ಹೊಸವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಹುಬ್ಬಳ್ಳಿಗರು

KannadaprabhaNewsNetwork | Published : Jan 1, 2024 1:15 AM

ಸಾರಾಂಶ

ರಾಯಲ್‌ ರಿಡ್ಜ್‌, ಜಿಮಖಾನಾ ಕ್ಲಬ್‌, ಕ್ಯೂಬಿಕ್ಸ್, ಓಕ್ಸ್, ಕಾಟನ್ ಕೌಂಟಿ ಸೇರಿದಂತೆ ಪಂಚತಾರಾ ಹೊಟೇಲ್‌ಗಳಲ್ಲಿ ಸ್ನೇಹಿತರ ಗುಂಪಿಗೆ, ಕುಟುಂಬದವರಿಗೆ, ಯುವ ಜೋಡಿಗಳಿಗೆ ಹಾಗೂ ವೈಯಕ್ತಿಕವಾಗಿ ಹೋಗುವವರಿಗೆ ಪ್ರತ್ಯೇಕ ಅವಕಾಶ ಕಲ್ಪಿಸಿರುವುದು ಭಾನುವಾರ ಕಂಡುಬಂದಿತು. ಹೊಸ ವರ್ಷದ ಸಂಭ್ರಮಾಚರಣೆಗೆ ನಗರದ ಖಾಸಗಿ ಹೊಟೇಲ್‌ಗಳನ್ನು ವಿದ್ಯುತ್ ದೀಪಾಲಂಕಾರದಿಂದ ಶೃಂಗರಿಸಲಾಗಿತ್ತು.

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಜನತೆ ಭಾನುವಾರ ರಾತ್ರಿ 2023ಕ್ಕೆ ವಿದಾಯ ಹೇಳಿ, 2024ನೇ ವರ್ಷವನ್ನು ಅದ್ಧೂರಿಯಾಗಿ ಹರ್ಷೋದ್ಗಾರಗಳೊಂದಿಗೆ ಬರಮಾಡಿಕೊಂಡರು. ಕೆಲವಡೆ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಹೊಸ ವರ್ಷ ಸ್ವಾಗತಿಸಿದರೆ, ಇನ್ನೂ ಕೆಲವರು ಡಿಜೆಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ನಗರದ ವಿವಿಧ ಹೋಟೆಲ್, ಪಾರ್ಟಿ ಹಾಲ್‌ಗಳಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ ಅದ್ಧೂರಿಯಾಗಿತ್ತು. ನಗರದ ವಿವಿಧೆಡೆ ಕೇಕ್, ಮದ್ಯ ಖರೀದಿ, ಪಟಾಕಿ ಸಿಡಿಸುವುದು ಭಾನುವಾರ ರಾತ್ರಿ ಜೋರಾಗಿ ನಡೆಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹು-ಧಾ ಪೊಲೀಸ್ ಕಮಿಷನರೇಟ್ ವತಿಯಿಂದ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ಭಾನುವಾರ ರಾತ್ರಿ 9 ಗಂಟೆಯಿಂದ 7 ಕೆಎಸ್‌ಆರ್‌ಪಿ, 10 ಸಿಆರ್‌ಪಿ ತುಕಡಿ ನಿಯೋಜಿಸಲಾಗಿತ್ತು. ಬೈಕ್ ವ್ಹೀಲಿಂಗ್, ಡ್ರಿಂಕ್ ಆ್ಯಂಡ್ ಡ್ರೈವ್ ತಡೆಗೆ ಪ್ರಮುಖ ವೃತ್ತಗಳಲ್ಲಿ ವಿಶೇಷ ತಂಡಗಳನ್ನು ನೇಮಕ ಮಾಡಲಾಗಿತ್ತು. ಪಂಚತಾರಾ ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಪಾರ್ಟಿ ಹಾಲ್‌ಗಳಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ಕಲ್ಪಿಸಲಾಗಿತ್ತು.

ನಗರದ ಪ್ರಮುಖ ಸ್ಥಳಗಳಾದ ಚೆನ್ನಮ್ಮ ವೃತ್ತ, ದೇಸಾಯಿ ವೃತ್ತ, ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತ, ಕೋರ್ಟ್ ಸರ್ಕಲ್, ಶ್ರೀನಗರ ಸರ್ಕಲ್, ಗೋಕುಲ ರಸ್ತೆ, ರೈಲು ನಿಲ್ದಾಣ ಸೇರಿದಂತೆ ಪ್ರಮುಖ ವೃತ್ತ ಹಾಗೂ ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್‌ ನಿಯೋಜಿಸಲಾಗಿತ್ತು.

ನೂತನ ವರ್ಷಕ್ಕಾಗಿ ಬೇಕರಿಗಳಲ್ಲಿ ಸಿದ್ಧಗೊಂಡಿದ್ದ ತರಹೇವಾರಿ ಚಾಕ್ಲೇಟ್‌ ಕೇಕ್‌, ವೆನಿಲಾ ಕೇಕ್‌, ಸ್ಟ್ರಾಬರಿ, ಆರಂಜ್‌, ಕ್ರೀಮ್‌, ಫ್ಲಾವರ್‌, ಹನಿ, ಜೆಮ್‌ ಪೇಸ್ಟ್‌, ಜಾಮೂನ್‌, ರೌಂಡ್‌ ಕೇಕ್‌, ಸ್ಲೈಸ್‌ ಕೇಕ್‌, ಬಟ್ಟರ್‌ ಕ್ರೀಮ್‌ ಕೇಕ್‌ ಸೇರಿದಂತೆ ಹಲವು ಬಗೆಬಗೆಯ ಕೇಕ್‌ಗಳನ್ನು ಖರೀದಿಸಿ ಸ್ನೇಹಿತರು, ಕುಟುಂಬಸ್ಥರು ಸೇರಿ ಕೇಕ್‌ ಕತ್ತರಿಸಿ ಹೊಸ ವರ್ಷವನ್ನು ಸ್ವಾಗತಿಸಿದರು.

ಹೊಟೇಲ್‌ಗಳಲ್ಲೂ ಸಂಭ್ರಮಾಚರಣೆ: ರಾಯಲ್‌ ರಿಡ್ಜ್‌, ಜಿಮಖಾನಾ ಕ್ಲಬ್‌, ಕ್ಯೂಬಿಕ್ಸ್, ಓಕ್ಸ್, ಕಾಟನ್ ಕೌಂಟಿ ಸೇರಿದಂತೆ ಪಂಚತಾರಾ ಹೊಟೇಲ್‌ಗಳಲ್ಲಿ ಸ್ನೇಹಿತರ ಗುಂಪಿಗೆ, ಕುಟುಂಬದವರಿಗೆ, ಯುವ ಜೋಡಿಗಳಿಗೆ ಹಾಗೂ ವೈಯಕ್ತಿಕವಾಗಿ ಹೋಗುವವರಿಗೆ ಪ್ರತ್ಯೇಕ ಅವಕಾಶ ಕಲ್ಪಿಸಿರುವುದು ಭಾನುವಾರ ಕಂಡುಬಂದಿತು. ಹೊಸ ವರ್ಷದ ಸಂಭ್ರಮಾಚರಣೆಗೆ ನಗರದ ಖಾಸಗಿ ಹೊಟೇಲ್‌ಗಳನ್ನು ವಿದ್ಯುತ್ ದೀಪಾಲಂಕಾರದಿಂದ ಶೃಂಗರಿಸಲಾಗಿತ್ತು. ಬಹುತೇಕ ಎಲ್ಲ ಹೊಟೇಲ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳು ಗ್ರಾಹಕರಿಂದ ತುಂಬಿ ತುಳುಕುವಂತಿದ್ದವು. ಪಾರ್ಟಿಯಲ್ಲಿ ಖ್ಯಾತ ಗಾಯಕರು ಹಾಗೂ ನೃತ್ಯಗಾರ್ತಿಯರು ತಮ್ಮ ಕಲೆ ಪ್ರದರ್ಶಿಸುವ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದರು. ಪಾರ್ಟಿ ಆಯೋಜಕರು ನಿರ್ದಿಷ್ಟ ಗ್ರಾಹಕರಿಗೆ ಮತ್ತು ಅತಿಥಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವುದು ಕಂಡುಬಂದಿತು.

ಬೈಕ್‌ ರೈಡಿಂಗ್‌ ಜೋರು: 2023ರ ಕೊನೆಯ ದಿನ ಭಾನುವಾರ ಬಂದ ಹಿನ್ನೆಲೆಯಲ್ಲಿ ಮಧ್ಯಾಹ್ನದಿಂದಲೇ ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಇಲ್ಲಿನ ಕೇಶ್ವಾಪುರ, ರಾಣಿ ಚೆನ್ನಮ್ಮ, ಕುಸುಗಲ್ಲ ರಸ್ತೆ, ಸಿಬಿಟಿ, ಗೋಕುಲ ರಸ್ತೆಯಲ್ಲಿ ರಾತ್ರಿ 9 ಗಂಟೆಯ ವರೆಗೂ ಜನಸಂಚಾರ ತುಂಬಾ ವಿರಳವಾಗಿತ್ತು. ರಾತ್ರಿ 10 ಗಂಟೆಯ ನಂತರ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿರುವುದು ಕಂಡುಬಂದಿತು. ಇನ್ನು ಯುವಕ- ಯುವತಿಯರು ನಗರದಾದ್ಯಂತ ರಾತ್ರಿಯಿಡೀ ದ್ವಿಚಕ್ರ ವಾಹನದಲ್ಲಿ ರೈಡ್‌ ಮಾಡುತ್ತಾ ಹೊಸವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡರು.

Share this article