ಡಿವೈಎಫ್‌ಐನ 13ನೇ ರಾಜ್ಯ ಸಮ್ಮೇಳನದ ಬಹೃತ್ ಬಹಿರಂಗ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಕಾಂ. ಎ.ಎ.ರಹೀಮ್ ವಾಗ್ದಾಳಿ
ದೇಶದ ಯುವ ಜನತೆಗೆ ಉದ್ಯೋಗ ಸೃಷ್ಠಿಸುವಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಡಿವೈಎಫ್‍ಐ ಅಖಿಲ ಭಾರತ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಕಾಂ. ಎ.ಎ.ರಹೀಮ್ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಪಟ್ಟಣದ ಗೂಳೂರು ಸರ್ಕಲ್ ಬಳಿ ಶನಿವಾರ ಡಿವೈಎಫ್‌ಐನ 13ನೇ ರಾಜ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿದ್ದ ಬಹೃತ್ ಬಹಿರಂಗ ಸಭೆಯನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಇಡೀ ವಿಶ್ವದಲ್ಲಿಯೇ ಅತೀ ಹೆಚ್ಚು ಯುವಜನತೆ ಹೊಂದಿರುವ ದೇಶವಾಗಿದೆ. ಆದರೆ ಉದ್ಯೋಗ ಸೃಷ್ಠಿಸಿ ಯುವಜನತೆಯ ಬೆಂಬಲಕ್ಕೆ ನಿಲ್ಲಬೇಕಾಗಿರುವ ನಮ್ಮನ್ನಾಳುವ ಸರ್ಕಾರಗಳು ಜಾತಿ ಜಾತಿಗಳ ಹಾಗೂ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ದೇಶದ ಜನರನ್ನು ವಿಭಜಿಸಿ ಆಡಳಿತ ನಡೆಸುವಂತಹ ಕೆಲಸ ಮಾಡುತ್ತಿದೆ. ಉದ್ಯೋಗ ಸೃಷ್ಠಿಸುವಲ್ಲಿ ನಿರ್ಲಕ್ಷ್ಯಧೋರಣೆಯಿಂದ ದೇಶದಲ್ಲಿ ಉದ್ಯೋಗ ಬಿಕ್ಕಟ್ಟು ಸೃಷ್ಠಿಸಿರುವುದರಿಂದ ಉದ್ಯೋಗ ಅವಕಾಶಗಳಿಂದ ವಂಚಿತರಾದ ಯುವಜನತೆಯ ಜೀವನ ಡೋಲಾಯಮಾನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ದೇಶದಲ್ಲಿ ದುಡಿಯವ ವರ್ಗದವರಿಗೆ ಸಾಮಾಜಿಕ ರಕ್ಷಣೆ ಸಿಗುತ್ತಿಲ್ಲ, ವೃತ್ತಿಪರ ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಪಡೆದವರಿಗೆ ಅರ್ಹತೆಗೆ ತಕ್ಕಂತೆ ಉದ್ಯೋಗ ಸಿಗುತ್ತಿಲ್ಲ, ಯುವ ಶಕ್ತಿ ಎನಾಗುತ್ತಿದೆ, ಉದ್ಯೋಗ ಸೃಷ್ಠಿ ಎಲ್ಲಿ ಆಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಶೇ.80.06 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇ.16 ರಷ್ಟು ಯುವಕರಿಗೆ ಉದ್ಯೋಗವಿಲ್ಲ, ಅರ್ಹತೆಗೆ ತಕ್ಕ ಉದ್ಯೋಗ ಸಿಗದ ಪರಿಣಾಮ ಉದ್ಯೋಗ ಭದ್ರತೆ ಇಲ್ಲದಂತಹ ಕ್ಷೇತ್ರಗಳಲ್ಲಿ ದುಡಿಯುವಂತಾಗಿದೆ. ಇಡೀ ವಿಶ್ವದಲ್ಲಿಯೇ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಬೆಂಗಳೂರು ಮುಂಚೂಣಿಯಲ್ಲಿದೆ ಆದರೆ ಇಲ್ಲಿ ಯಾವ ರೀತಿಯ ಉದ್ಯೋಗಗಳನ್ನು ನೀಡಲಾಗುತ್ತಿದೆ ಎಂದು ಪ್ರಶ್ನಿಸಿದರು.
ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಕಾಂ.ಬಸವರಾಜ ಪೂಜಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಕಾಂ.ಎಸ್.ಲವಿತ್ರ, ರಾಜ್ಯ ಮುಖಂಡರಾದ ಎಂ.ಪಿ.ಮುನಿವೆಂಕಟಪ್ಪ, ತಮಿಳುನಾಡ ಡಿವೈಎಫ್‍ಐ ಕಾರ್ಯದರ್ಶಿ ಕಾರ್ತೀಕ್, ಖಜಾಂಚಿ ಸಂತೋಷ್‍ಕುಮಾರ್ ಬಜಾರ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಎಸ್.ರಾಜಶೇಖರ್, ಕಾರ್ಯದರ್ಶಿ ಹರೀಷ್ ಕುಮಾರ್ ಮತ್ತಿತರರು ಇದ್ದರು.
26ಬಿಜಿಪಿ-2ಎ: ಬಾಗೇಪಲ್ಲಿಯಲ್ಲಿ ಡಿವೈಎಫ್‍ಐ ಆಯೋಜಿಸಲಾಗಿದ್ದ ಬಹಿರಂಗ ಸಭೆಯ ಅಂಗವಾಗಿ ಪಟ್ಟಣದಲ್ಲಿ ಡಿವೈಎಫ್‍ಐ ಕಾರ್ಯಕರ್ತರು ಹಾಗೂ ಕಲಾ ತಂಡದವರು ಮೆರವಣಿಗೆ ನಡೆಸಿದರು.