ಶಾಲೆಯ ದುಸ್ಥಿತಿಗೆ ಮಕ್ಕಳ ಸಂಖ್ಯೆ ಇಳಿಮುಖ!

KannadaprabhaNewsNetwork |  
Published : Jun 14, 2024, 01:13 AM IST
11ಐಎನ್‌ಡಿ1,ಇಂಡಿ ತಾಲೂಕಿನ ಮಿರಗಿ ಗ್ರಾಮದ ಆಲಮೇಲ ವಸತಿ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು ಮೇಲ್ಚಾವಣಿ ಬಿಳುತ್ತದೆ ಎಂಬ ಭಯದಲ್ಲಿ ಮಳೆಯಲ್ಲಿಯೇ ಶಾಲಾ ಆವರಣದಲ್ಲಿ ನಿಂತಿರುವುದು.  | Kannada Prabha

ಸಾರಾಂಶ

ಮಳೆಗಾಲಕ್ಕೂ ಮುನ್ನವೇ ಸರ್ಕಾರಿ ಶಾಲೆಗಳನ್ನು ಶಿಕ್ಷಣ ಇಲಾಖೆ ಅವರು ದುರಸ್ತಿ ಮಾಡಿದರೇ ಶಾಲೆಗೆ ಬರುವ ವಿದ್ಯಾರ್ಥಿಗಳು ಧೈರ್ಯವಾಗಿ ಜ್ಞಾನಾರ್ಜನೆಯತ್ತ ಆಸ್ತೆ ವಹಿಸುತ್ತಾರೆ. ಇದೀಗ ಇಂಡಿ ತಾಲೂಕಿನ ಮಿರಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮಿರಗಿ ಆಲಮೇಲ ವಸ್ತಿಯಲ್ಲಿರುವ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಹಿತ ಜೀವ ಭಯದಲ್ಲಿ ಕಲಿಯುವ ಸ್ಥಿತಿ ನಿರ್ಮಾಣಗೊಂಡಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಮಳೆಗಾಲಕ್ಕೂ ಮುನ್ನವೇ ಸರ್ಕಾರಿ ಶಾಲೆಗಳನ್ನು ಶಿಕ್ಷಣ ಇಲಾಖೆ ಅವರು ದುರಸ್ತಿ ಮಾಡಿದರೇ ಶಾಲೆಗೆ ಬರುವ ವಿದ್ಯಾರ್ಥಿಗಳು ಧೈರ್ಯವಾಗಿ ಜ್ಞಾನಾರ್ಜನೆಯತ್ತ ಆಸ್ತೆ ವಹಿಸುತ್ತಾರೆ. ಇದೀಗ ಇಂಡಿ ತಾಲೂಕಿನ ಮಿರಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮಿರಗಿ ಆಲಮೇಲ ವಸ್ತಿಯಲ್ಲಿರುವ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಹಿತ ಜೀವ ಭಯದಲ್ಲಿ ಕಲಿಯುವ ಸ್ಥಿತಿ ನಿರ್ಮಾಣಗೊಂಡಿದೆ. ಶಾಲೆ ಈ ದುಸ್ಥಿತಿಯಿಂದ ಇಲ್ಲಿಯ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಾ ಸಾಗಿರುವುದು ಖೇದಕರ ಸಂಗತಿ.

ಶಾಲೆ ಹಿಂಬದಿ ಗೋಡೆಗೆ ಹೊಂದಿಕೊಂಡಿರುವ ಬಲಿಗಾಗಿ ಬಾಯ್ತೆರೆದಿರುವ ವಿಫಲ ಕೊಳವೆ ಬಾವಿ, ಶಾಲೆಯ ಆವರಣದಲ್ಲಿ ಗ್ರಾಪಂನಿಂದ ಮಳೆ ನೀರಿನ ಕೊಯ್ಲು ಕಾಮಗಾರಿಗಾಗಿ ಅಗೆದ ತಗ್ಗು, ಮಳೆ ಬಂದರೆ ಶಾಲೆ ಚಾವಣಿ ಕಡಿದು ಮೇಲೆ ಬೀಳುತ್ತದೆ ಎಂಬ ಭಯದಿಂದ ಮಳೆಯಲ್ಲಿ ಶಾಲೆಯ ಅಂಗಳದಲ್ಲಿ ನಿಲ್ಲುವ ಮಕ್ಕಳು, 3 ವರ್ಷದ ಹಿಂದೆ ಆರಂಭಿಸಿದ ಹೈಟೆಕ್ ಶೌಚಾಲಯ ಅರ್ಧಕ್ಕೆ ನಿಂತು ಮಕ್ಕಳು ಬಯಲು ಶೌಚ ಮಾಡುವ ವಾತಾವರಣ ಹೀಗೆ ಈ ಶಾಲೆ ಅನೇಕ ಸಮಸ್ಯೆಗಳ ಸುಳಿಯಲಿ ಸಿಲುಕಿಗೊಂಡು ನರಳುತ್ತಿದೆ.

ಜೀವ ಭಯ:

ಇಂದು ಇರುವ ಎರಡು ಕೋಣೆಯಲ್ಲಿ ಒಂದು ಕೋಣೆ ಸಂಪೂರ್ಣ ಚಾವಣಿ ಶಿಥಿಲಗೊಂಡಿರುವುದರಿಂದ ಆ ಕೋಣೆಗೆ ಬೀಗ ಹಾಕಲಾಗಿದೆ. ಇರುವ ಒಂದು ಕೋಣೆಯಲ್ಲಿ ಮಕ್ಕಳಿಗೆ ಪಾಠ ಬೋಧನೆ ಮಾಡಲಾಗುತ್ತಿದೆ. ಆದರೆ ಮಳೆ ಬಂದರೆ ಈ ಕೋಣೆಯ ಚಾವಣಿ ಸೋರುತ್ತಿರುವುದರಿಂದ ಚಾವಣಿ ಕುಸಿದು ಬೀಳಬಹುದು ಎಂಬ ಭಯದಲ್ಲಿ ಮಕ್ಕಳು ಮಳೆಯಲ್ಲಿಯೇ ಶಾಲಾ ಆವರಣದಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ. ಕೋಣೆಗಳ ಕೊರತೆಯಿಂದ ಇಂದು ಮಕ್ಕಳ ಸಂಖ್ಯೆ 28ಕ್ಕೆ ಬಂದು ತಲುಪಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಶಾಲೆಗೆ ಕೋಣೆಗಳು ದುರಸ್ತಿ ಇಲ್ಲವೆ, ಹೊಸ ಕೋಣೆಗಳ ನಿರ್ಮಾಣ ಮಾಡಿದ್ದರೆ ಕೆಲವೇ ದಿನಗಳಲ್ಲಿ ಈ ಶಾಲೆ ಬಂದ್‌ ಆಗುವ ಸ್ಥಿತಿಯಲ್ಲಿ ಇದೆ.

1994ರಿಂದ ಆರಂಭಗೊಂಡ ಶಾಲೆ:

ತಾಲೂಕಿನ ಮಿರಗಿ ಗ್ರಾಮದಿಂದ ಆಲಮೇಲ ವಸತಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಕುಟುಂಬಗಳಿವೆ. ಆಲಮೇಲ ವಸತಿಯಿಂದ ಮಿರಗಿ ಗ್ರಾಮ ಸುಮಾರು 3 ಕಿ.ಮೀ ಅಂತರದಲ್ಲಿದೆ. ಮಳೆಗಾಲದಲ್ಲಿ 3 ಕಿಮೀ ನಡೆದುಕೊಂಡು ಮಿರಗಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವುದು ಮಕ್ಕಳಿಗೆ ತೊಂದರೆ ಆಗುತ್ತದೆ ಎಂಬ ಉದ್ದೇಶದಿಂದ 1994 ರಲ್ಲಿ ಸರ್ಕಾರ ಆಲಮೇಲ ವಸತಿಗೆ ಪೂರ್ವಪ್ರಾಥಮಿಕ ಶಾಲೆ ಮಂಜೂರು ಆರಂಭ ಮಾಡಿ, ಎರಡು ಕೋಣೆಗಳನ್ನು ನಿರ್ಮಾಣ ಮಾಡಿ, ತರಗತಿ ಆರಂಭ ಮಾಡಿದ್ದರಿಂದ ಅಂದು ಮಕ್ಕಳ ಸಂಖ್ಯೆ 50 ರಿಂದ 60 ರಷ್ಟು ಇತ್ತು. ಇಂದು 1 ನೇ ತರಗತಿಯಿಂದ 5 ನೇ ತರಗತಿವರೆಗೆ ಪಾಠಬೋಧನೆ ಮಾಡಲಾಗುತ್ತಿದೆ.

ಶಾಲೆಯಲ್ಲಿ ಹೈಟೆಕ್‌ ಶೌಚಾಲಯ ಅರ್ಧಕ್ಕೆ ನಿಂತಿರುವುದರಿಂದ ಮಕ್ಕಳು ಮೂತ್ರ ವಿಸರ್ಜನೆಗೆ ಶಾಲೆಯ ಹಿಂದಿನ ಗೋಡೆವರೆಗೆ ಹೋಗುತ್ತಾರೆ. ಆದರೆ ಗೋಡೆಯ ಬಳಿ ಗ್ರಾಪಂನಿಂದ ತೋಡಿದ ಕೊಳವೆ ಬಾವಿ ಇದೆ. ಕಳೆದ ಎರಡ್ಮೂರು ತಿಂಗಳ ಹಿಂದೆ ಕೊಳವೆ ಬಾವಿಯಲ್ಲಿ ಮೋಟಾರ್‌ ಬಿದ್ದಿದೆ ಎಂದು ಕೊಳವೆ ಬಾವಿ ಮುಚ್ಚದೆ, ತೆಗೆದಿರುವುದರಿಂದ ಯಾವ ಸಂದರ್ಭದಲ್ಲಾದರೂ ಅಪಾಯ ತರುವಂತಿದೆ. ಜಿಲ್ಲಾ ಹಾಗೂ ತಾಲೂಕು ಆಡಳಿತ ನಿರಪಯುಕ್ತ ಕೊಳವೆ ಬಾವಿ ಮುಚ್ಚಬೇಕು. ಅದಕ್ಕೆ ಗ್ರಾಪಂ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರೂ, ಗ್ರಾಪಂ ವತಿಯಿಂದಲೇ ಕೊಳವೆ ಬಾಯಿ ಮುಚ್ಚದೆ ಹಾಗೆಯೇ ಓಪನ್‌ ಬಿಟ್ಟಿದ್ದು ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

---

ಬಾಕ್ಸ್‌

ಅರ್ಧಕ್ಕೆ ನಿಂತ ಹೈಟೆಕ್‌ ಶೌಚಾಲಯ

ಸುಮಾರು 3 ವರ್ಷದ ಹಿಂದೆ ಆಲಮೇಲ ವಸತಿ ಪೂರ್ವ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹೈಟೆಕ್‌ ಶೌಚಾಲಯ ನಿರ್ಮಾಣಕ್ಕೆ ಚಾಲನೆ ಮಾಡಿದ್ದು, ಮೂರು ವರ್ಷ ಪೂರ್ಣಗೊಂಡರೂ ಹೈಟೆಕ್‌ ಶೌಚಾಲಯ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ. ಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯಿತಿಯಿಂದ ಮಳೆ ನೀರು ಕೊಯ್ಲು ಕಾಮಗಾರಿಗಾಗಿ ತಗ್ಗು ತೊಡಿ ತಿಂಗಳಾದರೂ ಅದು ಮುಚ್ಚುವ ಕೆಲಸವಾಗಲಿ,ಕಾಮಗಾರಿ ಮಾಡಿಸುವುದಾಗಲಿ ಗ್ರಾಮ ಪಂಚಾಯಿತಿಯಿಂದ ನಡೆದಿರುವುದಿಲ್ಲ. ಹೀಗಾಗಿ ಮಕ್ಕಳಿಗೆ ಆಟವಾಡಲು ತೊಂದರೆಯಾಗಿದೆ.

---

ಕೋಟ್‌

ಮಿರಗಿ ಗ್ರಾಮದ ಆಲಮೇಲ ವಸತಿಯ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಯ ಗೊಡೆಯ ಬಳಿ ಗ್ರಾಮ ಪಂಚಾಯಿತಿಯಿಂದ ಕೊರೆಯಿಸಿದ ಬೋರವೆಲ್‌ ಮುಚ್ಚದೆ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿರುವುದಿಲ್ಲ. ನಾನು ಪ್ರಭಾರ ವಹಿಸಿಕೊಂಡು 3 ದಿನವಾಗಿದೆ. ಲಚ್ಯಾಣ ಕೊಳವೆ ಬಾವಿ ದುರಂತ ನಡೆದು ಜಿಲ್ಲೆಯ ಕಣ್ಣು ತೆರೆಯಿಸಿದ್ದರೂ ಅಧಿಕಾರಿಗಳು ಎಚ್ಚರಗೊಳ್ಳದೆ ಇರುವುದು ನೋವಿನ ಸಂಗತಿ. ಈ ಕುರಿತು ಗ್ರಾಪಂ ಪಿಡಿಒ ಅವರಿಗೆ ನೋಟಿಸ್‌ ಜಾರಿ ಮಾಡಲಾಗುತ್ತದೆ. ಹೈಟೆಕ್‌ ಶೌಚಾಲಯ ಅರ್ಧಕ್ಕೆ ನಿಂತಿರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ.

-ಸಂಜಯ ಖಡಗೇಕರ,ತಾಪಂ ಇಒ(ಪ್ರಭಾರ),ಇಂಡಿ.

---

ಅನುದಾನದ ಕೊರತೆಯಿಂದ ಶಾಲೆಗಳ ದುರಸ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ತಾಲೂಕಿನಲ್ಲಿ ಶಿಥಿಲಗೊಂಡ ಶಾಲೆಗ ದುರಸ್ತಿಗಾಗಿ ಮೇಲಧಿಕಾರಿಗಳ ಮೂಲಕ ಜಿಲ್ಲಾ ಪಂಚಾಯಿತಿಗೆ ಪತ್ರ ಬರೆಯಲಾಗಿದೆ. ಶಾಲೆಯ ಬಳಿ ತೆರೆದ ಕೊಳವೆ ಬಾವಿ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿರುವುದಿಲ್ಲ. ತಾಪಂ ಇಒ ಅವರ ಜೊತೆ ಮಾತನಾಡಿ ತೆರೆದ ಕೊಳವೆ ಮುಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ. -ಟಿ.ಎಸ್‌.ಆಲಗೂರ,ಬಿಇಒ, ಇಂಡಿ.

---

ಆಲಮೇಲ ವಸತಿಯಲ್ಲಿನ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಯ ಕೋಣೆಗಳು ಶಿಥಿಲಗೊಂಡು ಮಕ್ಕಳ ಪಾಠ ಬೋಧನೆಗೆ ತೊಂದರೆಯಾಗಿದೆ. ಇರುವ ಎರಡು ಕೋಣೆಯಲ್ಲಿ ಒಂದು ಕೋಣೆ ಸಂಪೂರ್ಣ ಶಿಥಿಲಗೊಂಡಿದ್ದರಿಂದ ಕೋಣೆಗೆ ಬಾಗಿಲ ಹಾಕಲಾಗಿದೆ. ಇರುವ ಒಂದು ಕೋಣೆಯಲ್ಲಿ 1 ರಿಂದ 5 ನೇ ತರಗತಿ ನಡೆಸುತ್ತಿದ್ದಾರೆ. ಕೋಣೆಯ ಸಮಸ್ಯೆಯಿಂದ ಪಾಲಕರು ತಮ್ಮ ಮಕ್ಕಳಿಗೆ 3 ಕಿಮೀ ದೂರದ ಮಿರಗಿ ಗ್ರಾಮದ ಶಾಲೆಗೆ ಸೇರಿಸುತ್ತಿದ್ದಾರೆ.

-ಮುದುಕಣ್ಣ ಆಲಮೇಲ, ಆಲಮೇಲ ವಸತಿ ನಿವಾಸಿ.

---

ಆಲಮೇಲ ವಸತಿ ಶಾಲೆಯ ಆವರಣದಲ್ಲಿ ಮಳೆಯ ನೀರು ಕೊಯ್ಲು ಕಾಮಗಾರಿ ಮಾಡಲು ತಗ್ಗು ತೊಡಲಾಗಿದೆ. ಅಲ್ಲಿ ಮಳೆ ನೀರು ಕೊಯ್ಲು ಮಾಡುವುದು ಅವಶ್ಯಕತೆ ಇಲ್ಲವಾದರೂ ಸದಸ್ಯರು ಗುಂಡಿ ತೊಡಿದ್ದಾರೆ. ಅದು ಮುಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ. ತೆರೆದ ಕೊಳವೆ ಬಾವಿ ಇದ್ದ ಬಗ್ಗೆ ನನ್ನ ಗಮನಕ್ಕೆ ಬಂದಿರುವುದಿಲ್ಲ.ಅದನ್ನು ಮುಚ್ಚಿಸುತ್ತೇನೆ.

-ಸಂಜಯ ಪವಾರ,ಪಿಡಿಒ ,ಗ್ರಾಪಂ, ಮಿರಗಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ