- ದಾವಣಗೆರೆ ಜಿಲ್ಲೆಯಲ್ಲಿ ಎಸ್ಐಆರ್ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ: ಜಿ.ಎಂ.ಗಂಗಾಧರ ಸ್ವಾಮಿ ಸ್ಪಷ್ಟನೆ - - -
ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಪರಿಶೀಲನೆ ಕಾರ್ಯವು ಜಿಲ್ಲೆಯಲ್ಲಿ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದೆ. ಯಾವುದೇ ಜೀವಂತ ಹಾಗೂ ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 7086 ಮತದಾರರಿಗೆ ನೋಟಿಸ್ ನೀಡಿದ್ದು, ಈ ಪೈಕಿ 6733 ಮತದಾರರ ಸ್ವತಃ ಮರುಪರಿಶೀಲನೆ ಹಾಗೂ ವಿಚಾರಣೆ ಪೂರ್ಣಗೊಳಿಸಲಾಗಿದೆ ಎಂದರು.ವಿಚಾರಣೆ ನಡೆಸಿ, ಈಗಾಗಲೇ ಬೇರೆಡೆ ನೋಂದಣಿ ಆಗಿರುವ (ದ್ವಿಪ್ರತಿ/ ಡೂಪ್ಲಿಕೇಟ್) 353 ವಿಚಾರಣೆಗೆ ಬಾಕಿ ಇದೆ. ವಿಚಾರಣೆ ನಡೆಸಿ ದ್ವಿಪ್ರತಿ, ಮರಣ ಹೊಂದಿದವರ, ಸ್ಥಳಾಂತರಗೊಂಡ ಹಾಗೂ ಇತರೆ ಕಾರಣಗಳಿಂದ 112 ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಜಗಳೂರು ತಾಲೂಕಿನಲ್ಲಿ 59 ಜನ, ಹರಿಹರದಲ್ಲಿ 18, ದಾವಣಗೆರೆ ಉತ್ತರದಲ್ಲಿ 15, ದಾವಣಗೆರೆ ದಕ್ಷಿಣದಲ್ಲಿ 14, ಹೊನ್ನಾಳಿಯಲ್ಲಿ 3, ಚನ್ನಗಿರಿಯಲ್ಲಿ 1 ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅವರು ತಿಳಿಸಿದರು.
ನಮೂನೆ 6, 6ಎ, 7 ಹಾಗೂ 8 ಸೇರಿದಂತೆ ಒಟ್ಟು 24,012 ಅರ್ಜಿ ಸ್ವೀಕೃತವಾಗಿವೆ. ಪರಿಶೀಲನೆ ನಂತರ 22,200 ಅರ್ಹ ಅರ್ಜಿಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಪ್ರಸ್ತುತ 2,142 ಅರ್ಜಿ ಪ್ರಕ್ರಿಯೆಯಲ್ಲಿದ್ದು, ಶೀಘ್ರವೇ ವಿಲೇವಾರಿ ಮಾಡಲಾಗುವುದು. ಈ ಎಲ್ಲ ನಮೂನೆಗಳ ವಿಲೇವಾರಿಯನ್ನು ಅಧಿಕಾರಿಗಳು ಭೌತಿಕವಾಗಿ ಪರಿಶೀಲಿಸಿಯೇ ನಡೆಸುತ್ತಿದ್ದಾರೆ. ಆಧಾರ್ ಕಾರ್ಡ್ ಒಂದನ್ನೇ ಆಧಾರವಾಗಿಟ್ಟುಕೊಂಡು ಫಾರ್ಮ್-6 ಸ್ವೀಕರಿಸುವುದಿಲ್ಲ ಎಂದು ವಿವರಿಸಿದರು.
ಫಾರ್ಮ್-6ರಡಿ ಅರ್ಜಿ ಸಲ್ಲಿಸುವಾಗ ಕೇವಲ ಆಧಾರ್ ಕಾರ್ಡ್‌ಗೆ ಸೀಮಿತವಾಗದೇ, ತಂದೆ-ತಾಯಿ ಗುರುತಿನ ದಾಖಲೆ, ಬಾಡಿಗೆ ಕರಾರು ಪತ್ರ, ಮನೆ ಅಥವಾ ಆಸ್ತಿ ದಾಖಲೆಗಳು, ಶಾಲಾ/ ಕಾಲೇಜು ಗುರುತಿನ ಚೀಟಿ, ಜನ್ಮ ದಿನಾಂಕ ಪ್ರಮಾಣಪತ್ರ ಅಥವಾ ಎಸ್ಎಸ್ಎಲ್‌ಸಿ ಅಂಕಪಟ್ಟಿ ಸೇರಿದಂತೆ ಯಾವುದಾದರೂ ಒಂದು ಸೂಕ್ತ ದಾಖಲೆ ಕಡ್ಡಾಯವಾಗಿ ಲಗತ್ತಿಸಬೇಕು. ಯಾವುದೇ ಸಕಾರಣವಿಲ್ಲದೇ ಅಥವಾ ಸೂಕ್ತ ಪರಿಶೀಲನೆ ನಡೆಸದೆ ಅರ್ಜಿಗಳನ್ನು ತಿರಸ್ಕರಿಸಲಾಗಿಲ್ಲ ಎಂದು ಡಿಸಿ ಸ್ಪಷ್ಟಪಡಿಸಿದರು.
ಯಾವುದೇ ಬಲ್ಕ್ (ಸಗಟು) ಅರ್ಜಿಗಳನ್ನು ನಿಯಮ ಬಾಹಿರವಾಗಿ ಸ್ವೀಕರಿಸಿಲ್ಲ. ಮತದಾರರ ಹೆಸರು ಸೇರ್ಪಡೆ (ಫಾರ್ಮ್-6) ಹಾಗೂ ಹೆಸರು ತೆಗೆದು ಹಾಕುವಿಕೆ/ ಆಕ್ಷೇಪಣೆ (ಫಾರ್ಮ್-7) ಕುರಿತಾದ ಮಾಹಿತಿಯನ್ನು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳೊಂದಿಗೆ ಹಂಚಿಕೊಳ್ಳಲಾಗುತ್ತಿದ್ದು, ಮುಂಬರುವ ಸಾಪ್ತಾಹಿಕ ಸಭೆಗಳಲ್ಲಿ ಆಕ್ಷೇಪಣೆ ಅಥವಾ ಅನಿಸಿಕೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಪಾಲಿಕೆ ಆಯುಕ್ತ ಡಾ.ಮಹಾಂತೇಶ, ಇತರರು ಇದ್ದರು.
(ಬಾಕ್ಸ್)
ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಸೆ.29ರಂದು ಅಧಿಸೂಚನೆ ಹೊರಬಿದ್ದಿದ್ದು, ಅ.23ರಂದು ಬೆಳಗ್ಗೆ 8ರಿಂದ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಅ.27ರಂದು ಮತ ಎಣಿಕೆ ನಡೆಯಲಿದೆ. ಅ.31ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 30 ಸಾವಿರ ಪದವೀಧರ ಮತದಾರರು ನೋಂದಾಯಿತರಾಗಿದ್ದು, ಮತದಾನಕ್ಕಾಗಿ ಒಟ್ಟು 43 ಮತಗಟ್ಟೆ ಸ್ಥಾಪಿಸಲಾಗಿದೆ. ಈ ಪೈಕಿ ಹರಿಹರದಲ್ಲಿ 10, ದಾವಣಗೆರೆ ಉತ್ತರದಲ್ಲಿ 17, ದಾವಣಗೆರೆ ದಕ್ಷಿಣದಲ್ಲಿ 6, ಮಾಯಕೊಂಡ ಕ್ಷೇತ್ರದಲ್ಲಿ 6 ಹಾಗೂ ಜಗಳೂರು ತಾಲೂಕಿನಲ್ಲಿ 4 ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ಡಿಸಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರ ಸ್ವಾಮಿ ತಿಳಿಸಿದರು.
- - --6ಕೆಡಿವಿಜಿ8, 9:
ದಾವಣಗೆರೆ ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.