ಅಜೀಜಅಹ್ಮದ ಬಳಗಾನೂರ
ಈ ಮಡ್ಡಿಯೊಳಗೆ ಕಾಲಿಟ್ಟರೆ ಸಾಕು ಕಿತ್ತುಹೋದ ಕಿಟಕಿ, ಬಾಗಿಲು, ಎಲ್ಲೆಂದರಲ್ಲಿ ಬಿದ್ದಿರುವ ಸರಾಯಿ ಪಾಕೆಟ್‌ಗಳು, ಮುರುಕು ಕಟ್ಟಡಗಳೇ ಕಾಣಸಿಗುತ್ತವೆ. ಇದು ಹುಬ್ಬಳ್ಳಿಯಿಂದ ಕೇವಲ 8 ಕಿಮೀ ಹಾಗೂ ಧಾರವಾಡದಿಂದ 15 ಕಿಮೀ ದೂರದಲ್ಲಿ ಪಾಲಿಕೆ ಅಧೀನದ 67 ಎಕರೆ ಜಾಗ ಹೊಂದಿರುವ ಶಿವಳ್ಳಿ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ (ಮಡ್ಡಿಗುಡ್ಡ)ದ ದುಸ್ಥಿತಿ.
ಮಹಾನಗರದಲ್ಲಿ ಮುಂದಿನ 20-25 ವರ್ಷಗಳ ಬಳಿಕ ಉದ್ಭವಿಸಬಹುದಾದ ತ್ಯಾಜ್ಯ ವಿಲೇವಾರಿ ಸಮಸ್ಯೆ ಸರಿದೂಗಿಸುವ ಭವಿಷ್ಯದ ಕಲ್ಪನೆಯನ್ನಿಟ್ಟುಕೊಂಡು ನಗರದಿಂದ ಕೇವಲ 8 ಕಿಮೀ ದೂರದಲ್ಲಿರುವ ಹೆಬ್ಬಳ್ಳಿ ಗ್ರಾಪಂ ವ್ಯಾಪ್ತಿಯ ಪಾಲಿಕೆ ಅಧೀನದ ಜಾಗದಲ್ಲಿ ನಿರ್ಮಿಸಲಾಗಿರುವ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ಸೂಕ್ತ ನಿರ್ವಹಣೆ ಇಲ್ಲದೇ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.ಮಹಾನಗರದಲ್ಲಿ ಶೇಖರಣೆಯಾಗುವ ಘನತ್ಯಾಜ್ಯ ವಿಲೇವಾರಿಗೆ ಬೇಕಾದ ಜಾಗವನ್ನು 2007-08 ರಲ್ಲಿಯೇ ಹೆಬ್ಬಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಪಾಲಿಕೆಯ 67 ಎಕರೆ ವಿಶಾಲವಾದ ಜಾಗವನ್ನು ಗುರುತಿಸಿ ಇಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ನಿರ್ಮಾಣ ಮಾಡಬೇಕು ಎಂಬ ಸಂಕಲ್ಪ ತೊಟ್ಟು ಅದಕ್ಕೆ ಬೇಕಾದ ಎಲ್ಲ ಕಾಮಗಾರಿ ಕೈಗೊಂಡು ಸಿದ್ಧಪಡಿಸಲಾಗಿತ್ತು.
ಗ್ರಾಮಸ್ಥರಿಗೆ ಇರಲಿಲ್ಲ ಮಾಹಿತಿ: ಪಾಲಿಕೆಯಿಂದ ಮಡ್ಡಿಗುಡ್ಡದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಇಲ್ಲಿ ಖಾಸಗಿ ಕಂಪನಿಯೊಂದು ಬರಲಿದೆ ಎಂದು ಸುಳ್ಳುಹೇಳಿ ಸುತ್ತಮುತ್ತಲಿನ ಗ್ರಾಮಸ್ಥರನ್ನು ಬಳಸಿಕೊಂಡು ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಗುಡ್ಡದ ಸುತ್ತಲೂ ತಡೆಗೋಡೆ ನಿರ್ಮಾಣ, ಸಿಬ್ಬಂದಿಗಳು ತಂಗಲು ಬೇಕಾದ ಮನೆಗಳು ಹಾಗೂ ತ್ಯಾಜ್ಯವಿಲೇವಾರಿ ಯಂತ್ರಗಳನ್ನು ಅಳವಡಿಸಲು ಬೇಕಾದ ಬೃಹತ್ ಪ್ರಮಾಣದ ಘಟಕ ನಿರ್ಮಿಸಲಾಯಿತು. 2009ರಲ್ಲಿ ಶಾಸಕಿ ಸೀಮಾ ಮಸೂತಿ, ಪಾಲಿಕೆ ಮೇಯರ್ ಆಗಿದ್ದ ರಾಧಾಬಾಯಿ ಸಫಾರೆ ಅವರು ಹು-ಧಾ ಮಹಾನಗರ ಪಾಲಿಕೆ ಶಿವಳ್ಳಿ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ಉದ್ಘಾಟಿಸಿದ ಬಳಿಕ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಗೊತ್ತಾಯಿತು.
ಅನೈತಿಕ ಚಟುವಟಿಕೆ ತಾಣ: ಪ್ರತಿಭಟನೆಯಿಂದಾಗಿ ಸಂಪೂರ್ಣವಾಗಿ ಬಂದಾದ ಈ ಮಡ್ಡಿಗುಡ್ಡ ನಿರ್ವಹಣೆಯಿಲ್ಲದೇ ಇಂದು ಹಾಳುಕೊಂಪೆಯಾಗಿದೆ. ಇದಕ್ಕೆ ಹೋಗಲು ಇರುವ ರಸ್ತೆಯು ಸಂಪೂರ್ಣ ಹಾಳಾಗಿದೆ. ಈ ಹಿಂದೆ ಇಲ್ಲಿ ನೇಮಿಸಿದ್ದ ಕಾವಲು ಸಿಬ್ಬಂದಿಗಳಿಗೆ ಸಮರ್ಪಕ ವೇತನ ನೀಡದಿರುವುದರಿಂದ ಕಳೆದ ಒಂದೂವರೆ ವರ್ಷದಿಂದ ಇದರ ನಿರ್ವಹಣೆಗೆ ಯಾವೊಬ್ಬ ಸಿಬ್ಬಂದಿಯೂ ಇಲ್ಲ. ಸಾರ್ವಜನಿಕರು ಹಗಲಿನಲ್ಲೂ ಇಲ್ಲಿಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
ಸುತ್ತಮುತ್ತಲಿನ ಗ್ರಾಮದವರಿಗೆ ತೊಂದರೆಯಾಗದಂತಹ ಕಾರ್ಯಚಟುವಟಿಕೆಗಳನ್ನು ಪಾಲಿಕೆ ಇಲ್ಲಿ ಮಾಡಲಿ ನಮ್ಮದೇನೂ ಅಭ್ಯಂತರವಿಲ್ಲ. ಮತ್ತೇನಾದರೂ ತ್ಯಾಜ್ಯವಿಲೇವಾರಿಗೆ ಮುಂದಾದರೆ ಈ ಮಡ್ಡಿಗುಡ್ಡಕ್ಕೆ ಪಾಲಿಕೆ ವಾಹನ ಬರದಂತೆ ತಡೆಯುತ್ತೇವೆ ಎಂದು ಶಿವಳ್ಳಿ ಗ್ರಾಮದವರಾದ ಮೆಹಬೂಬಪಾಷಾ, ಮನೋಹರ ಹೇಳಿದರು.