೧೦ ಗಂಟೆ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸುಲಭದ ವಿಷಯವಲ್ಲ: ನಟ ಹಂಸರಾಜ್ಕನ್ನಡಪ್ರಭವಾರ್ತೆ ಚನ್ನಪಟ್ಟಣ
ಇತ್ತೀಚಿಗೆ ಜನರು ಸಿನಿಮಾ, ಧಾರಾವಾಹಿಗಳ ವ್ಯಾಮೋಹಕ್ಕೆ ಒಳಗಾಗಿದ್ದು, ರಂಗಭೂಮಿಯತ್ತ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಆದರೆ, ದ್ರೌಪದಿ ವಿಜಯ ಅಥವಾ ಶ್ರೀ ಕೃಷ್ಣ ಸಂಧಾನ ಪೌರಾಣಿಕ ನಾಟಕ ಪ್ರದರ್ಶಿಸಿದ ಭಾರತ್‌ವಿಕಾಸ್ ಪರಿಷದ್‌ನ ಮಹಿಳಾ ಸದಸ್ಯರು ಪುರುಷ ಕಲಾವಿದರನ್ನು ಮೀರಿಸುವಂತೆ ಅಭಿಯಯಿಸುವ ಜತೆಗೆ ಸುಮಾರು ೧೦ ಗಂಟೆ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದು ಶ್ಲಾಘನೀಯ ಎಂದು ಕಿರುತೆರೆ ಹಾಗೂ ಹಿರಿತೆರೆ ನಟ ತಾಲೂಕಿನ ಉಜ್ಜನಹಳ್ಳಿಯ ಹಂಸರಾಜ್ ಅಭಿಪ್ರಾಯಪಟ್ಟರು.ಇತ್ತೀಚಿಗೆ ನಗರದಲ್ಲಿ ದ್ರೌಪದಿ ವಿಜಯ ಅಥವಾ ಶ್ರೀ ಕೃಷ್ಣ ಸಂಧಾನ ಪೌರಾಣಿಕ ನಾಟಕವನ್ನು ಯಶಸ್ವಿಯಾಗಿ ಪ್ರದರ್ಶಿಸಿದ ಭಾರತ್‌ವಿಕಾಸ್ ಪರಿಷದ್‌ನ ಮಹಿಳಾ ಸದಸ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಹಿರಿತೆರೆ, ಕಿರಿತೆರೆಯಲ್ಲಿ ಒಂದು ದೃಶ್ಯ ತೆಗೆಯಲು ಹತ್ತಾರೂ ಟೇಕ್‌ಗಳನ್ನು ತೆಗೆಯಬೇಕು. ಆದರೆ, ನಾಟಕ ಪ್ರದರ್ಶನ ಆಗಲ್ಲ. ಒಂದೇ ಬಾರಿ ಪ್ರದರ್ಶನ ನೀಡಬೇಕು. ಇಂಥ ಕ್ಲಿಷ್ಟಕರ ನಾಟಕವನ್ನು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಪ್ರದರ್ಶಿಸಿದ್ದು, ಮಹಿಳೆಯರ ಅಭಿನಯ ಸಾಮರ್ಥ್ಯವನ್ನು ವರ್ಣಿಸಲು ಅಸಾಧ್ಯ ಎಂದು ಹೇಳಿದರು.
ಸಾಂತ್ವನ ಸಂಗೀತ ಪೌಂಡೇಷನ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷೆ ಪವಿತ್ರಾ ಪ್ರಭಾಕರ್ ರೆಡ್ಡಿ ಮಾತನಾಡಿ, ರಂಗಭೂಮಿ ನಾಟಕದಲ್ಲಿ ಎಲ್ಲಾ ಪಾತ್ರಗಳನ್ನು ಮಹಿಳೆಯರೇ ನಿರ್ವಹಿಸಿ ಪುರುಷ ಪ್ರಧಾನ ಪಾತ್ರಕ್ಕೂ ನಾವು ಸೈ ಎನ್ನಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ನಾಟಕ ಪ್ರದರ್ಶಿಸಿದ ಮಹಿಳೆಯರು ಹುಟ್ಟು ಕಲಾವಿದರಲ್ಲ. ಪ್ರತಿಯೊಬ್ಬರೂ ಒಂದೊಂದು ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೂ ಎಲ್ಲರೂ ಒಟ್ಟಾಗಿ ಪುರುಷ ಪ್ರಧಾನ ಪೌರಾಣಿಕ ನಾಟಕವನ್ನು ಕಲಿತು ಮೊದಲ ಪ್ರದರ್ಶನದಲ್ಲೇ ಇತಿಹಾಸ ನಿರ್ಮಾಣ ಮಾಡಿದ್ದಾರೆ ಎಂದರೆ ಅವರ ತಾಳ್ಮೆ, ಶ್ರದ್ಧೆ, ಸಂಯಮ ಎಲ್ಲವನ್ನು ನಾವು ಮೆಚ್ಚಬೇಕು ಎಂದು ತಿಳಿಸಿದರು. ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ ಮಾತನಾಡಿ, ಮಹಿಳೆಯರ ಸಾಧನೆಯನ್ನು ಗುರುತಿಸುವುದೆ ನಮ್ಮ ಪುಣ್ಯದ ಕೆಲಸ. ಇಂತಹ ದಿಟ್ಟ ಮಹಿಳೆಯರನ್ನು ಕುಟುಂಬದವರು ಪ್ರೋತ್ಸಾಹಿಸುವುದು ದೊಡ್ಡ ಸಾಧನೆ ಎಂದರು.ಈ ವೇಳೆ ನಾಟಕದ ಪಾತ್ರದಾರಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ನಿಂಗೇಗೌಡ (ಎನ್‌ಜಿ), ರಂಗಭೂಮಿ ಕಲಾವಿದರಾದ ಗುರುಮಾದಯ್ಯ, ಎಲೇಕೇರಿ ಮಂಜುನಾಥ್, ಚಕ್ಕೆರೆ ವಿಜೇಂದ್ರ, ವಸಂತ್ ಕುಮಾರ್ ಇತರರಿದ್ದರು.