ಓವರ್‌ ಲೋಡ್‌ ಇದ್ದ 11 ಟಿಪ್ಪರ್‌ ತೆರಕಣಾಂಬಿ ಪೊಲೀಸರಿಂದ ವಶ

KannadaprabhaNewsNetwork |  
Published : Aug 03, 2025, 01:30 AM IST
ಎಸ್ಪಿ ಸೂಚನೆ ಹಿನ್ನಲೆ | Kannada Prabha

ಸಾರಾಂಶ

ಓವರ್‌ ಲೋಡ್ ಎಂ.ಸ್ಯಾಂಡ್‌ ಹಾಗೂ ಬೋಡ್ರೇಸ್‌ ಕಲ್ಲನ್ನು ಕೇರಳಕ್ಕೆ ಸಾಗಿಸಲು ಯತ್ನಿಸುತ್ತಿದ್ದ ೧೧ ಟಿಪ್ಪರ್‌ ಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ತೆರಕಣಾಂಬಿ ಪೊಲೀಸರು ಸೀಜ್‌ ಮಾಡಿ ಗುಂಡ್ಲುಪೇಟೆ ಪೊಲೀಸರಿಗೆ ಶನಿವಾರ ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಓವರ್‌ ಲೋಡ್ ಎಂ.ಸ್ಯಾಂಡ್‌ ಹಾಗೂ ಬೋಡ್ರೇಸ್‌ ಕಲ್ಲನ್ನು ಕೇರಳಕ್ಕೆ ಸಾಗಿಸಲು ಯತ್ನಿಸುತ್ತಿದ್ದ ೧೧ ಟಿಪ್ಪರ್‌ ಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಸೂಚನೆ ಮೇರೆಗೆ ತೆರಕಣಾಂಬಿ ಪೊಲೀಸರು ಸೀಜ್‌ ಮಾಡಿ ಗುಂಡ್ಲುಪೇಟೆ ಪೊಲೀಸರಿಗೆ ಶನಿವಾರ ಹಸ್ತಾಂತರಿಸಿದರು.

ತೆರಕಣಾಂಬಿ ಸಬ್‌ ಇನ್ಸ್‌ಪೆಕ್ಟರ್‌ ಮಹೇಶ್‌ ಕೇರಳ ರಸ್ತೆಯ ಮದ್ದೂರು ಚೆಕ್‌ ಪೋಸ್ಟ್‌ ಬಳಿ ತಪಾಸಣೆ ನಡೆಸಿದಾಗ ಕೆಲ ಟಿಪ್ಪರ್‌ ಗಳಿಗೆ ಪರ್ಮಿಟ್‌ ಇರಲಿಲ್ಲ, ಜೊತೆಗೆ ಓವರ್‌ ಲೋಡ್‌ ಇತ್ತು ಎಂದು ೧೧ ಟಿಪ್ಪರ್‌ ವಶಕ್ಕೆ ಪಡೆದಿದ್ದಾರೆ. ಬಳಿಕ ತೂಕ ಮಾಡಿಸಿದಾಗ ಹೆಚ್ಚುವರಿ ಭಾರ ಇರುವುದು ಪತ್ತೆಯಾಗಿದೆ. ಕೆಲ ಟಿಪ್ಪರ್‌ಗಳಲ್ಲಿ ಹೆಚ್ಚು ಭಾರ ಇದ್ದು, ಪರ್ಮಿಟ್‌ ಕಡಿಮೆ ಇತ್ತು ಎನ್ನಲಾಗಿದೆ.

ಭೂ ವಿಜ್ಞಾನಿ ಜನಾರ್ಧನ ಮಾತನಾಡಿ, ಕೆಲ ಟಿಪ್ಪರ್‌ ಗಳಲ್ಲಿ ಹೆಚ್ಚು ಭಾರ, ಪರ್ಮಿಟ್‌ ಕಡಿಮೆ ಇದೆ ಎಂದು ಗುಂಡ್ಲುಪೇಟೆ ಪೊಲೀಸರು ಹೇಳಿದ್ದಾರೆ. ಅವರ ಪ್ರಕಾರ ಹೆಚ್ಚುವರಿ ಕಲ್ಲು ಅಥವಾ ಎಂ.ಸ್ಯಾಂಡ್‌ ಇದ್ದರೆ ಖಂಡಿತ ದಂಡ ಹಾಕುತ್ತೇವೆ. ಪರ್ಮಿಟ್‌ ಇಲ್ಲದಿದ್ದಕ್ಕೂ ದಂಡ ಹಾಕಲಾಗುತ್ತದೆ. ಪೊಲೀಸರು ಸೀಜ್‌ ಮಾಡಿದ ಟಿಪ್ಪರ್‌ ಗಳ ಮೇಲೆ ಏನು ಮಾಹಿತಿ ನೀಡುತ್ತಾರೋ ಆ ಪತ್ರದ ಆಧಾರದ ಮೇಲೆ ದಂಡ ಹಾಕಲು ಇಲಾಖೆ ನಿರ್ಧರಿಸುತ್ತದೆ ಎಂದರು.

ರೈತಸಂಘ ದೂರು: ಕೇರಳ ರಸ್ತೆಯಲ್ಲಿ ಹೆಚ್ಚು ಭಾರ ಜೊತೆಗೆ ಪರ್ಮಿಟ್‌ ಇಲ್ಲದೆ ದೊಡ್ಡ ಟಿಪ್ಪರ್ ಗಳಲ್ಲಿ ಕಲ್ಲು ಹಾಗೂ ಎಂ.ಸ್ಯಾಂಡ್‌, ಜಲ್ಲಿ ಸಾಗಾಣಿಕೆಯಾಗುತ್ತಿದೆ ಎಂದು ರೈತಸಂಘದ ಮಹದೇವಪ್ಪ ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳ ಬೇಕು ಎಂದು ಗುಂಡ್ಲುಪೇಟೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಓವರ್‌ ಲೋಡ್‌ ಟಿಪ್ಪರ್‌ ಸಂಚಾರ ಗುಂಡ್ಲುಪೇಟೆ ಪೊಲೀಸರಿಗೆ ಮಾಹಿತಿ ಇರಲಿಲ್ಲವೇ?: ಗುಂಡ್ಲುಪೇಟೆ: ಗುಂಡ್ಲುಪೇಟೆ ಠಾಣಾ ಸರಹದ್ದಿನ ಮದ್ದೂರು ಚೆಕ್‌ ಪೋಸ್ಟ್‌ ಬಳಿ ೧೧ ಟಿಪ್ಪರ್‌ ಸೀಜ್‌ ಮಾಡಿದ್ದು, ತೆರಕಣಾಂಬಿ ಸಬ್‌ ಇನ್ಸ್‌ಪೆಕ್ಟರ್‌. ಆದರೆ ಗುಂಡ್ಲುಪೇಟೆ ಪೊಲೀಸರ ಗಮನಕ್ಕೆ ಟಿಪ್ಪರ್‌ ಸೀಜಾದ ಬಗ್ಗೆ ಸ್ಥಳೀಯ ಪೊಲೀಸರು ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಎದ್ದಿದೆ.

ಗುಂಡ್ಲುಪೇಟೆ ಪೊಲೀಸ್‌ ಠಾಣೆಯ ಗುಪ್ತ ಪೇದೆಗೆ ಓವರ್‌ ಲೋಡ್‌ ಹಾಗೂ ಪರ್ಮಿಟ್‌ ಇಲ್ಲದೆ ಕೇರಳ ರಾಜ್ಯಕ್ಕೆ ಸಾಗಾಣಿಕೆಯಾಗುತ್ತಿರುವ ಬಗ್ಗೆ ಮಾಹಿತಿ ಇರಲಿಲ್ಲವೇ?. ಗೊತ್ತಿದ್ದು, ಮೇಲಾಧಿಕಾರಿಗಳ ಮೇಲೆ ಏಕೆ ಮಾಹಿತಿ ನೀಡಲಿಲ್ಲ ಎಂಬ ಪ್ರಶ್ನೆಯೂ ಪೊಲೀಸ್‌ ಸಿಬ್ಬಂದಿಗಳಲ್ಲೇ ಹೆಚ್ಚಾಗಿ ಕೇಳಿ ಬಂದಿದೆ.

ಸ್ಥಳೀಯ ಕ್ವಾರಿ, ಕ್ರಸರ್‌ ಟಿಪ್ಪರ್‌ ತಪಾಸಣೆ ನಡೆಸದ ಪೊಲೀಸರು: ಗುಂಡ್ಲುಪೇಟೆ: ಗುಂಡ್ಲುಪೇಟೆ, ಬೇಗೂರು,ತೆರಕಣಾಂಬಿ ಸರಹದ್ದಿನಲ್ಲಿ ಸ್ಥಳೀಯ ಕ್ವಾರಿ ಹಾಗೂ ಕ್ರಸರ್‌ಗಳಿಂದ ಹೆಚ್ಚು ಭಾರ ಹಾಗೂ ಪರ್ಮಿಟ್‌ ಇಲ್ಲದೆ ಬಹುತೇಕ ಟಿಪ್ಪರ್‌ ಗಳು ಸಮಯ ನೋಡಿಕೊಂಡು ಕದ್ದು ಸಾಗಾಣಿಕೆ ಮಾಡಲು ಯತ್ನಿಸಿ ಸಿಕ್ಕಿ ಬಿದ್ದಿವೆ. ಆದರೆ ಪ್ರತಿ ದಿನ ಬೇಗೂರು ಹಾಗೂ ತೆರಕಣಾಂಬಿ ಪೊಲೀಸ್‌ ಠಾಣೆ ಮುಂದೆ ಹಾಗೂ ಗುಂಡ್ಲುಪೇಟೆಯಲ್ಲಿ ಹಗಲು ರಾತ್ರಿ ಎನ್ನದೆ ಓವರ್‌ ಲೋಡ್‌ ತುಂಬಿದ ಕಲ್ಲು, ಎಂ.ಸ್ಯಾಂಡ್‌,ಜಲ್ಲಿ ಸಾಗಾಣಿಕೆ ಆಗುತ್ತಿದೆ.

ಕೇರಳ ರಾಜ್ಯಕ್ಕೆ ತೆರಳುವ ಬಹುತೇಕ ಟಿಪ್ಪರ್‌ ಗಳು ಬಾಡಿ ಮಟ್ಟಕ್ಕೆ ಎಂ.ಸ್ಯಾಂಡ್‌ ಹಾಕಿಕೊಂಡು ಪರ್ಮಿಟ್‌ ಕಡಿಮೆ ಹಾಕಿಸಿಕೊಂಡು ಹೋಗುತ್ತಿವೆ. ಆದರೆ ಸ್ಥಳೀಯ ಕ್ವಾರಿ ಹಾಗೂ ಕ್ರಸರ್‌ಗಳಿಂದ ಹಾಡು ಹಗಲೇ ರಾಜಾರೋಷವಾಗಿ ಓವರ್‌ ಲೋಡ್‌ ತುಂಬಿದ ಕಲ್ಲು ಸಾಗಾಣಿಕೆ ಮಾಡಿದರೂ ಪೊಲೀಸರು ಚಕಾರ ಎತ್ತುತ್ತಿಲ್ಲ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...