ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ಎತ್ತಂಗಡಿ

KannadaprabhaNewsNetwork | Published : Dec 2, 2023 12:45 AM

ಸಾರಾಂಶ

ಕಾಟಾಚಾರಕ್ಕೆ ಸಭೆ ನಡೆಸಿ ಹೋಗುವುದಿಲ್ಲ. ಬಡವರು ತಮ್ಮ ಎದುರು ಹೇಳಿಕೊಂಡ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇವೆ. ಬಡವರ ಸಮಸ್ಯೆ ಪರಿಹಾರಕ್ಕೆ, ಜಿಲ್ಲೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳು ಬದ್ಧರಾಗಿದ್ದೇವೆ

ಕಾರವಾರ:

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನತಾ ದರ್ಶನ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಾರಂಭಿಸಿದ್ದೇವೆ. ಇಲ್ಲಿ ಹೇಳಿದ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದರೆ ನೇರವಾಗಿ ನಮಗೆ ಹೇಳಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.

ನಗರದ ಸಾಗರ ದರ್ಶನ ಸಭಾಂಗಣದಲ್ಲಿ ಶುಕ್ರವಾರ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳು ಈ ಜಿಲ್ಲೆಗೆ ಬೇಡ. ಇಲ್ಲಿಂದ ಅವರನ್ನು ಕಳಿಸುತ್ತೇವೆ. ದೂರದ ಊರಿನಿಂದ ಬಂದು ಮನವಿ ನೀಡುತ್ತೀರಿ. ಆ ಕೆಲಸ ಆಗಿಲ್ಲ ಎಂದರೆ ಕಾರ್ಯಕ್ರಮ ವ್ಯರ್ಥವಾದಂತೆ ಆಗುತ್ತದೆ ಎಂದರು.ಅಂಕೋಲಾ ವಿಮಾನ ನಿಲ್ದಾಣ ಯೋಜನೆಗೆ ಸಂಬಂಧಿಸಿ ಅನ್ಯಾಯ ಆಗಿರುವ ಬಗ್ಗೆ ಸ್ಥಳೀಯರು ತಿಳಿಸಿದರು. ಹೀಗಾಗಿ ತಾವು, ಶಾಸಕ ಸೈಲ್, ಜಿಲ್ಲಾಧಿಕಾರಿ ಸೇರಿ ಸರ್ಕಾರದ ಜತೆಗೆ ಸಭೆ ಮಾಡಿದ್ದೇವೆ. ಇದು ರಾಜ್ಯಮಟ್ಟದಲ್ಲಿ ಬಗೆ ಹರಿಯಬೇಕಿದ್ದು, ಪ್ರಯತ್ನಿಸಿದ್ದೇವೆ. ಯಾರಿಗೂ ಅನ್ಯಾಯ ಆಗಬಾರದು ಎಂದು ನಿರ್ಧರಿಸಿದ್ದೇವೆ. ಕಾಟಾಚಾರಕ್ಕೆ ಸಭೆ ನಡೆಸಿ ಹೋಗುವುದಿಲ್ಲ. ಬಡವರು ತಮ್ಮ ಎದುರು ಹೇಳಿಕೊಂಡ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇವೆ. ಬಡವರ ಸಮಸ್ಯೆ ಪರಿಹಾರಕ್ಕೆ, ಜಿಲ್ಲೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಸತೀಶ ಸೈಲ್ , ಪದ್ಮಶ್ರೀ ಸುಕ್ರಿ ಗೌಡ ಅವರ ಪುತ್ರನಿಗೆ ಉದ್ಯೋಗ ಕೊಡಿಸಬೇಕು ಎಂದು ಹೇಳಿದ್ದರು. ಡಿಸಿಯವರು ಆದಿತ್ಯ ಬಿರ್ಲಾ ಕಂಪನಿಯ ಜತೆ ಮಾತಾನಾಡಿದ್ದು, ಕೆಲಸ ಸಿಗುತ್ತದೆ. ಜನರು ಏನೇ ಸಮಸ್ಯೆಗಳಿದ್ದರು ಹೇಳಬೇಕು. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.ಈ ಕಾರ್ಯಕ್ರಮದಲ್ಲಿ ಅರ್ಜಿ ಸ್ವೀಕರಿಸಿದ ಬಳಿಕ ವಿಲೇವಾರಿ ಮಾಡಿದ ಬಗ್ಗೆ ಅರ್ಜಿದಾರರಿಗೆ ಏನಾಗಿದೆಯೆಂದು ಹಿಂಬರಹ ನೀಡಬೇಕು ಎಂದು ತಿಳಿಸಿದ ಅವರು, ಜಿಲ್ಲೆಯಲ್ಲಿ ಉದ್ಯೋಗಾವಕಾಶ ದೊರಕಿಸಲು ಕೈಗಾರಿಕೆ ತರಬೇಕು ಎಂದು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕು ಎಂದು ಯೋಜನೆ ರೂಪಿಸಲಾಗುತ್ತಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಲನಕ್ಷೆ ತಯಾರಿಸಿದ್ದು, ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ. ವಿವಿಧ ತಜ್ಞವೈದ್ಯರ ನೇಮಕ, ಅಗತ್ಯ ಯಂತ್ರೋಪಕರಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಮೈಸೂರು-ಮುರ್ಡೇಶ್ವರ ರೈಲನ್ನು ಕಾರವಾರ ವರೆಗೆ ವಿಸ್ತರಿಸಲು ಇಲಾಖೆಗೆ ಮನವಿ ನೀಡಲಾಗಿದೆ. ಇದರಿಂದ ಜನರಿಗೆ ಅನುಕೂಲ ಆಗುತ್ತದೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಕಳೆದ ಬಾರಿ ಕಾರವಾರದಲ್ಲಿ ನಡೆದ ಜನತಾ ದರ್ಶನದಲ್ಲಿ ೧೫೫ ಅರ್ಜಿ ಸ್ವೀಕರಿಸಲಾಗಿದ್ದು, ೧೫೨ ಅರ್ಜಿ ಪರಿಹಾರ ಒದಗಿಸಲಾಗಿದೆ. ೩ ಅರ್ಜಿ ಸರ್ಕಾರಕ್ಕೆ ಕಳಿಸಲಾಗಿದೆ. ಇದರ ಹೊರತಾಗಿ ಅಂಕೋಲಾ, ಕುಮಟಾ, ಯಲ್ಲಾಪುರದಲ್ಲಿ ಸಚಿವರು ಜನತಾ ದರ್ಶನ ಮಾಡಿದ್ದಾರೆ. ಆ ಅರ್ಜಿಯನ್ನೂ ಶೀಘ್ರದಲ್ಲಿ ವಿಲೇವಾರಿ ಮಾಡಲಾಗುತ್ತದೆ. ಕಂದಾಯ ಹೊರತಾಗಿ ಅರಣ್ಯ ಭೂಮಿ ಕುರಿತು ಹೆಚ್ಚಿನ ಅರ್ಜಿ ಬರುತ್ತಿದೆ. ಹೀಗಾಗಿ ಶಿರಸಿಯಲ್ಲಿ ಈ ಕುರಿತು ಸಭೆ ಮಾಡಲಾಗಿದೆ. ಶಾಸಕ ಭೀಮಣ್ಣ ನಾಯ್ಕ ಅವರು ಶಿರಸಿಯ ಲಿಡ್ಕರ ಕಾಲನಿಯು ನಗರಸಭೆಗೂ ಸೇರುವುದಿಲ್ಲ. ಪಕ್ಕದ ಗ್ರಾಪಂಗೂ ಸೇರುವುದಿಲ್ಲ. ೧೦೦ ಕುಟುಂಬವಿದೆ ಎಂದು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪ್ರಸ್ತಾವನೆಯು ಶಿರಸಿ ನಗರಸಭೆಯಿಂದ ಜಿಲ್ಲಾಡಳಿತಕ್ಕೆ ಬಂದಿದ್ದು, ನಗರಸಭಾ ವ್ಯಾಪ್ತಿಗೆ ಸೇರಿಸುತ್ತೇವೆ ಎಂದು ಭರವಸೆ ನೀಡಿದರು. ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠ ಎನ್. ವಿಷ್ಣುವರ್ಧನ, ಕಾರವಾರ ಎಸಿ ಜಯಲಕ್ಷ್ಮೀ ರಾಯಕೋಡ, ಭಟ್ಕಳ ಎಸಿ ಡಾ. ನಯನಾ, ಕುಮಟಾ ಎಸಿ ಕಲ್ಯಾಣಿ ಕಾಂಬಳೆ, ಶಿರಸಿ ಎಸಿ ದೇವರಾಜ ಮೊದಲಾದವರು ಇದ್ದರು.

Share this article