ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಾರ್ವಜನಿಕ ಸ್ಥಳಗಳ ಜನಸಂದಣಿ ಸ್ಥಳಗಳಲ್ಲಿ ಈವರೆಗೆ ವಾರಕ್ಕೊಮ್ಮೆ ಕೋಟ್ಪಾ ದಾಳಿ ನಡೆಸಿ ದಂಡ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ವಾರಕ್ಕೆ ಎರಡು ಬಾರಿ ದಾಳಿ ನಡೆಸಿ ಪರಿಣಾಮಕಾರಿಯಾಗಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆ ನಿಯಂತ್ರಿಸಲು ಕಠಿಣ ಕ್ರಮ ಜರುಗಿಸುವಂತೆ ಸಕ್ಷಮ ಪ್ರಾಧಿಕಾರಗಳ ಮುಖ್ಯಸ್ಥರಿಗೆ ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್ ಸೂಚನೆ ನೀಡಿದರು.ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “ತಂಬಾಕು ನಿಯಂತ್ರಣ ಕಾರ್ಯಕ್ರಮದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ”ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನಸಂದಣಿ ಇರುವಲ್ಲಿ ದಾಳಿಜಿಲ್ಲೆಯಲ್ಲಿ ನಡೆಯುವ ವಾರದ ಸಂತೆಗಳು, ಮಾರುಕಟ್ಟೆ ಪ್ರದೇಶಗಳು, ಬಸ್ ನಿಲ್ದಾಣಗಳು ಸೇರಿದಂತೆ ಇನ್ನಿತರ ಜನಸಂದಣಿ ಪ್ರದೇಶಗಳಲ್ಲಿ ಕೋಟ್ಪಾ ದಾಳಿಗಳನ್ನು ಹೆಚ್ಚಾಗಿ ನಡೆಸಬೇಕು. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಗಳಲ್ಲಿ ತಿಂಗಳಿಗೆ 10 ಕೋಟ್ಪಾ ದಾಳಿಗಳು ನಡೆಸಬೇಕು. ಶಾಲಾ ಕಾಲೇಜುಗಳ ಕಟ್ಟಡದಿಂದ 100 ಮೀಟರ್ ಪ್ರದೇಶದ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದರು.
ಈ ನಿಷೇಧ ಉಲ್ಲಂಘಿಸುವ ಅಂಗಡಿ, ಮಳಿಗೆಗಳ ಮಾಲಿಕರು, ಮುಖ್ಯಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಅಂತಹ ಅಂಗಡಿಗಳ ಪರವಾನಗಿಯನ್ನು ಕೂಡಲೆ ರದ್ದುಗೊಳಿಸಬೇಕು. ಈ ಕಾರ್ಯವನ್ನು ಇನ್ನು ಮುಂದಿನ ದಿನಗಳಲ್ಲಿ ಪರಿಣಾಮಕಾರಿ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಪೌರಕಾರ್ಮಿಕರಿಗೆ ಪ್ರತಿ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆಯನ್ನು ನಡೆಸುವಾಗ ಕ್ಯಾನ್ಸರ್ ಪರೀಕ್ಷೆಯ ತಪಾಸಣೆಯನ್ನೂ ನಡೆಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.ಅಕ್ರಮ ಹೋಮ್ ಸ್ಟೇಗೆ ಕಡಿವಾಣ ಜಿಲ್ಲೆಯ ಯಾವುದೇ ಭಾಗದಲ್ಲಿ ಪರಿವಾನಗಿ ಇಲ್ಲದೆ ಯಾವುದೇ ಹೋಂ ಸ್ಟೇಗಳನ್ನು ನಡೆಯಬಾರದು. ನಂದಿಬೆಟ್ಟದ ಸುತ್ತಮುತ್ತಲ ಪ್ರದೇಶಗಳು ಸೇರಿದಂತೆ ಜಿಲ್ಲೆಯ ಎಲ್ಲ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಸ್ಥಳೀಯಾಡಳಿತ ಸಂಸ್ಥೆಗಳ ಮುಖ್ಯಸ್ಥರು, ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಈ ಬಗ್ಗೆ ಪರಿಶೀಲಿಸಬೇಕು ಎಂದರು.ಫಾಮ್ ಹೌಸ್ ಗಳಲ್ಲಿ ಹೋಂ ಸ್ಟೇಗಳು ನಡೆಯುವ ಸಾಧ್ಯತೆಗಳು ಇರುತ್ತದೆ. ಅಂತಹುದಕ್ಕೆ ಜಿಲ್ಲೆಯಲ್ಲಿ ಎಲ್ಲಿಯೂ ಅವಕಾಶ ಮಾಡಿಕೊಡದೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ನಿಗಾವಹಿಸಲು ಸೂಚನೆ ನೀಡಿದರು.ಜನತೆಗೆ ಅರಿವು ಮೂಡಿಸಿಚಿಕ್ಕಬಳ್ಳಾಪುರ ಜಿಲ್ಲೆಯ “ಪ್ಲಾಸ್ಟಿಕ್ ಮುಕ್ತ ಅಭಿಯಾನ”, ಆಹಾರ ಸುರಕ್ಷತಾ ಪರಿಶೀಲನೆ ಹಾಗೂ ಕೋಟ್ಪಾ ದಾಳಿಗಳ ಕಾರ್ಯಗಳನ್ನು ಹಾಗೂ ಅರಿವು ಕಾರ್ಯಕ್ರಮಗಳನ್ನು ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಒಟ್ಟೊಟ್ಟಿಗೆ ಮಾಡುವಂತೆ ಸೂಚಿಸಿದರು.
ಈ ವರ್ಷದ ಏಪ್ರಿಲ್ ಮಾಹೆಯಿಂದ ಸೆಪ್ಟೆಂಬರ್ ಮಾಹೆಯವರೆಗೆ 49 ಕೋಟ್ಪಾ ದಾಳಿ ನಡೆಸಿ 881 ಪ್ರಕರಣಗಳನ್ನು ದಾಖಲಿಸಿ 69,930 ರೂಗಳ ದಂಡವನ್ನು ವಸೂಲಿ ಮಾಡಲಾಗಿದೆ. ಜಿಲ್ಲೆಯ ವಿವಿಧೆಡೆ 45 ಶಾಲಾ ಕಾಲೇಜುಗಳಲ್ಲಿ ಕೋಟ್ಪಾ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಿ 7,416 ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗಿದೆ ಎಂದರು.ಈ ಸಭೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಎಸ್.ಶಿವಕುಮಾರ್, ಜಿಪಂ ಉಪಕಾರ್ಯದರ್ಶಿ ಅತೀಕ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕೆ.ಮಾಧವಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೃಷ್ಣ ಪ್ರಸಾದ್, ಚಿಂತಾಮಣಿ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಎಸ್.ರಾಮಚಂದ್ರರೆಡ್ಡಿ, ಅಬಕಾರಿ ಇಲಾಖೆಯ ಅಧಿಕ್ಷಕ ಜೆ. ದೀಪಕ್ ಹಾಗೂ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.