ವಚನ ಸಂಗ್ರಹಿಸಿ ಜಗತ್ತಿಗೆ ನೀಡಿದ ಹಳಕಟ್ಟಿ

KannadaprabhaNewsNetwork | Updated : Jul 02 2025, 11:48 PM IST
ಜಿಲ್ಲಾಡಳಿತದಿಂದ ಡಾ. ಫ.ಗು.ಹಳಕಟ್ಟಿಯವರ ಜನ್ಮದಿನ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾದಿನಾಚರಣೆ | Kannada Prabha

ಕನ್ನಡಪ್ರಭ ವಾರ್ತೆ ವಿಜಯಪುರ 12ನೇ ಶತಮಾನದಲ್ಲಿ ಶರಣರು ರಚಿಸಿದ ವಚನ ಸಾಹಿತ್ಯಗಳನ್ನು ಸಂಗ್ರಹಿಸಿ, ಮನುಕುಲಕ್ಕೆ ತಲುಪಿಸಲು ಶ್ರಮಿಸಿದ ಮಹಾನ ದಾರ್ಶನಿಕ ಡಾ.ಫ.ಗು ಹಳಕಟ್ಟಿ. ವಚನಗಳು ಭಾಷಾಂತರಗೊಂಡು ವಚನಗಳಲ್ಲಿನ ತತ್ವಾದರ್ಶಗಳು ಜಗತ್ತಿನಾದ್ಯಂತ ಪಸರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

12ನೇ ಶತಮಾನದಲ್ಲಿ ಶರಣರು ರಚಿಸಿದ ವಚನ ಸಾಹಿತ್ಯಗಳನ್ನು ಸಂಗ್ರಹಿಸಿ, ಮನುಕುಲಕ್ಕೆ ತಲುಪಿಸಲು ಶ್ರಮಿಸಿದ ಮಹಾನ ದಾರ್ಶನಿಕ ಡಾ.ಫ.ಗು ಹಳಕಟ್ಟಿ. ವಚನಗಳು ಭಾಷಾಂತರಗೊಂಡು ವಚನಗಳಲ್ಲಿನ ತತ್ವಾದರ್ಶಗಳು ಜಗತ್ತಿನಾದ್ಯಂತ ಪಸರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಮೂಲ್ಯ ವಚನ ಸಾಹಿತ್ಯವನ್ನು ಸಂಗ್ರಹಿಸಿ ಸಂರಕ್ಷಿಸಿಕೊಟ್ಟು ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಾರ್ಥಕ ಸಾಧನೆ ಯುವಕರು ಅರಿಯಬೇಕು. ವಿದ್ಯಾರ್ಥಿ ಬದುಕಿನಲ್ಲಿ ಇಂತಹ ದಾರ್ಶನಿಕರ ತತ್ವಾದರ್ಶಗಳಿಂದ ಪ್ರೇರಣೆ ಪಡೆಯಬೇಕು ಎಂದು ಅವರು ತಿಳಿಸಿದರು.

ಮೋಹನ್ ಕಟ್ಟಿಮನಿ ಮಾತನಾಡಿ, ಸಂಶೋಧಕರು, ವಿಜ್ಞಾನಿಗಳು, ಸಾಮಾಜಿಕ ಕಳಕಳಿಯುಳ್ಳ ಪ.ಗು.ಹಳಕಟ್ಟಿಯವರು ತಮ್ಮ ವಕೀಲ ವೃತ್ತಿಯನ್ನು ತೊರೆದು, ಆರ್ಥಿಕ ಸಂಕಷ್ಟದಲ್ಲಿಯೂ ವಚನಗಳ ಮುದ್ರಣ, ಪ್ರಸರಣ ಮಾಡುವುದಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ವಚನಗಳ ಸಂಗ್ರಹ, ಮುದ್ರಣ, ಪ್ರಸರಣಕ್ಕೆ ಮಾತ್ರ ಸಿಮೀತವಾಗಿರದೇ ವಿಜಯಪುರದ ಏಳಿಗೆ ಕನ್ನಡ ಭಾಷೆಯ ಏಳಿಗೆಗೂ ಶ್ರಮಿಸಿ ಸಮಾಜಮುಖಿ ಬದುಕು ಸಾಗಿಸಿದವರು ಡಾ.ಪ.ಗು.ಹಳಕಟ್ಟಿ. ವಿಜಯಪುರ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ವಿಜಯಪುರದಲ್ಲಿ ಶುದ್ಧ ನೀರಿಗಾಗಿ ಎಂ.ವಿಶ್ವೇಶ್ವರಯ್ಯನವರನ್ನು ಆಹ್ವಾನಿಸಿ, ಭೂತನಾಳ ಕೆರೆ ನಿರ್ಮಿಸಿದರು. ಸಮಾಜಕ್ಕಾಗಿ ಮಿಡಿದ ಇವರನ್ನು ವಚನ ಪಿತಾಮಹ ಹಾಗೂ ರಾವ್ ಬಹಾದ್ದೂರ ಎಂತಲೂ ಗೌರವಿಸಲಾಗುತ್ತದೆ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಮಾತನಾಡಿ, ಡಾ.ಫ.ಗು.ಹಳಕಟ್ಟಿಯವರು ಶರಣರ ವಚನಗಳ ಸಂಗ್ರಹಣೆ ಮುದ್ರಣಗಳಿಂದ ಈ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಅವರು ಸಂರಕ್ಷಿಸಿದ್ದ ವಚನ ಸಾಹಿತ್ಯಗಳ ಸಂದೇಶಗಳನ್ನು ಮುಂದಿನ ಪೀಳಿಗೆಗಳಿಗೂ ತಲುಪಿಸಬೇಕು ಎಂದರು.

ಮುಖಂಡರಾದ ಬಿ.ಎನ್.ನೂಲವಿ ಮಾತನಾಡಿದರು. ಬಸವರಾಜ ನಾಟಿಕಾರ ವಚನ ಗಾಯನ ನಡೆಸಿಕೊಟ್ಟರು. ಸುಭಾಶ ಕನ್ನೂರ ನಿರೂಪಿಸಿ, ವಂದಿಸಿದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದಿನ್ ಸೌದಾಗರ, ಕೆ.ಕೆ.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಜಿಪಂ ಸಹಾಯಕ ಕಾರ್ಯದರ್ಶಿ ಅನಸೂಯಾ ಚಲವಾದಿ, ಭೂಮಾಪನ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುಳಗುಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಅಡಿವೆಪ್ಪ ಸಾಲಗಲ, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.