ನಮ್ಮವರ ಷಡ್ಯಂತ್ರದಿಂದ ಪಕ್ಷ ಪಾತಳ ಸೇರಿದೆ: ಉಮೇಶ್ ವಿಷಾದ

KannadaprabhaNewsNetwork | Published : Apr 2, 2025 1:02 AM

ಸಾರಾಂಶ

15 ವರ್ಷ ದಾವಣಗೆರೆಯಲ್ಲಿ ಆಡಳಿತ ಮಾಡಿದ ನಮ್ಮ ಪಕ್ಷ. ಇಂದು ನಮ್ಮದೇ ಪಕ್ಷದ ಕೆಲವೊಂದು ನಾಯಕರ ಷಡ್ಯಂತ್ರದಿಂದಾಗಿ ಪಕ್ಷದಲ್ಲಿ ಒಡಕು ಉಂಟಾಗಿ ಪಕ್ಷ ಪಾತಾಳದ ಮಟ್ಟಕ್ಕೆ ಹೋಗಿದೆ ಎಂದು ಕಾರ್ಮಿಕ ಮುಖಂಡ ಎಚ್.ಜಿ. ಉಮೇಶ್ ಆವರಗೆರೆ ವಿಷಾದ ವ್ಯಕ್ತಪಡಿಸಿದ್ದಾರೆ.

- ಆವರಗೆರೆಯ ಹುತಾತ್ಮರ ಸಮಾಧಿ ಬಳಿ ಕಾರ್ಮಿಕ ನೇತಾರರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ 15 ವರ್ಷ ದಾವಣಗೆರೆಯಲ್ಲಿ ಆಡಳಿತ ಮಾಡಿದ ನಮ್ಮ ಪಕ್ಷ. ಇಂದು ನಮ್ಮದೇ ಪಕ್ಷದ ಕೆಲವೊಂದು ನಾಯಕರ ಷಡ್ಯಂತ್ರದಿಂದಾಗಿ ಪಕ್ಷದಲ್ಲಿ ಒಡಕು ಉಂಟಾಗಿ ಪಕ್ಷ ಪಾತಾಳದ ಮಟ್ಟಕ್ಕೆ ಹೋಗಿದೆ ಎಂದು ಕಾರ್ಮಿಕ ಮುಖಂಡ ಎಚ್.ಜಿ. ಉಮೇಶ್ ಆವರಗೆರೆ ವಿಷಾದ ವ್ಯಕ್ತಪಡಿಸಿದರು.

ನಗರದ ಹೊರವಲಯದ ಆವರಗೆರೆಯ ಹುತಾತ್ಮರ ಸಮಾಧಿ ಬಳಿ ಪಕ್ಷದ ಕಾರ್ಯಕರ್ತರು ಮಂಗಳವಾರ ಹುತಾತ್ಮ ದಿನಾಚರಣೆ ಅಂಗವಾಗಿ ಕಾರ್ಮಿಕ ಮುಖಂಡರಾದ ಶೇಖರಪ್ಪ, ಸುರೇಶ್ ಮತ್ತು ಪಂಪಾಪತಿ ಅವರ 55ನೇ ವರ್ಷದ ಕಾರ್ಮಿಕ ನೇತಾರರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಾವಣಗೆರೆಯಲ್ಲಿ ಕಾರ್ಮಿಕ ಹೋರಾಟವು ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದ ಕಾಲವಿತ್ತು. ಅಂದಿನ ಹೋರಾಟದ ಛಾಯೆಯೂ ಇವತ್ತಿಗೂ ನಮ್ಮ ಎದೆಯಾಳದಲ್ಲಿ ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಇದೆ. ಜನರ ಏಳಿಗೆಗಾಗಿ ಪಕ್ಷ ಹೋರಾಡಿದೆ. ಅದರ ಮುಂದಾಳತ್ವದಲ್ಲಿ ಸುರೇಶ್, ಶೇಖರಪ್ಪ ಮತ್ತು ಪಂಪಾಪತಿ ಅವರ ಕೊಡುಗೆ ಅಪಾರ. ಅವರು ಹಾಕಿದ್ದ ಬೀಜ ಇಂದು ಉಳ್ಳವರ ಪಾಲಾಗಿದೆ ಎಂದರು.

ಕರ್ನಾಟಕದಲ್ಲಿ ಕಾರ್ಮಿಕರ ಹೋರಾಟವೆಂದರೆ ದಾವಣಗೆರೆ ಮತ್ತು ಚಿತ್ರದುರ್ಗದ ಕಡೆ ಆಡಳಿತ ವರ್ಗ ಮತ್ತು ಅಧಿಕಾರಿಗಳು ನೋಡುತ್ತಿದ್ದರು. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ನಾನು ಒಬ್ಬನೇ ಸದಸ್ಯನಾಗಿ ಆಯ್ಕೆಯಾಗಿದ್ದರೂ, ಆಡಳಿತ ವರ್ಗದವರು ಮತ್ತು ಸಾರ್ವಜನಿಕರು ನಗರ ಪಾಲಿಕೆಯಲ್ಲಿ ಏನಾಗುತ್ತಿದೆ ಎಂದು ಕಿವಿಗೊಡುತ್ತಿದ್ದರು ಎಂದರು.

ನಗರ ಪಾಲಿಕೆ ಚುನಾವಣೆ ಇನ್ನೇನು ಹತ್ತಿರದಲ್ಲಿದೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಟ್ಟಾಗಿ ಎಲ್ಲಿಲ್ಲಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಚುನಾಯಿತರನ್ನಾಗಿ ಮಾಡಬೇಕು ಎಂಬುದನ್ನು ತೀರ್ಮಾನಿಸಿ, ಒಟ್ಟಾಗಿ ಸೇರಿ ದುಡಿಯೋಣ. ಸಾವಿರಾರು ಬಡಜನತೆಗೆ ವಸತಿ ಕೊಡಿಸಿದ ಕೀರ್ತಿ ನಮ್ಮ ಪಕ್ಷಕ್ಕಿದೆ. ಮತ್ತೆ ವಸತಿ ಹೋರಾಟವನ್ನು ದೊಡ್ಡಮಟ್ಟದಲ್ಲಿ ಕಟ್ಟಬೇಕಿದೆ. ಅದಕ್ಕಾಗಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡೋಣ, ಕಾರ್ಮಿಕರ ಅಧಿಕಾರವನ್ನು ಹಿಡಿಯೋಣ ಎಂದು ತಿಳಿಸಿದರು.

ಶೇಖರಪ್ಪ ಪುತ್ರ ಬಸವರಾಜ್ ಮಾತನಾಡಿ, ತಂದೆಯವರ ಸ್ಮರಣೆಯ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನಮ್ಮ ಭಾಗ್ಯ. ನಮ್ಮ ತಂದೆ ದೈಹಿಕವಾಗಿ ದೂರ ಆಗಿದ್ದಾರೆ. ಅವರು ಮಾಡಿದ ಕಾರ್ಯ ಇಂದಿಗೂ ಕೂಡ ಮರೆಯದ ರೀತಿಯಲ್ಲಿ ನೀವೆಲ್ಲರೂ ಸೇರಿ ಮಾಡುತ್ತಿರುವುದು ಸಂತಸ ತಂದಿದೆ. ಆವರಗೆರೆಯಲ್ಲಿ ಇರುವ ಪಕ್ಷದ ಖಾಲಿ ನಿವೇಶನದಲ್ಲಿ ಸಮುದಾಯ ಭವನ, ವಿದ್ಯಾರ್ಥಿ ಭವನ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಆವರಗೆರೆ ಚಂದ್ರು ಮಾತನಾಡಿ, ವಿದ್ಯಾರ್ಥಿ ಯುವಜನರಲ್ಲಿ ಮತ್ತು ಕಾರ್ಮಿಕರಲ್ಲಿ ರಾಜಕೀಯ ಪ್ರಜ್ಞೆ ಮತ್ತು ಮತ್ತು ಸಮಾಜದಲ್ಲಿ ನಡೆಯುವ ಸಮಸ್ಯೆಗಳನ್ನು ನಿವಾರಣೆ ಮಾಡುವತ್ತ ಪ್ರಯತ್ನ ಆಗಬೇಕಿದೆ. ನಗರ ಮತ್ತು ಜಿಲ್ಲಾದ್ಯಂತ ನಿವೇಶನ ರಹಿತರಿಗೆ ನಿವೇಶನ ಹಕ್ಕನ್ನು ಪಡೆಯಲು ಜಿಲ್ಲಾ ಆಡಳಿತ, ನಗರ ಆಡಳಿತ ಗಮನಿಸುವಂತ ದೊಡ್ಡಮಟ್ಟದ ಕಾರ್ಯಕ್ರಮವನ್ನು ಮಾಡಲು ಶ್ರಮಿಸೋಣ ಎಂದರು.

ಪಾಲಾಕ್ಷಪ್ಪ, ಟ್ರಷ್ಟ್‌ನ ಯಲ್ಲಪ್ಪ, ಅಂಗನವಾಡಿ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಮ್ಮ, ತೋಳಹುಣಸೆ ಬಸವರಾಜ, ಗುಡಿಹಳ್ಳಿ ಹಾಲೇಶ, ಐರಣಿ ಚಂದ್ರು, ವಿ.ಲಕ್ಷ್ಮಣ, ಪಿ.ಷಣ್ಮುಖ ಸ್ವಾಮಿ ಇತರರು ಮಾತನಾಡಿದರು.

ಸಭೆಯಲ್ಲಿ ಯರಗುಂಟೆ ಸುರೇಶ್, ತಿಪ್ಪೇಶ್, ಕೆ.ಬಾನಪ್ಪ, ದಾದಾಪೀರ್, ಜಯಪ್ಪ, ಅಜೀಜ್, ಎನ್.ಟಿ. ತಿಪ್ಪೇಶ್, ಸರೋಜಾ, ನಾಗಮ್ಮ, ನೇತ್ರಾವತಿ, ಐ.ಎಸ್.ಉಮೇಶ್, ಎಚ್.ಚಂದ್ರು, ನರೇಗಾ ರಂಗನಾಥ, ಎಸ್.ಎಂ. ಸಿದ್ಧಲಿಂಗಪ್ಪ, ಶಿವಕುಮಾರ್ ಡಿ. ಶೆಟ್ಟರ್, ಎಚ್‌ಕೆಆರ್ ಸುರೇಶ್, ಎಸ್‌ಜೆಎಂ ಸುರೇಶ್ ಇತರರು ಇದ್ದರು.

- - - -1ಕೆಡಿವಿಜಿ38.ಜೆಪಿಜಿ:

ದಾವಣಗೆರೆ ತಾಲೂಕಿನ ಆವರಗೆರೆಯಲ್ಲಿರುವ ಹುತಾತ್ಮರ ಸಮಾಧಿ ಬಳಿ ಶೇಖರಪ್ಪ, ಸುರೇಶ್ ಮತ್ತು ಪಂಪಾಪತಿ ಸ್ಮರಣೆ ಕಾರ್ಯಕ್ರಮ ನಡೆಯಿತು.

Share this article