ಕನ್ನಡಪ್ರಭ ವಾರ್ತೆ ಹಲಗೂರು
ಅಧಿಕ ಬಿಸಿಲಿನಿಂದ ತತ್ತರಿಸಿದ್ದ ಹಲಗೂರು ಸುತ್ತಮುತ್ತಲಿನ ಜನತೆಗೆ ಶುಕ್ರವಾರ ಸಾಧಾರಣವಾಗಿ ಮಳೆ ಸುರಿದ ಪರಿಣಾಮ ನಿಟ್ಟುಸಿರು ಬಿಟ್ಟರು. ಆದರೆ, ಮಳೆಗೂ ಮುನ್ನ ಬೀಸಿದ ಬಿರುಗಾಳಿಗೆ ಹಲವೆಡೆ ವಿದ್ಯುತ್ ಕಂಬಗಳು, ವಿವಿಧ ಬಗೆಯ ಮರಗಳು ಮನೆಯ ಮೇಲ್ಛಾವಣಿ ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದ ಘಟನೆ ವರದಿಯಾಗಿದೆ.ಹಲಗೂರು, ಎಚ್.ಬಸಾಪುರ, ಗುಂಡಾಪುರ, ನಂದೀಪುರ, ಕೆಂಪಯ್ಯನದೊಡ್ಡಿ, ದಳವಾಯಿ ಕೋಡಿಹಳ್ಳಿ, ಬಾಳೆ ಹೊನ್ನಿಗ, ಲಿಂಗಪಟ್ಟಣ, ಬೆನಮನಹಳ್ಳಿ, ನಿಟ್ಟೂರು, ಕೊನ್ನಾಪುರ, ಅಂತರವಳ್ಳಿ, ದಡಮಹಳ್ಳಿ, ಹುಸ್ಕೂರು, ಮೇಗಳಾಪುರ, ಹಲಸಹಳ್ಳಿ, ಬಾಣಸಮುದ್ರ, ತೊರೆಕಾಡನಹಳ್ಳಿ ಸೇರಿದಂತೆ ಹಲವೆಡೆ ಶುಕ್ರವಾರ ಸಂಜೆ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಿದೆ.
ಕಳೆದ ಒಂದು ವಾರದಿಂದ ಹಲಗೂರಿನಲ್ಲಿ ಸುಮಾರು 44% ದಾಖಲೆ ಪ್ರಮಾಣದ ಉಷ್ಣಾಂಶ ದಾಖಲಾಗಿತ್ತು. ಇದೀಗ ಬಿಸಿಲಿನ ಬೇಗೆಯಿಂದ ಬೇಸತ್ತ ಜನರಿಗೆ ವರುಣದೇವ ದರ್ಶನ ನೀಡಿದ್ದು, ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.ಸಮೀಪದ ಕೆಂಪಯ್ಯನದೊಡ್ಡಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿದ್ದ ಬೇವಿನ ಮರಗಳು ನೆಲಕ್ಕುರುಳಿದ ಪರಿಣಾಮ ರಸ್ತೆಯ ಬದಿಯಲ್ಲಿದ್ದ ಸುಮಾರು ಎಂಟು ವಿದ್ಯುತ್ ಕಂಬಗಳು ಎರಡು ತುಂಡುಗಳಾಗಿ ನೆಲ ಕಚ್ಚಿವೆ.
ರೈತ ಜಗದೀಶ ರವರ ತೋಟದ ಮನೆ ಮೇಲೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಮನೆ ಮುಂದಿನ ಮೇಲ್ಛಾವಣಿ ಸೀಟುಗಳು ಚಿಂದಿಯಾಗಿವೆ. ಅದೃಷ್ಟವಶಾತ್ ಭಾರಿ ಅಪಾಯ ಕೈತಪ್ಪಿದೆ.ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದಿದ್ದ ಮುಸುಕಿನ ಜೋಳ, ನರ್ಸರಿ ಫಸಲು ನೆಲ ಕಚ್ಚಿದೆ. ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಮರದ ಕೊಂಬೆಗಳು ರಸ್ತೆಗೆ ಬಿದ್ದು ಸಂಚಾರಕ್ಕೆ ತೊಂದರೆ ಉಂಟು ಮಾಡಿದವು. ಇಟ್ಟಿಗೆ ಬೇಯಿಸಲು ನಿರ್ಮಿಸಿದ್ದ ಮೇಲ್ಛಾವಣಿಗಳು ಸಹ ಧರೆಗುರುಳಿದ ಚಿತ್ರಣ ಕಂಡು ಬಂತು.
ಗುಂಡಾಪುರ ಗೇಟ್ ಬಳಿ ಗಂಗಾಧರ ಅವರಿಗೆ ಸೇರಿದ ಮೂರು ತೆಂಗಿನ ಮರಗಳು ಮತ್ತು ಒಂದು ತೇಗದ ಮರ ಉರುಳಿ ಬಿದ್ದಿವೆ. ಪಕ್ಕದಲ್ಲಿರುವ ಜಮೀನಿನಲ್ಲಿ ಮಹೇಶ್ ರವರಿಗೆ ಸೇರಿದ ಎರಡು ತೆಂಗಿನ ಮರಗಳು ನೆಲಕಚ್ಚಿವೆ. ಬಿರುಗಾಳಿಯಿಂದಾಗಿ ಅಪಾರ ನಷ್ಟ ಉಂಟಾಗಿದೆ. ಸೂಕ್ತ ಪರಿಹಾರ ನೀಡಬೇಕೆಂದು ರೈತ ಗಂಗಾಧರ ಒತ್ತಾಯಿಸಿದರು.ಗುರುವಾರ ಸಂಜೆ ತಂಪಾದ ವಾತಾವರಣದಿಂದ ಕೂಡಿದ್ದು, ಗುಡುಗು ಮಿಂಚು ಇಂದ ಮಳೆ ಬರುವ ಸೂಚನೆಯಿತ್ತು. ಆದರೆ, ಮಳೆ ಬರಲಿಲ್ಲ. ಇದರಿಂದ ರೈತರಿಗೆ ನಿರಾಸೆಯಾಗಿದ್ದು ಶುಕ್ರವಾರ ಸ್ವಲ್ಪಮಟ್ಟಿಗೆ ಮಳೆಯಾಗಿರುವುದರಿಂದ ಬಿಸಿಲಿನ ತಾಪದಿಂದ ಬೆಂದು ಹೋಗುತ್ತಿದ್ದವರಿಗೆ ಮಳೆಯ ವಾತಾವರಣದಿಂದ ಸ್ವಲ್ಪ ತಂಪಾಗಿಸಿದೆ.
ಮಳೆ ಹಾಗೂ ಬಿರುಗಾಳಿ ರಭಸಕ್ಕೆ ವಿದ್ಯುತ್ ಕಂಬಗಳು ಹಾಗೂ ಮರಗಳು ಉರುಳಿ ಬಿದ್ದಿರುವ ವಿಷಯ ತಿಳಿದು ಸ್ಥಳಕ್ಕೆ ಹಲಗೂರು ವಿದ್ಯುತ್ ಇಲಾಖೆಯ ಜೆಇ ಗುರು, ಸೂರ್ಯಕುಮಾರ್ ಅವರು ಭೇಟಿ ನೀಡಿ ಸ್ಥಳ ಪರಿಶೀಲಿಸಿ ತಾತ್ಕಾಲಿಕವಾಗಿ ವಿದ್ಯುತ್ ಸಂಚಾರವನ್ನು ಸಹಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.