- ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ನ್ಯಾಯಾಧೀಶೆ ವೇಲಾ ಕೆ. ಅಭಿಮತ । ಸ್ಮಾರಕಕ್ಕೆ ಅಧಿಕಾರಿಗಳಿಂದ ಗೌರವ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಚೀನಾ ದೇಶದ ಸೈನಿಕರು 1959ರಲ್ಲಿ ಭಾರತದ ಲಡಾಕ್‌ನಲ್ಲಿ ಹೊಂಚುಹಾಕಿ ದಾಳಿ ಮಾಡಿದರು. ಆಗ ಅಪ್ರತಿಮ, ವೀರಾವೇಶದಿಂದ ಹೋರಾಡಿ, ದೇಶ ರಕ್ಷಣೆಗಾಗಿ ಹುತಾತ್ಮರಾದ 10 ಸಿಆರ್‌ಪಿಎಫ್ ಯೋಧರ ತ್ಯಾಗ, ಬಲಿದಾನದ ದಿನವಾದ ಅ.21 ಅನ್ನು ದೇಶಾದ್ಯಂತ ಪೊಲೀಸ್ ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೇಲಾ ಕೆ.ದಾಮೋದರ ಹೇಳಿದರು.ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ಗೌರವ ಸಮರ್ಪಿಸಿ ಅವರು ಮಾತನಾಡಿದರು. ನಮಗೆ ಈಗ ಇರುವಂತಹ ಸೌಲಭ್ಯಗಳು, ಮೂಲಸೌಕರ್ಯಗಳು 1959ರಲ್ಲಿ ಇರಲಿಲ್ಲ. ಲಡಾಕ್‌ನಲ್ಲಿ ಅತ್ಯಾಧುನಿಕ ಶಸ್ತ್ರ ಸಜ್ಜಿತರಾಗಿ ಬಂದಿದ್ದ ಚೀನಿ ಯೋಧರನ್ನು ನಮ್ಮ ಕೇವಲ 10 ಮಂದಿ ಸಿಆರ್‌ಪಿಎಫ್ ಯೋಧರು ಎದುರಿಸಿ, ದೇಶ ರಕ್ಷಣೆಗೆ ಹುತಾತ್ಮರಾಗಿದ್ದನ್ನು ನಾವೆಂದಿಗೂ ಮರೆಯಬಾರದು ಎಂದರು.
ಸಾರ್ವಜನಿಕರೂ ಕೈ ಜೋಡಿಸಲಿ:ಸಮಾಜದಲ್ಲಿ ಇಂದು ನೆಮ್ಮದಿಯಾಗಿ, ಸ್ವತಂತ್ರವಾಗಿ ಬಾಳುತ್ತಿದ್ದೇವೆಂದರೆ ಅದಕ್ಕೆ ಹಲವರ ತ್ಯಾಗ-ಬಲಿದಾನಗಳಿವೆ. ಯಾವೊಬ್ಬ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕರ್ತವ್ಯದ ವೇಳೆ ಪ್ರಾಣ ಕಳೆದುಕೊಂಡರೆ ಅದು ದೇಶದ ಏಕೀಕರಣಕ್ಕೆ ಮಾಡಿದ ತ್ಯಾಗವಾಗುತ್ತದೆ. ಇಂತಹ ಪೊಲೀಸರ ತ್ಯಾಗವನ್ನು ನಾವೂ ಸ್ಮರಿಸಬೇಕು. ಪೊಲೀಸ್ ಸಮವಸ್ತ್ರ ನೋಡಿದರೆ ಸಾಕು ನನಗೆ ನ್ಯಾಯದ ದಾರಿ ಕಂಡಂತಾಗುತ್ತದೆ. ಆ ಒಂದು ದಾರಿಯನ್ನು ಪೊಲೀಸರು ಸದಾ ನೆನಪಿನಲ್ಲಿಟ್ಟುಕೊಂಡು ತಮ್ಮ ಕರ್ತವ್ಯ ನಿರ್ವಹಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ದಿನದ 24 ಗಂಟೆಗಳೂ ಪೊಲೀಸರು ಕೆಲಸ ಮಾಡುತ್ತಾರೆ. ಅವರೊಂದಿಗೆ ಸಾರ್ವಜನಿಕರೂ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸೈನಿಕರಂತೆ ಪೊಲೀಸರ ಸೇವೆಯೂ ಮುಖ್ಯ:ಅಧ್ಯಕ್ಷತೆ ವಹಿಸಿದ್ದ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ಮಾತನಾಡಿ, ಅ.21ರಂದು ದೇಶಾದ್ಯಂತ ಒಂದೇ ದಿನ, ಒಂದೇ ಸಮಯಕ್ಕೆ ಪೊಲೀಸ್ ಹುತಾತ್ಮರ ದಿನ ಆಚರಣೆಯಾಗುತ್ತಾ ಬಂದಿದೆ. ನಮ್ಮ ಸೈನಿಕರು ದೇಶದ ಗಡಿ ಭದ್ರತೆ ನೋಡಿಕೊಂಡರೆ, ಪೊಲೀಸರು ಆಂತರಿಕ ಭದ್ರತೆ ಕಾಪಾಡಲು ಬದ್ಧರಾಗಿದ್ದಾರೆ. ಸೈನಿಕರ ಕರ್ತವ್ಯದಷ್ಟೇ ಪೊಲೀಸರ ಕರ್ತವ್ಯವೂ ಅತಿ ಮುಖ್ಯವಾದುದು ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಪೊಲೀಸರಿಗೆ ಏನೇ ಕೊರತೆ ಇರಲಿ, ಭಾರತದ ಸಮಗ್ರತೆ, ಏಕತೆಯ ಲಕ್ಷ್ಯವಾಗಿರುತ್ತದಷ್ಟೇ ಎಂದು ಅವರು ತಿಳಿಸಿದರು.
ಲಕ್ಷ್ಯ ಸಾಧಿಸಲು ಕಾನೂನಿನ ಚೌಕಟ್ಟಿನೊಳಗೆ ಕಾನೂನು, ಸುವ್ಯವಸ್ಥೆ ಕಾಪಾಡುವುದು, ಅಪರಾಧ ಪತ್ತೆ ನಮ್ಮೆಲ್ಲರ ಆದ್ಯ ಕರ್ತವ್ಯ. ಕರ್ತವ್ಯ ಪಾಲನೆ ವೇಳೆ ಪ್ರಾಣತ್ಯಾಗಕ್ಕೂ ಸಿದ್ಧರಿರಬೇಕು. ಇದು ನಮ್ಮ ಧ್ಯೇಯವಾಕ್ಯವೂ ಆಗಿದೆ. ಇದೇ ರೀತಿ ದೇಶಾದ್ಯಂತ 191 ಪೊಲೀಸರು ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದ್ದಾರೆ. ಕರ್ನಾಟಕದ 9 ಜನ, ದಾವಣಗೆರೆ ಜಿಲ್ಲೆಯ ಇಬ್ಬರು ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದ ಪೊಲೀಸರಿದ್ದಾರೆ. ನಾಗರೀಕ ಸಮಾಜ ಪೊಲೀಸರ ಕರ್ತವ್ಯಕ್ಕೆ ಸ್ಪಂದಿಸುವ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರ ಜೊತೆ ಕೈ ಜೋಡಿಸಬೇಕು ಎಂದು ತಿಳಿಸಿದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪರಮೇಶ್ವರ ಹೆಗಡೆ, ಚನ್ನಗಿರಿ ಎಎಸ್ಪಿ ಸ್ಯಾಮ್ ವರ್ಗೀಸ್, ಡಿವೈಎಸ್ಪಿಗಳಾದ ಬಿ.ಎಸ್.ಬಸವರಾಜ, ಪಿ.ಬಿ.ಪ್ರಕಾಶ ಸೇರಿದಂತೆ ಡಿವೈಎಸ್ಪಿ, ನಿವೃತ್ತ ಎಸ್ಪಿಗಳಾದ ಲಿಂಗಾರೆಡ್ಡಿ, ಬಿ.ಬಿ.ಸಕ್ರಿ, ಮುರಗಣ್ಣನವರ್, ರವಿನಾರಾಯಣ, ಚಂದ್ರಪ್ಪ ಸೇರಿದಂತೆ ನಿವೃತ್ತ ಅಧಿಕಾರಿ, ಸಿಬ್ಬಂದಿ, ಸಿಪಿಐ, ಎಸ್‌ಐ, ಎಎಸ್ಐ, ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಕುಟುಂಬ ವರ್ಗದವರು ಇದ್ದರು. ಹುತಾತ್ಮ ಪೊಲೀಸ್ ಸಿಬ್ಬಂದಿ ತಾಯಿ ಸಹ ಹುತಾತ್ಮರ ಸ್ಮಾರಕಕ್ಕೆ ಗೌರವ ಸಮರ್ಪಿಸಿದರು.
- - -(ಕೋಟ್) ಲಡಾಕ್‌ನಲ್ಲಿ 1959ರಲ್ಲಿ ಚೀನಿಗರ ಪಡೆಗಳು, ಸುಸಜ್ಜಿತ, ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಸಮೇತ ದಾಳಿ ಮಾಡಿದ್ದರೂ ನಮ್ಮ ವೀರ ಸಿಆರ್‌ಪಿಎಫ್‌ನ 10 ಯೋಧರು ಹುತಾತ್ಮರಾದರೂ, 9 ಜನ ಚೀನಿ ಸೈನಿಕರನ್ನು ಜೀವಂತ ಸೆರೆ ಹಿಡಿದಿದ್ದರು. ಇದು ನಮ್ಮ ಯೋಧರ ಶೌರ್ಯ, ಸಾಹಸಕ್ಕೆ ಸಾಕ್ಷಿ.
- ಉಮಾ ಪ್ರಶಾಂತ, ಜಿಲ್ಲಾ ಎಸ್‌ಪಿ.- - -
-21ಕೆಡಿವಿಜಿ1.ಜೆಪಿಜಿ:ದಾವಣಗೆರೆ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ನ್ಯಾಯಾಧೀಶರಾದ ವೇಲಾ ದಾಮೋದರ ಕೆ., ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ, ಎಸ್ಪಿ ಉಮಾ ಪ್ರಶಾಂತ, ಎಎಸ್‌ಪಿ ಪರಮೇಶ್ವರ ಹೆಗಡೆ ಗೌರವ ಗೌರವ ಸಮರ್ಪಿಸಿದರು. -21ಕೆಡಿವಿಜಿ2, 3: ದಾವಣಗೆರೆ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ನ್ಯಾಯಾಧೀಶರಾದ ವೇಲಾ ದಾಮೋದರ ಕೆ. ಗೌರವ ಸಮರ್ಪಿಸಿದರು.
-21ಕೆಡಿವಿಜಿ4: ದಾವಣಗೆರೆ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಗೌರವ ಸಮರ್ಪಿಸಿದರು.-21ಕೆಡಿವಿಜಿ5; ದಾವಣಗೆರೆ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಗೌರವ ಸಮರ್ಪಿಸಿದರು.
-21ಕೆಡಿವಿಜಿ6: ದಾವಣಗೆರೆ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಗೌರವ ಸಲ್ಲಿಸಿದರು.