ಮಂಡ್ಯ ಜಿಲ್ಲೆಯಲ್ಲಿ ನಾಯಕತ್ವವಿಲ್ಲದೆ ದಳ ತಳಮಳ..!

KannadaprabhaNewsNetwork |  
Published : Oct 29, 2025, 01:00 AM IST
ನಾಯಕತ್ವವಿಲ್ಲದೆ ದಳ ತಳಮಳ..! | Kannada Prabha

ಸಾರಾಂಶ

ಮಂಡ್ಯ ಜಿಲ್ಲಾ ನಾಯಕತ್ವವಿಲ್ಲದೆ ಜಾತ್ಯತೀತ ಜನತಾದಳ ತಳಮಳಿಸುತ್ತಿದೆ. ಪಕ್ಷದ ಸಾರಥ್ಯ ವಹಿಸುವುದಕ್ಕೆ ಜಿಲ್ಲೆಯೊಳಗಿರುವ ದಳಪತಿಗಳೂ ಮುಂದೆ ಬರುತ್ತಿಲ್ಲ. ಅಧಿಕಾರವಿಲ್ಲದ ಕಾರಣ ಮುಖಂಡರು-ಕಾರ್ಯಕರ್ತರಲ್ಲಿ ಉತ್ಸಾಹವಿಲ್ಲ. ಮನ್‌ಮುಲ್ ಬಳಿಕ ಡಿಸಿಸಿ ಬ್ಯಾಂಕ್ ಅಧಿಕಾರವೂ ಜೆಡಿಎಸ್ ಕೈತಪ್ಪಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ನಾಯಕತ್ವವಿಲ್ಲದೆ ಜಾತ್ಯತೀತ ಜನತಾದಳ ತಳಮಳಿಸುತ್ತಿದೆ. ಪಕ್ಷದ ಸಾರಥ್ಯ ವಹಿಸುವುದಕ್ಕೆ ಜಿಲ್ಲೆಯೊಳಗಿರುವ ದಳಪತಿಗಳೂ ಮುಂದೆ ಬರುತ್ತಿಲ್ಲ. ಅಧಿಕಾರವಿಲ್ಲದ ಕಾರಣ ಮುಖಂಡರು-ಕಾರ್ಯಕರ್ತರಲ್ಲಿ ಉತ್ಸಾಹವಿಲ್ಲ. ಮನ್‌ಮುಲ್ ಬಳಿಕ ಡಿಸಿಸಿ ಬ್ಯಾಂಕ್ ಅಧಿಕಾರವೂ ಜೆಡಿಎಸ್ ಕೈತಪ್ಪಿದೆ. ಈ ನಡುವೆ ಕಾಂಗ್ರೆಸ್‌ನೊಳಗೆ ಸಚಿವ ಎನ್.ಚಲುವರಾಯಸ್ವಾಮಿ ನಾಯಕತ್ವಕ್ಕೆ ಶಕ್ತಿ ಬಂದಿದೆ.

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಜೆಡಿಎಸ್ ಕಾಂಗ್ರೆಸ್‌ಗೆ ಶರಣಾಗತಿಯಾಗಿದೆ. ಕೈ ಬೆಂಬಲಿತ ಅಭ್ಯರ್ಥಿಗಳಿಗೆ ಸಮರ್ಥ ಪೈಪೋಟಿ ನೀಡುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗದಷ್ಟು ದುರ್ಬಲವಾಗಿದೆ. ಎಂಟು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗುವುದರೊಂದಿಗೆ ಕಾಂಗ್ರೆಸ್ ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಮನ್‌ಮುಲ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪರ್ಧೆಯೊಡ್ಡಿದಷ್ಟು ಬಲವನ್ನು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪ್ರದರ್ಶಿಸದೆ ಹೀನಾಯ ಸ್ಥಿತಿ ತಲುಪಿರುವುದು ಕಾರ್ಯಕರ್ತರಿಗೆ ತೀವ್ರ ನೋವುಂಟುಮಾಡಿದೆ.

೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಕ್ಷೇತ್ರಗಳನ್ನು ಗೆದ್ದು ಬೀಗಿದ್ದ ಜೆಡಿಎಸ್, ೨೦೨೩ರ ಚುನಾವಣೆಯಲ್ಲಿ ಆರು ಕ್ಷೇತ್ರಗಳನ್ನು ಕಳೆದುಕೊಂಡು ಒಂದು ಕ್ಷೇತ್ರದಲ್ಲಷ್ಟೇ ಗೆಲುವನ್ನು ಕಂಡಿತು. ಆಗಲೇ ದಳದ ಭದ್ರಕೋಟೆ ಛಿದ್ರವಾಗಿದ್ದ ಸಂದರ್ಭದಲ್ಲಿ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ದಳಕ್ಕೆ ಜೀವ ತುಂಬಿದರು. ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವಗಿರಿ ಕುಮಾರಸ್ವಾಮಿಗೆ ದೊರಕಿದರೂ ಜಿಲ್ಲೆಯೊಳಗೆ ದಳ ಗರಿಗೆದರಲಿಲ್ಲ. ಜಿಲ್ಲೆಯೊಳಗಿನ ದಳಪತಿಗಳು ತಮ್ಮ ತಮ್ಮ ಕ್ಷೇತ್ರಗಳಿಗಷ್ಟೇ ಸೀಮಿತರಾಗಿ ಉಳಿದುಕೊಂಡರು. ಜಿಲ್ಲಾ ನಾಯಕತ್ವವನ್ನು ಪಕ್ಷದ ವರಿಷ್ಠರು ಯಾರೊಬ್ಬರಿಗೂ ವಹಿಸಿಕೊಡಲಿಲ್ಲ. ಸಿ.ಎಸ್.ಪುಟ್ಟರಾಜುರಂತಹ ವರ್ಚಸ್ವಿ ನಾಯಕರಿದ್ದರೂ ಜಿಲ್ಲೆಯೊಳಗೆ ನಾಯಕತ್ವ ವಹಿಸಿಕೊಳ್ಳುವ ಮನಸ್ಸು ಮಾಡಲಿಲ್ಲ. ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ, ನಿಖಿಲ್‌ಕುಮಾರಸ್ವಾಮಿ ಅವರು ಕೂಡ ಜಿಲ್ಲೆಯ ಕಡೆಗೆ ಸುಳಿಯದಿರುವುದು ಕಾರ್ಯಕರ್ತರನ್ನು ಅತಂತ್ರರನ್ನಾಗಿ ಮಾಡಿದೆ. ಯಾರಲ್ಲೂ ಉತ್ಸಾಹವಿಲ್ಲದೆ ಪಕ್ಷ ಸಂಘಟನೆ ನಿಂತ ನೀರಾಗಿ ಪರಿಣಮಿಸಿದೆ.

೨೦೧೮ರಲ್ಲಿ ಏಳೂ ಕ್ಷೇತ್ರಗಳನ್ನು ಕಳೆದುಕೊಂಡು ಧೂಳೀಪಟವಾಗಿದ್ದ ಕಾಂಗ್ರೆಸ್‌ಗೆ ಹೆಗಲುಕೊಟ್ಟವರು ಜೆಡಿಎಸ್‌ನಿಂದ ಕೈ ಪಾಳಯಕ್ಕೆ ಬಂದಿದ್ದ ಎನ್.ಚಲುವರಾಯಸ್ವಾಮಿ. ಲೋಕಸಭಾ ಚುನಾವಣೆ, ವಿಧಾನಪರಿಷತ್ ಚುನಾವಣೆಗಳಲ್ಲಿ ಜೆಡಿಎಸ್‌ಗೆ ಸೋಲುಣಿಸುವ ಮೂಲಕ ಹಂತ ಹಂತವಾಗಿ ಪಕ್ಷಕ್ಕೆ ಶಕ್ತಿ ತುಂಬಿದರು. ೨೦೨೩ರ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವನ್ನು ತಂದುಕೊಡುವುದರೊಂದಿಗೆ ಜಿಲ್ಲೆಯೊಳಗೆ ಕಾಂಗ್ರೆಸ್ ಮತ್ತೆ ಪುಟಿದೆದ್ದು ನಿಲ್ಲುವಂತೆ ಮಾಡಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲುಂಟಾದರೂ ಎದೆಗುಂದಲಿಲ್ಲ. ಮನ್‌ಮುಲ್, ಟಿಎಪಿಸಿಎಂಎಸ್ ಚುನಾವಣೆಗಳಲ್ಲಿ ಮೇಲುಗೈ ಸಾಧಿಸಿದರು. ಇದೀಗ ಡಿಸಿಸಿ ಬ್ಯಾಂಕ್‌ನ ಅಧಿಕಾರ ಹಿಡಿಯುವಲ್ಲೂ ಯಶಸ್ವಿ ಪಾತ್ರ ವಹಿಸಿದ್ದಾರೆ. ಪಕ್ಷದ ಜಿಲ್ಲಾ ನಾಯಕತ್ವವನ್ನು ವಹಿಸಿಕೊಂಡು ಏನೇ ವೈರುಧ್ಯಗಳಿದ್ದರೂ ಅದೆಲ್ಲವನ್ನೂ ಸರಿದೂಗಿಸಿಕೊಂಡು ಎಲ್ಲರನ್ನೂ ಒಟ್ಟಿಗೆ ಮುನ್ನಡೆಸುತ್ತಾ ಕಾಂಗ್ರೆಸ್‌ಗೆ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ.

ಜೆಡಿಎಸ್ ಪಕ್ಷದೊಳಗಿದ್ದಾಗಲೂ ಜಿಲ್ಲಾ ನಾಯಕತ್ವ ವಹಿಸಿಕೊಂಡು ಪ್ರವರ್ಧಮಾನಕ್ಕೆ ಬೆಳವಣಿಗೆ ಸಾಧಿಸಿದ್ದ ಚಲುವರಾಯಸ್ವಾಮಿ ಅವರು ಕಾಂಗ್ರೆಸ್‌ನೊಳಗೂ ಅಷ್ಟೇ ಸಂಘಟನಾತ್ಮಕ ನಾಯಕತ್ವ ಹೊಂದಿದ್ದಾರೆ. ಮುಖಂಡರು-ಕಾರ್ಯಕರ್ತರಿಗೆ ಉತ್ಸಾಹ-ಹುರುಪನ್ನು ತುಂಬುತ್ತಾ ಅಧಿಕಾರ-ಸ್ಥಾನಮಾನಗಳನ್ನು ದೊರಕಿಸಿಕೊಟ್ಟು ಭಿನ್ನಾಭಿಪ್ರಾಯಗಳು ಮೂಡದಂತೆ ಒಗ್ಗಟ್ಟಿನಿಂದ ಕೊಂಡೊಯ್ಯುತ್ತಿದ್ದಾರೆ. ದಳಪತಿಗಳನ್ನು ಸಮರ್ಥವಾಗಿ ಎದುರಿಸುವಷ್ಟು ಸಾಮರ್ಥ್ಯ ಹೊಂದಿರುವ ನಾಯಕನಾಗಿ ಹೊರಹೊಮ್ಮಿದ್ದಾರೆ. ಜಿಲ್ಲೆಯೊಳಗಿರುವ ಜೆಡಿಎಸ್ ನಾಯಕರು ಚಲುವರಾಯಸ್ವಾಮಿ ವಿರುದ್ಧ ದನಿ ಎತ್ತಿ ಮಾತನಾಡಲಾಗದಷ್ಟು ಶಕ್ತಿಯನ್ನೇ ಕಳೆದುಕೊಂಡು ದೂರವೇ ಉಳಿದಿದ್ದಾರೆ. ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿದ್ದರೂ ಬಲವನ್ನು ಹೆಚ್ಚಿಸಿಕೊಳ್ಳಲಾಗಿಲ್ಲ. ಉಭಯಪಕ್ಷಗಳ ಮುಖಂಡರು-ಕಾರ್ಯಕರ್ತರು ಮಾನಸಿಕವಾಗಿ ಒಗ್ಗೂಡುತ್ತಿಲ್ಲ. ಪರಸ್ಪರ ಅಂತರವನ್ನೇ ಕಾಯ್ದುಕೊಂಡು ಮುನ್ನಡೆಯುತ್ತಿದ್ದಾರೆ. ಒಟ್ಟಾರೆ ಒಕ್ಕಲಿಗರ ಕೋಟೆಯೊಳಗೆ ದಳ ದುರ್ಬಲವಾಗುತ್ತಿರುವಂತೆ ಗೋಚರಿಸುತ್ತಿದೆ.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು