ಅಳ್ನಾವರ: ಕಣ್ಣು ಪ್ರತಿಯೊಬ್ಬ ಮಾನವನ ಪ್ರಮುಖ ಅಂಗಗಳಲ್ಲಿ ಒಂದು. ಮಹತ್ವದ ಅಂಗವಾದ ದೃಷ್ಟಿ ದೋಷ ಪ್ರಪಂಚದ ಸಂಖ್ಯೆಯಲ್ಲಿ ನಮ್ಮ ದೇಶದಲ್ಲಿಯೇ ಅಧಿಕವಾಗಿದೆ. ಇದನ್ನು ಹೋಗಲಾಡಿಸಲು ಸರ್ಕಾರ, ಸಂಘ ಸಂಸ್ಥೆಗಳು, ವೈಧ್ಯಕೀಯ ಕ್ಷೇತ್ರ ಸದಾ ಶ್ರಮಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಮಾತನಾಡಿ, ನೇತ್ರ ತಪಾಸಣೆಯಲ್ಲಿ ತಮ್ಮದೆ ಆದ ಛಾಪು ಮೂಡಿಸಿದ ಹುಬ್ಬಳ್ಳಿಯ ಡಾ. ಎಂ.ಎಂ. ಜೋಶಿ ಅವರ ನೇತೃತ್ವದಲ್ಲಿ ದೃಷ್ಟಿ ಕೇಂದ್ರ ತರೆದಿದ್ದು ಶ್ಲಾಘನೀಯ ಕಾರ್ಯ, ಇಲ್ಲಿ ನುರಿತ ಸಿಬ್ಬಂದಿ ಕಾರ್ಯ ನಿಭಾಯಿಸುತ್ತಾರೆ. ಪ್ರತಿ ಮನೆಗೂ ಭೇಟಿ ನೀಡಿ ಕಣ್ಣಿನ ತಪಾಸಣೆ ಮಾಡಲಾಗುತ್ತದೆ ಜೊತೆಗೆ
ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಆನ್‌ಲೈನ್ ತಜ್ಞರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆದು ಚಿಕಿತ್ಸೆ ನೀಡುವ ವಿನೂತನ ಪದ್ದತಿ ಇಲ್ಲಿದೆ. ದೃಷ್ಟಿದೋಷದ ಕತ್ತಲ ಬದುಕಿಗೆ ಮರಳಿ ದೃಷ್ಟಿ ನೀಡಿ ಅವರ ಬದುಕಲ್ಲಿ ಹೊಸ ಬೆಳಕಿನ ಆಶಾಕಿರಣ ಮೂಡಿಸುವ ಕಾರ್ಯ ಶ್ರೇಷ್ಠವಾದದು ಎಂದರು.ಶಿಬಿರದಲ್ಲಿ 250ಕ್ಕೂ ಹೆಚ್ಚು ಜನರನ್ನು ತಪಾಸಣಾ ಮಾಡಿ 20 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ ಎಂದು ಕಣ್ಣು ತಪಾಸಣೆ ಮಾಡಿದ ಡಾ. ಉತ್ತರಾ ಜೋಶಿ ತಿಳಿಸಿದರು. ಬೆಳಗ್ಗೆಯಿಂದ ಜನರು ಸಾಲು ನಿಂತು ಕಣ್ಣು ತಪಾಸಣೆ ಮಾಡಿಕೊಂಡರು. ಅಳ್ನಾವರ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಇದ್ದರು. ಬಿಜೆಪಿ ಪಕ್ಷದ ಅಳ್ನಾವರ ಮಂಡಳ ಅಧ್ಯಕ್ಷ ಕಲ್ಮೇಶ ಬೈಲೂರ, ಜಿಲ್ಲಾ ಉಪಾಧ್ಯಕ್ಷ ನಾರಾಯಣ ಮೋರೆ, ಡಾ. ಸಂಜಯ ಚಂದರಗಿಮಠ, ಡಾ. ಸಂಜೀವ ಕುಲಕರ್ಣಿ, ಡಾ. ಕೆ.ವಿ. ಸತ್ಯಮೂರ್ತಿ , ಮಂಜು ಪಾಟೀಲ, ಹರೀಶ ಪೂಂಜಾ ಮತ್ತಿತರರು ಇದ್ದರು. ಮಂಜುನಾಥ ಪಾಟೀಲ ನಿರೂಪಿಸಿದರು.