ್ಗದಲ್ಲಿ ಸಂಚರಿಸುವ ಓಡಾಡುವ ದ್ವಿಚಕ್ರ ವಾಹನಗಳಿಗೂ ಹಾಗೂ ನಾಲ್ಕು ಚಕ್ರಗಳ ವಾಹನಗಳಿಗೂ ಇದೊಂದು ಡೆಡ್ಲಿ ರಸ್ತೆಯಾದಂತಿದೆ. ಮಾಜಿ ಶಾಸಕರ ವಾಹನ ಅಪಘಾತ:ಹತ್ತು ವರ್ಷಗಳ ಹಿಂದೇ ಇದೇ ಮಾರ್ಗದಲ್ಲಿ ಹಳಿಯಾಳದತ್ತ ಬರುತ್ತಿದ್ದ ಮಾಜಿ ಶಾಸಕರ ವಾಹನವು ಅಪಘಾತಕ್ಕೊಳಗಾಗಿ ಅವರು ಪವಾಡ ರೀತಿಯಲ್ಲಿ ಬಚಾವಾಗಿದ್ದರು. ಆ ಅಪಘಾತದ ದೃಶ್ಯ ಕಂಡು ಬೆಚ್ಚಿಬಿದ್ದ ಸಾರ್ವಜನಿಕರು ರಸ್ತೆ ಸುಧಾರಣೆಗೆ ಧ್ವನಿಯೆತ್ತಿದ್ದರೂ, ಯಾರೂ ಸ್ಪಂದಿಸಲಿಲ್ಲ. ಅಂದಿನಿಂದಲೂ ಈ ರಸ್ತೆಯು ಯಥಾ ಸ್ಥಿತಿಯಲ್ಲಿಯೇ ಇದೆ. ಪ್ರತಿ ಬಾರಿ ರಸ್ತೆ ಡಾಂಬರೀಕರಣ ಮಾಡಲಾಗುತ್ತದೇ ಹೊರತು, ಅಪಾಯಕಾರಿ ತಿರುವಿನ ಸುಧಾರಣೆಗೆ ಯಾರೂ ಮುಂದಾಗುತ್ತಿಲ್ಲ.
ಈ ರಸ್ತೆಯಲ್ಲಿ ನಡೆದಿರುವ ಅಪಘಾತಗಳು ಇಲಾಖೆಯ ಗಮನಕ್ಕೆ ಬಂದಿದೆ. ಈ ರಸ್ತೆಯನ್ನು ಅಪಘಾತರಹಿತ ರಸ್ತೆಯನ್ನಾಗಿಸಲು ಯೋಜನೆ ರೂಪಿಸುತ್ತಿದ್ದೇವೆ. ತುರ್ತು ಪರಿಹಾರ ಕ್ರಮವಾಗಿ ಈ ಅಪಾಯಕಾರಿ ರಸ್ತೆಯುದ್ದಕ್ಕೂ ಪ್ರಯಾಣಿಕರನ್ನೂ ಸುಗಮ ಸಂಚಾರಕ್ಕಾಗಿ ಜಾಗೃತಿ ಮೂಡಿಸುವ ನಾಮಫಲಕಗಳನ್ನು ಈ ವಾರವೇ ಅಳವಡಿಸಲಾಗುವುದು ಎಂದು ಹಳಿಯಾಳ ಪಿಡಬ್ಲ್ಯುಡಿ ಉಪವಿಭಾಗದ ಎಇಇ ಸಂತೋಷ ಅಥಣಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.