ನೇಮನಹಳ್ಳಿಯ ಮೂಲ ಸ್ಥಳನಾಮ ಬೈಸಗಾರು

KannadaprabhaNewsNetwork |  
Published : Apr 22, 2026, 01:30 AM IST
೨೧ಬಿಹೆಚ್‌ಆರ್ ೧: ಬಾಳೆಹೊನ್ನೂರು ಸಮೀಪದ ನೇಮನಹಳ್ಳಿಯ ಜೈನ ಬಸದಿ. | Kannada Prabha

ಸಾರಾಂಶ

ಇತಿಹಾಸ ಸಂಶೋಧಕ ಎಚ್.ಅರ್.ಪಾಂಡುರಂಗ ಅವರು ಶಾಸನ ಹಾಗೂ ಕಡತಗಳಲ್ಲಿ ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಪಂಗೆ ಸೇರಿದ ನೇಮನಹಳ್ಳಿಯ ಮೂಲ ಸ್ಥಳನಾಮ ಹಾಗೂ ಅಲ್ಲಿರುವ ಪ್ರಾಚೀನ ಜೈನ ಬಸದಿಯ ಹೆಸರನ್ನು ಶೋಧನೆ ಮಾಡುವುದರ ಮೂಲಕ ಸ್ಥಳೀಯ ಜೈನ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಇತಿಹಾಸ ಸಂಶೋಧಕ ಎಚ್.ಅರ್.ಪಾಂಡುರಂಗ ಅವರು ಶಾಸನ ಹಾಗೂ ಕಡತಗಳಲ್ಲಿ ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಪಂಗೆ ಸೇರಿದ ನೇಮನಹಳ್ಳಿಯ ಮೂಲ ಸ್ಥಳನಾಮ ಹಾಗೂ ಅಲ್ಲಿರುವ ಪ್ರಾಚೀನ ಜೈನ ಬಸದಿಯ ಹೆಸರನ್ನು ಶೋಧನೆ ಮಾಡುವುದರ ಮೂಲಕ ಸ್ಥಳೀಯ ಜೈನ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದ್ದಾರೆ.

ಈಗ ನೇಮನಹಳ್ಳಿ ಎಂದು ಕರೆಯಲ್ಪಡುತ್ತಿರುವ ಈ ಗ್ರಾಮದ ಮೂಲ ಹೆಸರು ಬೈಸಗಾರು ಎಂದಾಗಿದ್ದು, ಇಲ್ಲಿರುವ ಪ್ರಾಚೀನ ಬಸದಿಯ ಹೆಸರು ಬೈಸಗಾರು ಬಸದಿ ಎಂದು ಇತ್ತೀಚಿಗೆ ಶೋಧನೆ ಮಾಡಿದ ಭೈರವರಸರ ಕಾಲದ ಹೊರನಾಡಿನ ಮಣ್ಣಿನಪಾಲು ಶಾಸನದಲ್ಲಿ ಮೇಲ್ಕಂಡ ಉಲ್ಲೇಖವಿರುವುದನ್ನು ಪಾಂಡುರಂಗ ಅವರು ಗುರುತಿಸಿದ್ದಾರೆ.

ಕಳಸದ ಕಳಸೇಶ್ವರ ದೇವಾಲಯದಲ್ಲಿ ದೊರೆತಿರುವ 08-12-1839 ಮತ್ತು 09-12-1839 ದಿನಾಂಕಗಳನ್ನು ಹೊಂದಿರುವ ಮೈಸೂರು ಸಂಸ್ಥಾನದ ಆಡಳಿತ ಕಾಲದ ಎರಡು ಕಡತಗಳಲ್ಲಿ, ಪ್ರಸಕ್ತ ನೇಮನಹಳ್ಳಿ ಗ್ರಾಮವನ್ನು ಬೈಸಗಾರು ಗ್ರಾಮ ಎಂದೇ ಉಲ್ಲೇಖಿಸಲಾಗಿದೆ. ಹಾಗೆಯೇ ಆಗ ಈ ಬೈಸಗಾರು ಗ್ರಾಮವು ಆಡುವಳ್ಳಿ ಮಾಗಣೆ-ಲಕ್ಕವಳ್ಳಿ ತಾಲೂಕಿಗೆ ಸೇರಿದ್ದು, ಈ ಬೈಸಗಾರು ಗ್ರಾಮ ಕಳಸೇಶ್ವರ ದೇವಾಲಯದ ನೇರ ಆಡಳಿತಕ್ಕೆ ಒಳಪಟ್ಟಿತ್ತು ಎಂಬ ಮಹತ್ವದ ಐತಿಹಾಸಿಕ ಸಂಗತಿಯೂ ತಿಳಿದುಬಂದಿದೆ.

ಹೊರನಾಡಿನ ಶಾಸನದಲ್ಲಿ ಬೈಸಗಾರು ಬಸದಿ ಎಂದೇ ಉಲ್ಲೇಖಿತವಾಗಿರುವ ಈ ಬಸದಿಯ ನಿರ್ಮಾಣದ ಕುರಿತು ಯಾವುದೇ ಶಾಸನಗಳು ದೊರೆಯದ ಕಾರಣ ಈ ಬಸದಿಯ ವಾಸ್ತುಶಿಲ್ಪವನ್ನು ಆಧ್ಯಯನ ಮಾಡಿರುವ ಸಂಶೋಧಕ ಪಾಂಡುರಂಗ ಅವರು ಈ ಬಸದಿಯು ಈ ಭಾಗದಲ್ಲಿ 10-11ನೇ ಶತಮಾನ ಕಾಲದಲ್ಲಿ ಆಡಳಿತ ನಡೆಸಿದ ಸಾಂತರ ದೊರೆ ಮಾರ ನಿರ್ಮಿಸಿದ ಬಸದಿಯಾಗಿರಬಹುದು.

ಸಾಂತರ ದೊರೆಗಳ ಆರಾಧ್ಯ ತೀರ್ಥಂಕರ ಪಾರ್ಶ್ವನಾಥ ತೀರ್ಥಂಕರರಾಗಿದ್ದ ಹಿನ್ನೆಲೆಯಲ್ಲಿ ಈ ಬಸದಿಯೂ ಸಹ ಪಾರ್ಶ್ವನಾಥ ಬಸದಿಯೇ ಆಗಿದ್ದಿರಬಹುದು ಹಾಗೂ ದೊರೆ ಮಾರನ ಗುರುಗಳಾಗಿದ್ದ ಶ್ರೀ ಅಜಿತ ಸೇನ ಮಹಾ ಮುನಿಗಳೂ ಸಹ ಈ ಬಸದಿಯಲ್ಲಿ ನೆಲೆಸಿದ್ದಿರಬಹುದಾದ ಸಾಧ್ಯತೆಗಳಿವೆ.

ಈ ಬೈಸುಗಾರ ಬಸದಿಯು ಕಳಸ ಸೀಮೆಯ ಅತೀ ಪ್ರಾಚೀನ ಜೈನ ಬಸದಿ ಎಂದು ಗುರುತಿಸಬಹುದು ಎಂದು ಸಂಶೋಧಕ ಎಚ್.ಆರ್.ಪಾಂಡುರಂಗ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಬಲೀಕರಣದ ಹೆಸರಿನಲ್ಲಿ ಮಹಿಳೆಯರಿಗೆ ಅನ್ಯಾಯ: ಶುಭದಾಯಿನಿ
ಕಾಂಗ್ರೆಸ್‌ನ ಅಸಲಿ ಮುಖ ಬಯಲು: ಡಾ.ಸಿ.ಎನ್.ಅಶ್ವತ್ಥನಾರಾಯಣ