ಕಾರ್ತಿಕೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಉಪನ್ಯಾಸ
ಪಟ್ಟಣದಲ್ಲಿ ಗುರುವಾರ ಸಂಜೆ ಬೀರೇಶ್ವರ ಸೇವಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ-ಬೆಂಗಳೂರ ಇವರ ಸಹಯೋಗದಲ್ಲಿ ನಡೆದ ಕಾರ್ತಿಕೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಪೋಷಕರು ಮನೆಯಲ್ಲಿ ಮಕ್ಕಳಿಗೆ ಏನು ಕಲಿಸುತ್ತೀರೋ ಅದನ್ನೇ ಅವರು ಸಮಾಜಕ್ಕೆ ನೀಡುತ್ತಾರೆ ಎಂದರು.
ಇಂದಿನ ದಿನಗಳಲ್ಲಿ ಪೋಷಕರಿಗೆ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯಲು ಮತ್ತು ಕುಟುಂಬದ ಮೌಲ್ಯಗಳ ಬಗ್ಗೆ ಹೇಳಲು ಪುರುಸೊತ್ತು ಇಲ್ಲದಾಗಿದೆ. ಇದರಿಂದಾಗಿ ವಿಧೇಯವಿಲ್ಲದ ಸಮಾಜ ನಿರ್ಮಾಣವಾಗುತ್ತಿದೆ. ಪೋಷಕರು ತಮ್ಮ ಮಕ್ಕಳಿಗೆ ಕೌಟುಂಬಿಕ ಮೌಲ್ಯಗಳನ್ನು ತಿಳಿಸಿದಾಗ ಸಮಾಜವು ಸುಧಾರಣೆಯಾಗುತ್ತದೆ. ಅಲ್ಲದೇ ಅವರಿಗೂ ಬದುಕಲು ಇದು ನೆರವಾಗುತ್ತದೆ ಎಂದರು.ಮಕ್ಕಳಾದವರು ವಿದ್ಯೆ ಕಲಿತು ಸಂಸ್ಕಾರ ಮತ್ತು ಸಂಸ್ಕೃತಿವಂತರಾಗಿ ಮಣ್ಣಿನ, ಸೃಷ್ಟಿ ಮತ್ತು ಹೆತ್ತವರ ಋಣ ತೀರಿಸಿದಾಗ ಮಾತ್ರ ಜನ್ಮ ಸಾರ್ಥಕವಾಗಲಿದೆ.
ಸಮಾಜದ ಉತ್ಸಾಹಿ ಯುವಕ ಮಂಜುನಾಥ ಘಂಟಿ ಅವರ ನೇತೃತ್ವದಲ್ಲಿ ಯುವಕರ ತಂಡ ಕಟ್ಟಿಕೊಂಡು ಮೇಕೆ-ಜೋಕೆ ಹೆಬ್ಬುಲಿ ಹಾಕಿದ ಕೇಕೆ ಎಂಬ ಹೆಸರಿನಡಿ ಡೊಳ್ಳಿನ ಪದಗಳ ತ್ರಿಕೋನ ಸ್ಪರ್ಧೆ ಏರ್ಪಡಿಸಿ ಯಾಂತ್ರಿಕ ಬದುಕಿನಲ್ಲಿ ನಮ್ಮ ಪರಂಪರೆಗಳು ಕಣ್ಮರೆಯಾಗುತ್ತಿರುವ ಸಮಯದಲ್ಲಿ ಜನಪದ ಹಾಡುಗಳು, ಡೊಳ್ಳಿನ ಸ್ಪರ್ಧೆ ಏರ್ಪಡಿಸಿ ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಕೆ.ಎ. ಬಳಿಗಾರ ಮಾತನಾಡಿ, ನಮ್ಮ ಹುಟ್ಟಿನಿಂದಲೇ ಜಾನಪದ ಆರಂಭವಾಗುತ್ತದೆ. ಮೌಖಿಕವಾಗಿರುವ ಮೌಲ್ಯಯುತ ಸಾಹಿತ್ಯ ಮಕ್ಕಳಿಗೆ ಪ್ರಾಥಮಿಕ ಹಂತದ ಶಾಲೆಗಳಲ್ಲಿ ನೀಡಬೇಕಾದ ಅವಶ್ಯಕತೆಯಿದ್ದು, ಶಿಕ್ಷಕವೃಂದವು ಜಾನಪದ ಉಳಿವಿಗೆ ಮುತುವರ್ಜಿ ವಹಿಸಬೇಕೆಂದು ಹೇಳಿದರು.
ಮಂಜುನಾಥ ಘಂಟಿ ಪ್ರಾಸ್ತಾವಿಕ ಮಾತನಾಡಿದರು. ಬೀರದೇವರ ಪೂಜಾರಿ ಭರಮಪ್ಪ ಶಿವಪ್ಪ ಪೂಜಾರ ಸಾನಿಧ್ಯ ವಹಿಸಿದ್ದರು. ಕಾಶಪ್ಪ ಗೂಳಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಪರಮೇಶ ಪರಬ, ಗೂಳಪ್ಪ ಕರಿಗಾರ, ಇಸಾಕ ಅಹ್ಮದ ಆದ್ರಳ್ಳಿ, ಫಕ್ಕೀರೇಶ ರಟ್ಟಿಹಳ್ಳಿ, ಹೊನ್ನಪ್ಪ ಶಿರಹಟ್ಟಿ, ಮುತ್ತುರಾಜ ಭಾವಿಮನಿ, ಎಸ್.ಬಿ. ಹೊಸೂರ, ಸತೀಶ ದೇಶಪಾಂಡೆ, ಅಸರತ್ ಡಾಲಾಯತ, ದೇವಪ್ಪ ಬಟ್ಟೂರ ಸೇರಿ ಅನೇಕರು ಇದ್ದರು.