ಸಾಹಿತ್ಯ ಲೋಕದಲ್ಲಿ ಅನೇಕರ ಕೃತಿಗಳಿಗೆ ಜ್ಞಾನಪೀಠ ಲಭಿಸಿಲ್ಲ ಎಂಬ ಕೊರಗಿರಬಾರದು. ಸಾಹಿತ್ಯ ದಿಗ್ಗಜರ ಹೆಸರೇ ಒಂದು ಜ್ಞಾನಪೀಠ ಪ್ರಶಸ್ತಿ ಇದ್ದಂತೆ ಎಂದು ಬಸವ ಮಂದಿರ ಬಸವತತ್ವ ಪೀಠದ ಶ್ರೀ ಡಾ. ಮರುಳಸಿದ್ದ ಸ್ವಾಮೀಜಿ ನುಡಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಸಾಹಿತ್ಯ ಲೋಕದಲ್ಲಿ ಅನೇಕರ ಕೃತಿಗಳಿಗೆ ಜ್ಞಾನಪೀಠ ಲಭಿಸಿಲ್ಲ ಎಂಬ ಕೊರಗಿರಬಾರದು. ಸಾಹಿತ್ಯ ದಿಗ್ಗಜರ ಹೆಸರೇ ಒಂದು ಜ್ಞಾನಪೀಠ ಪ್ರಶಸ್ತಿ ಇದ್ದಂತೆ ಎಂದು ಬಸವ ಮಂದಿರ ಬಸವತತ್ವ ಪೀಠದ ಶ್ರೀ ಡಾ. ಮರುಳಸಿದ್ದ ಸ್ವಾಮೀಜಿ ನುಡಿದರು.ಕಲ್ಯಾಣ ನಗರ ಸಮೀಪ ಚನ್ನಮ್ಮ ಮರಿಯಪ್ಪ ಸಭಾಂಗಣದಲ್ಲಿ ತಾಲೂಕು ಸಿರಿಗನ್ನಡ ವೇದಿಕೆಯಿಂದ ನಡೆದ ಶ್ರಾವಣ ನುಡಿಸಿರಿ ಸಮಾರೋಪ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಶ್ರೀಗಳು ಆರ್ಶೀವಚನ ನೀಡಿದರು.ಇತ್ತೀಚಿನ ಕಾಲಮಾನದಲ್ಲಿ ಸಾಹಿತ್ಯ ಅಭಿರುಚಿ ಹಾಗೂ ಕನ್ನಡಾಭಿಮಾನದ ಬೆಳವಣಿಗೆ ಕ್ಷೀಣಿಸುತ್ತಿದೆ. ನೆರೆ ರಾಜ್ಯದ ಪ್ರವಾಸಿಗರಿಗೆ ಕನ್ನಡವನ್ನು ಕಲಿಸುವ ಬದಲಾಗಿ, ಆ ಭಾಷೆಯಲ್ಲೇ ಉತ್ತರಿಸುವ ಪ್ರವೃತ್ತಿ ನಡೆಯುತ್ತಿದೆ. ಹೀಗಾಗಿ ಕನ್ನಡಿಗರು ಭಾಷೆಯ ಮೇಲೆ ಹಿಡಿತ ಕಳೆದುಕೊಳ್ಳುತ್ತಿದ್ದು ಭಾಷೆ ಬೆಳವಣಿಗೆ ಬಗ್ಗೆ ಯೋಚಿಸಬೇಕಿದೆ ಎಂದರು.ಪೂರ್ವಜರ ಕಾಲದಲ್ಲಿ ಅನಕ್ಷರಸ್ಥತೆ ಇದ್ದರೂ ಕನ್ನಡಾಭಿಮಾನ ತುಂಬಿ ತುಳುಕುತ್ತಿತ್ತು. ಕೆಲವು ಸರಳ ಪದಗಳನ್ನು ಸ್ವಚ್ಛಂದವಾಗಿ ಉಚ್ಚರಿಸಲಾಗುತ್ತಿತ್ತು. ಆಧುನಿಕತೆ ಬೆಳೆದಂತೆ ಭಾಷೆಯ ಸೊಗಡು ಮರೆಯಾಗುತ್ತಿದೆ. ಪ್ರತಿಯೊಂದು ಸಣ್ಣಪುಟ್ಟ ಪದಗಳು ಆಂಗ್ಲಭಾಷೆ ಆಕ್ರಮಣದಿಂದ ಕಣ್ಮರೆಯಾಗಿದೆ. ಹೀಗಾಗಿ ಮಕ್ಕಳಿಗೆ ಬಾಲ್ಯದಿಂದಲೇ ಭಾಷಾಭಿಮಾನ ಮೂಡಿಸಬೇಕು ಎಂದರು.ಕನ್ನಡದ ನಿಘಂಟು, ಶಬ್ದಕೋಶದ ಬಗ್ಗೆ ಅಧ್ಯಯನ ತಿಳಿವಳಿಕೆ ಇರಬೇಕು. ಅಪ್ಪ ಅಮ್ಮ ಎನ್ನುವ ಬದಲು ಡ್ಯಾಡಿ ಮಮ್ಮಿ, ಉಪ್ಪು ಸಾಸಿವೆ ಬದಲಿಗೆ ಸಾಲ್ಟ್ ಮುಸ್ಟಾಡ್ ಎಂದು ಕರೆಯುವ ಕಾಲಘಟ್ಟದಲ್ಲಿ ಇದ್ದೇವೆ. ಇದೇ ರೀತಿ ಸಣ್ಣ ಪುಟ್ಟ ಪದಗಳು ಹರಿದಾಡಿದರೆ ಕನ್ನಡ ಬೆಳವಣಿಗೆ ಅಸಾಧ್ಯ. ಹೀಗಾಗಿ ಕನ್ನಡವನ್ನು ದಿನಪ್ರತಿ ಧ್ಯಾನ, ಉಸಿರೆಂದು ಭಾವಿಸಿ ಬಳಸಬೇಕು ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿರಿಗನ್ನಡ ವೇದಿಕೆ ಗೌರವಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ನಮ್ಮಗಳ ಕಾಲದಲ್ಲಿ ಭಾಷೆ ಕಟ್ಟುವ ಕೆಲಸ ಮಾಡಲಾಗುತ್ತಿದೆ. ಇದನ್ನು ಭವಿಷ್ಯದಲ್ಲಿ ಉಳಿಸಲು ಹಾಗೂ ಒಳಪು ಮೂಡಿಸಲು ಯುವ ಸಮೂಹಕ್ಕೆ ಭಾಷೆಯ ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸ ಪರಿಚಯಿಸಬೇಕು ಎಂದು ಹೇಳಿದರು.ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಂ.ಆರ್. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಾಷೆಯ ಆಚಾರ ವಿಚಾರ, ಮೌಲ್ಯ ಹಾಗೂ ಸಂಸ್ಕೃತಿ ತಿಳಿಸುವ ಕಾರ್ಯದಲ್ಲಿ ವೇದಿಕೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿರಿಗನ್ನಡ ವೇದಿಕೆ ತಾಲೂಕು ಅಧ್ಯಕ್ಷ ಚಂದ್ರಯ್ಯ, ಸಾಹಿತ್ಯದ ವಿಷಯವನ್ನು ಮೆಲುಕು ಹಾಕುವ ನಿಟ್ಟಿನಲ್ಲಿ ಪಾಲಕರು ಇಂಥ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆತಂದಾಗ ಮಾತ್ರ ಸಾಹಿತ್ಯದ ಸೌಗಂಧ ಎಲ್ಲೆಡೆ ಪಸರಿಸಲು ಸಾಧ್ಯ ಎಂದು ಹೇಳಿದರು.ಇದೇ ವೇಳೆ ಸಾಹಿತಿ ಡಿ.ಎಂ. ಮಂಜುನಾಥಸ್ವಾಮಿ, ಡಿವಿಜಿ ಬದುಕು - ಬರಹ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸಿರಿಗನ್ನಡ ವೇದಿಕೆ ಕಾರ್ಯದರ್ಶಿ ಮದನ್, ಸಂಘಟನಾ ಕಾರ್ಯದರ್ಶಿ ಸುರೇಶ್ ನೇರ್‍ಲಿಗೆ, ಕಸಾಪ ತಾಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಂ. ಲೋಕೇಶ್, ಬರೋಡ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಜಗದೀಶ್ ಪ್ರಸಾದ್, ಲಕ್ಷ್ಮಮ್ಮ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.