ರಾಜಧಾನಿ ಬೆಂಗಳೂರಿನಲ್ಲಿ ರಾರಾಜಿಸಿದ ರಾಷ್ಟ್ರಧ್ವಜ

KannadaprabhaNewsNetwork |  
Published : Aug 16, 2024, 01:52 AM IST
Knowledge Academy 8 | Kannada Prabha

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿವಿಧ ಸಂಸ್ಥೆಗಳು, ಶಾಲೆ ಕಾಲೇಜುಗಳು, ಪಕ್ಷಗಳ ಕಚೇರಿಯಲ್ಲಿ ವಿಭಿನ್ನವಾಗಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇಶದ 78ನೇ ಸ್ವಾತಂತ್ರ್ಯ ದಿನವಾದ ಗುರುವಾರ ರಾಜ್ಯ ರಾಜಧಾನಿಯಲ್ಲಿ ರಾಷ್ಟ್ರಧ್ವಜ ರಾರಾಜಿಸಿತು.

ಶಾಲಾ ಕಾಲೇಜು, ಸಂಘ ಸಂಸ್ಥೆಗಳು, ಖಾಸಗಿ, ಸರ್ಕಾರಿ ಕಚೇರಿ, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿ ಎಲ್ಲ ರಾಜಕೀಯ ಪಕ್ಷಗಳು ಧ್ವಜಾರೋಹಣ ನೆರವೇರಿಸಿದರೆ, ಜನತೆ ಮನೆಮನೆಗಳಲ್ಲೂ ತಿರಂಗಾ ಹಾರಿಸಿದರು. ವಿದ್ಯಾರ್ಥಿಗಳು ಪ್ರದರ್ಶಿಸಿದ ಪರೇಡ್‌, ಜಾಥಾ, ದೇಶಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮ ಗಮನಸೆಳೆಯಿತು. ಇನ್ನು, ವಿಶಿಷ್ಟವಾಗಿ ಧ್ವಜ ರೂಪಿಸಿ ದಾಖಲೆ ಬರೆಯುವಂತ ವಿಶೇಷ ಕಾರ್ಯಕ್ರಮಗಳು ನಡೆದವು.

ಜನತೆ ತಮ್ಮ ದ್ವಿಚಕ್ರ ವಾಹನಗಳಿಗೆ ರಾಷ್ಟ್ರಧ್ವಜ ಅಳವಡಿಸಿಕೊಂಡರೆ, ಆಟೋರಿಕ್ಷಾ, ಬಿಎಂಟಿಸಿ ಬಸ್ ಸೇರಿ ಇತರೆ ವಾಹನಗಳಿಗೆ ವಿಶೇಷ ಅಲಂಕೃತಗೊಳಿಸಿಕೊಂಡು ಸಂಚರಿಸಿದರು.

ಬಿಇಎಲ್‌ ಶಿಕ್ಷಣ ಸಂಸ್ಥೆ:

ರಾಷ್ಟ್ರ ಧ್ವಜಾರೋಹಣ ಮೂಲಕ ಬಿಇಎಲ್ ಶಿಕ್ಷಣ ಸಂಸ್ಥೆ 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿತು. ಬಳಿಕ ವಿದ್ಯಾರ್ಥಿಗಳು ರಾಷ್ಟ್ರಗೀತೆ ಮತ್ತು ಧ್ವಜಗೀತೆ ಗಾಯನ ಮಾಡಿದರು.

ಡಾ। ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಿ.ಇ.ಎಲ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥೆ ಆನ್ಸಿ ಜೇಮ್ಸ್, ಸ್ವಾತಂತ್ರ್ಯದ ಮಹತ್ವವನ್ನು ವಿವರಿಸಿ, ಯುವ ಪೀಳಿಗೆಗೆ ದೇಶ ಸೇವೆಯ ಪಾಠವನ್ನು ಒತ್ತಿ ಹೇಳಿದರು. ಧ್ವಜಾರೋಹಣದ ಬಳಿಕ, ರಾಷ್ಟ್ರಗೀತೆ ಮತ್ತು ಧ್ವಜಗೀತೆ ಗಾಯನ ನಡೆಯಿತು. ವಿದ್ಯಾರ್ಥಿಗಳು ‘ನಶಾ ಮುಕ್ತ ಭಾರತ’ ಶಪಥವನ್ನು ಮಾಡಿದರು. ಭಾರತವನ್ನು ಮದ್ಯ ಮತ್ತು ಮಾದಕ ದ್ರವ್ಯಗಳಿಂದ ಮುಕ್ತಗೊಳಿಸುವ ಪ್ರತಿಜ್ಞೆಯನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಆಕರ್ಷಕವಾಗಿದ್ದವು. ಸಮಿತಿಯ ಸದಸ್ಯರು ಭಾಗವಹಿಸಿದ್ದರು.

ನ್ಯಾಯಾಂಗ ದಾರಿದೀಪ: ನ್ಯಾ. ಅಂಜಾರಿಯಾ

ನ್ಯಾಯಾಂಗದ ಸ್ಥಾನವು ಬಹುಮುಖ್ಯವಾಗಿದ್ದು, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ದಾರಿದೀಪವಾಗುವ ಪಾತ್ರ ಅದು ನಿಭಾಯಿಸುತ್ತಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಹೇಳಿದರು.

ಹೈಕೋರ್ಟ್ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕರ್ನಾಟಕ ಹೈಕೋರ್ಟ್ ರಾಜ್ಯದ ಜನತೆಗೆ ಸಮರ್ಥ ನ್ಯಾಯದಾನ ವ್ಯವಸ್ಥೆ ಕಲ್ಪಿಸಿಕೊಂಡು ಬಂದಿದ್ದು, ಲೋಕ-ಅದಾಲತ್ ಹಾಗೂ ಮಧ್ಯಸ್ಥಿಕೆಯಂತಹ ಪರ್ಯಾಯ ವ್ಯಾಜ್ಯ ಪರಿಹಾರ ಕಾರ್ಯವಿಧಾನಗಳನ್ನು ಉತ್ತೇಜಿಸುತ್ತಿದೆ. ಅಂತರ್ಜಾಲ ಕ್ರಾಂತಿಯ ಯುಗದಲ್ಲಿ ನ್ಯಾಯಾಂಗ ಸಹ ತಂತ್ರಜ್ಞಾನದ ಬಳಕೆಯಿಂದ ದೂರ ಉಳಿಯಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು, ಅಡ್ವೋಕೆಟ್ ಜನರಲ್, ಶಶಿಕಿರಣ್ ಶೆಟ್ಟಿ, ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ವಿಶಾಲ ರಘು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಇದ್ದರು.

ರೈಲ್ವೆ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ

ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದಿಂದ ರೈಲ್ವೆ ಇನ್‌ಸ್ಟಿಟ್ಯೂಟ್‌ ಮೈದಾನದಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್‌ ಮೋಹನ್‌ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಪರೇಡ್‌ ಗೌರವ ವಂದನೆ ಸ್ವೀಕರಿಸಿದರು.

ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು, ಈ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ವಲಯದಲ್ಲಿ 22 ಲೆವೆಲ್ ಕ್ರಾಸಿಂಗ್ ಗೇಟ್ ಗಳಲ್ಲಿ ಸ್ಲೈಡಿಂಗ್ ಬೂಮ್ ಗಳನ್ನು ಮತ್ತು ಎಲ್ಲಾ 323 ಇಂಟರ್ ಲಾಕ್ ಗೇಟ್‌ಗಳಲ್ಲಿ ಧ್ವನಿ ರೆಕಾರ್ಡಿಂಗ್ ಫೋನ್ ಗಳನ್ನು ಸ್ಥಾಪಿಸಲಾಗಿದೆ ಎಂದರು.

ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ, ಶಾಮ ವಿದ್ಯಾ ಶಾಲಾ ಮತ್ತು ಸ್ಟೆಪ್ಪಿಂಗ್‌ ಸ್ಟೋನ್‌ ರೈಲ್ವೆ ನರ್ಸರಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಆರ್‌.ಪಿ.ಎಫ್‌. ಶ್ವಾನದಳದಿಂದ ಶ್ವಾನ ಪ್ರದರ್ಶನ ನಡೆಯಿತು.

ಉಳಿದಂತೆ, ಬೆಂಗಳೂರು ಮೆಟ್ರೋ ರೈಲು ನಿಗಮ, ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ, ಮಸ್ಜೀದ್‌ - ಎ- ತಾಹಾ, ಭಾರತ್ ಎಲೆಕ್ಟ್ರಾನಿಕ್ಸ್‌ ಲಲಿತಕಲಾ ಸಂಘ, ನಾಗಸೇನಾ ವಿದ್ಯಾಲಯ, ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾ, ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್ ಸೇರಿ ಎಲ್ಲ ಸಂಘಟನೆಗಳಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.ಅಂಗಾಂಗ ದಾನಿ ಸ್ಮರಿಸಿಸ್ವಾತಂತ್ರ್ಯೋತ್ಸವ

ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ನಿಧನದ ಬಳಿಕ ಅಂಗಾಂಗಗಳನ್ನು ದಾನ ಮಾಡಿ ನಾಲ್ಕು ಜೀವಗಳನ್ನು ಉಳಿಸಿದ ನಾಗರಾಜ ಅವರನ್ನು ಸ್ಮರಿಸಲಾಯಿತು. ನಾಗರಾಜ್‌ ಪುತ್ರ ಸುನೀಲ್ ಕುಮಾರ್ ಕೆ.ಎನ್. ಮತ್ತು ಅವರ ಕುಟುಂಬವು ಅವರ ಅಂಗಾಂಗಗಳನ್ನು ದಾನ ಮಾಡಲು ತೋರಿಸಿದ ಧೈರ್ಯ ಮತ್ತು ಪ್ರಕ್ರಿಯೆಯ ಉದ್ದಕ್ಕೂ ಅವರು ನೀಡಿದ ಬೆಂಬಲಕ್ಕೆ ಅಭಿನಂದಿಸಲಾಯಿತು.

ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ। ಎಚ್.ಸುದರ್ಶನ್ ಬಲ್ಲಾಳ್ ಇದ್ದರು.ಭಾರತೀಯ ಸೇನೆ ಬಲಿಷ್ಠ

ಭಾರತೀಯ ಸೇನೆ ಸಾಕಷ್ಟು ಬಲಿಷ್ಠವಾಗಿ, ಅತ್ಯಾಧುನಿಕವಾಗಿದ್ದು, ಎಂತದ್ದೇ ಶತ್ರುಗಳ ದಾಳಿಯನ್ನೂ ಹಿಮ್ಮೆಟ್ಟಿಸಬಲ್ಲುದು ಎಂದು ಕರ್ನಲ್‌ ವೆಂಕಟೇಶ್‌ ನಾಯಕ್‌ ಹೇಳಿದರು.

ಅವರು ಸುದಯ ಫೌಂಡೇಶನ್‌ನಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ಭಾರತ ಸ್ವತಂತ್ರವಾದ ಬಳಿಕ ಅನೇಕ ಸಂಘರ್ಷ ದಾಟಿ ಬಂದಿದ್ದರ ಕುರಿತು ಇತಿಹಾಸ ಮೆಲುಕು ಹಾಕಿದರು. ಸುದಯ ಫೌಂಡೇಷನ್‌ ಸಂಸ್ಥಾಪಕಿ ದಿವ್ಯಾ ರಂಗೇನಹಳ್ಳಿ ಇದ್ದರು250 ಅಡಿಯ ತ್ರಿವರ್ಣ ಧ್ವಜ

ಗಾಂಧೀ ಬಝಾರ್‌ನಿಂದ ಲಾಲ್‌ಬಾಗ್‌ವರೆಗೆ 250 ಅಡಿ ಉದ್ದದ ರಾಷ್ಟ್ರಧ್ವಜವನ್ನು ಹಿಡಿದು 500 ಯುವಕ, ಯುವತಿಯರು ಜಾಥಾ ನಡೆಸಿದರು.

ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ್ ಗರುಡಾಚಾರ್, ವಿವೈಶ್ಯ ಸಂಸ್ಥಾಪಕ ಅನಿಲ್ ಗುಪ್ತಾ ಜಾಥಾಕ್ಕೆ ಚಾಲನೆ ನೀಡಿದರು.

ಸ್ವಾತಂತ್ರ್ಯ ದೊರೆತು 78ವರ್ಷದ ಹಿನ್ನೆಲೆಯಲ್ಲಿ ತ್ಯಾಗ ಮತ್ತು ಬಲಿದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು, ನಮ್ಮ ಕರ್ತವ್ಯದ ಬಗ್ಗೆ ಅರಿವು ಮೂಡಿಸಲು ತ್ರಿವರ್ಣ ಧ್ವಜ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದರು.ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ದಾಖಲೆ

ಜೈನ್‌ ಅಕಾಡೆಮಿಯ ನಾಲೆಡ್ಜಿಯಂ ಅಕಾಡೆಮಿಯ 78 ವಿದ್ಯಾರ್ಥಿಗಳು ‘ವಿಕಾಸ ಭಾರತ’ ವಿಷಯದಡಿ 41 ನಿಮಿಷಗಳಲ್ಲಿ ಪರಿಸರ ಸ್ನೇಹಿ ದಿನಪತ್ರಿಕೆ ಹಾಗು ಗೋದಿಹಿಟ್ಟಿನ ಅಂಟನ್ನು ಉಪಯೋಗಿಸಿ 79.5 ಅಡಿ ಉದ್ದ, 4 ಅಡಿ ಅಗಲದ ರಾಷ್ಟ್ರೀಯ ಧ್ವಜ ತಯಾರಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೊಸ ದಾಖಲೆ ಬರೆದರು. ಪರಿಸರ ಪ್ರೇಮ, ದೇಶಪ್ರೇಮದೊಂದಿದೆ ವಿಕಸಿತ ಭಾರತದೆಡೆ ಹೆಜ್ಜೆ ಹಾಕುತ್ತಿರುವ ಉದ್ದೇಶ ಸಾರಲು ಈ ಕಾರ್ಯಕ್ರಮ ರೂಪಿಸಲಾಯಿತು. ಶಾಲೆಯ ಸಂಸ್ಥಾಪಕ ಡಾ. ಚೆನ್ರಾಜ್ ರಾಯ್ಚಂದ್ ಹಾಗೂ ಅಪರ್ಣಾ ಪ್ರಸಾದ್ ಇದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ