ಸಹಜ ಸ್ಥಿತಿಗೆ ಬಾರದ ಮೆಂದಾರೆ ಗ್ರಾಮದ ಜನತೆ

KannadaprabhaNewsNetwork | Published : May 23, 2024 1:08 AM

ಸಾರಾಂಶ

ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನಡೆದ ಹಲ್ಲೆ ಘಟನೆಯಿಂದಾಗಿ ಮೆಂದಾರೆ ಗ್ರಾಮದ ಜನರು ಇನ್ನೂ ಸಹಜ ಸ್ಧಿತಿಗೆ ಮರಳಿಲ್ಲ. ಇದೀಗ ಹಲ್ಲೆಗೊಳಗಾಗಿದ್ದ ಆದಿವಾಸಿಗಳ ಆತಂಕವನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಭದ್ರತೆ ನಡುವೆ ಬ‍ಳಲುತ್ತಿರುವ ಗ್ರಾಮಕ್ಕೆ ಸರ್ಕಾರ ಸೌಲಭ್ಯ ಕಲ್ಪಿಸುವ ಮೂಲಕ ಸುಭದ್ರತೆ ನಡುವೆ ಜೀವನ ಸಾಗಿಸಲು ನೆರವಾಗಬೇಕಾಗಿದೆ.

ಜಿ. ದೇವರಾಜ ನಾಯ್ಡು

ಕನ್ನಡಪ್ರಭ ವಾರ್ತೆ ಹನೂರು

ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನಡೆದ ಹಲ್ಲೆ ಘಟನೆಯಿಂದಾಗಿ ಮೆಂದಾರೆ ಗ್ರಾಮದ ಜನರು ಇನ್ನೂ ಸಹಜ ಸ್ಧಿತಿಗೆ ಮರಳಿಲ್ಲ. ಇದೀಗ ಹಲ್ಲೆಗೊಳಗಾಗಿದ್ದ ಆದಿವಾಸಿಗಳ ಆತಂಕವನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಭದ್ರತೆ ನಡುವೆ ಬ‍ಳಲುತ್ತಿರುವ ಗ್ರಾಮಕ್ಕೆ ಸರ್ಕಾರ ಸೌಲಭ್ಯ ಕಲ್ಪಿಸುವ ಮೂಲಕ ಸುಭದ್ರತೆ ನಡುವೆ ಜೀವನ ಸಾಗಿಸಲು ನೆರವಾಗಬೇಕಾಗಿದೆ.ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಗ್ರಾಪಂ ವ್ಯಾಪ್ತಿಯ ಮೆಂದಾರೆ ಗ್ರಾಮ ಎರಡು ಕಡೆ ತಗ್ಗು ಪ್ರದೇಶ/ ಕೊರಕಲು ಹಳ್ಳ ಹಾಗೂ ಗಿರಿ ಶಿಖರದ ಮೇಲಿರುವ ಪೋಡು, ಗ್ರಾಮದಲ್ಲಿ 63 ಮನೆಗಳಿವೆ. 233 ಜನಸಂಖ್ಯೆ ಹೊಂದಿರುವ ಆದಿವಾಸಿ ಸೋಲಿಗ ಬುಡಕಟ್ಟು ಸಮುದಾಯದ ಜನರು ಈ ಹಾಡಿಯಲ್ಲಿ ಸಣ್ಣ ಪುಟ್ಟ ಮನೆಗಳಲ್ಲಿ ವಾಸಿಸುತ್ತಿರುವ ಸ್ಥಳದಲ್ಲಿ ಕಾಂಕ್ರೀಟ್ ರಸ್ತೆ ಬಿಟ್ಟರೆ ಇನ್ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ.

ಕಾಡಿನ ಮಕ್ಕಳ ಸ್ಥಿತಿಯನ್ನು ಕೇಳುವವರು ಯಾರು ಇಲ್ಲದಂತಾಗಿದೆ. ಎರಡು ಸಮುದಾಯಗಳ ಹಿರಿಯ ಮುಖಂಡರ ಮುಖಾಂತರ ಸಮನ್ವಯ ಶಾಂತಿ ಸೌಹಾರ್ಧತೆ ಸಭೆ ನಡೆಸುವ ಮೂಲಕ ಎರಡು ಗ್ರಾಮಗಳ ಶಾಂತಿ ನೆಲೆಸಲು ಕ್ರಮ ಕೈಗೊಳ್ಳಬೇಕಾಗಿದೆ.ಸಹಜ ಸ್ಥಿತಿಗೆ ಬಾರದ ಆದಿವಾಸಿ ಸಮುದಾಯ: ಏ.26 ರಂದು ಇಂಡಿಗನತ್ತ ಗ್ರಾಮದಲ್ಲಿ ನಡೆದ ಮತಗಟ್ಟೆ ಧ್ವಂಸ ಹಾಗೂ ಆದಿವಾಸಿ ಸಮುದಾಯದವರ ಮೇಲೆ ನಡೆಸಿದ ದಾಳಿ, ದೈಹಿಕ ಹಲ್ಲೆ, ದೌರ್ಜನ್ಯ ಸೇರಿದಂತೆ ಮೂರು ಪ್ರಕರಣಗಳು ದಾಖಲಾಗಿದೆ. ಚುನಾವಣೆ ಬಹಿಷ್ಕರಿಸಿರುವ ಇಂಡಿಗನತ್ತ ಗ್ರಾಮದಲ್ಲಿ ಏ.29 ರಂದು ಮರು ಮತದಾನ ನಡೆಯಿತು. ಈ ಸಂದರ್ಭದಲ್ಲಿ ಮತದಾನದ ಹಕ್ಕು ಚಲಾಯಿಸಿರುವ ಮೆಂದಾರೆ ಕಾಡಿನ ಮಕ್ಕಳ ಪೀಕಲಾಟ ಹೇಳ ತೀರದಂತಾಗಿದೆ.

ಗ್ರಾಮ ಸ್ಥಳಾಂತರಕ್ಕೆ ಪಟ್ಟು: ಇಂಡಿಗನತ್ತದಲ್ಲಿ ಏ.26 ರಂದು ಮತದಾನ ಮಾಡಲು ಹೋದ ವೇಳೆ ನಡೆದ ಘಟನೆಯಿಂದ ಗ್ರಾಮದಲ್ಲಿ ಸೋಲಿಗ ಆದಿವಾಸಿ ಜನಾಂಗ ವಾಸಿಸಲು ಭಯದ ವಾತಾವರಣದಿಂದ ಗ್ರಾಮವನ್ನೇ ತೊರೆಯಲು ಮುಂದಾಗಿರುವ ಗ್ರಾಮಸ್ಥರ ನೆರವಿಗೆ ಇದುವರೆಗೂ ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಿಲ್ಲ. ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡದೆ ಇರುವುದರಿಂದ ಗ್ರಾಮ ಸ್ಥಳಾಂತರ ಮಾಡುವಂತೆ ಜಿಲ್ಲಾಡಳಿತಕ್ಕೆ ಆದಿವಾಸಿಗಳು ಮನವಿ ಮಾಡಿದ್ದಾರೆ. ಅಭದ್ರತೆ ಕಾಡುತ್ತಿರುವ ಕಾಡಿನ ಮಕ್ಕಳ ಸುಭದ್ರತೆಗೆ ಸರ್ಕಾರದ ಜನಪ್ರತಿನಿಧಿಗಳ ನೆರವು ಬೇಕಾಗಿದೆ.

ಇಲ್ಲಿನ ಆದಿವಾಸಿಗಳಿಗೆ ಜಿಲ್ಲಾಡಳಿತ/ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಧೈರ್ಯ ತುಂಬಿರುವುದು ಬಿಟ್ಟರೆ, ಮಲೆ ಮಾದೇಶ್ವರ ಬೆಟ್ಟದಲ್ಲಿ ಮಾಜಿ ಶಾಸಕ ನರೇಂದ್ರ ರಾಜುಗೌಡ ಮೆಂದಾರೆ ಗ್ರಾಮದ ನಿವಾಸಿಗಳು ಭೇಟಿ ಮಾಡಿ ಸಭೆ ನಡೆಸಿ ಅವರ ಕಷ್ಟಗಳನ್ನು ಆಲಿಸಿದ್ದಾರೆ. ಗ್ರಾಮದಲ್ಲಿ ಭಯದ ವಾತಾವರಣ ಇದ್ದು ನಮ್ಮನ್ನು ಪಾಲಾರ್ ಹಾಡಿಗೆ ಸ್ಥಳಾಂತರ ಮಾಡಲು ಸರ್ಕಾರದ ಜೊತೆ ಮಾತನಾಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಇದಕ್ಕೆ ಪೂರಕವಾಗಿ ಮಾಜಿ ಶಾಸಕರು ಸಹ ಲೋಕಸಭಾ ಚುನಾವಣೆ ಮುಗಿದ ನಂತರ ಸರ್ಕಾರದ ಜೊತೆ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದರು. ಜತೆಗೆ ಅದೇ ದಿನ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್ ಮಹೇಶ್ ಅವರು ಮೆಂದಾರೆ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿ ಕೆಲವು ಬೆರಳಿಣಿಕೆಯಷ್ಟು ನಿವಾಸಿಗಳು ಇದ್ದರು. ಇದನ್ನು ಹೊರತು ಪಡಿಸಿ ಬೇರೆ ಯಾವ ಜನಪ್ರತಿನಿಧಿಗಳು ಸಹ ಇವರಿಗೆ ಧೈರ್ಯ ತುಂಬಲು ಅಥವಾ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡದೆ ಇರುವುದರಿಂದ ಸರ್ಕಾರ ಮೆಂದಾರೆ ಗ್ರಾಮದ ಜನತೆ ಆಶಯದಂತೆ ಕ್ರಮ ಕೈಗೊಳ್ಳುವುದೇ ಇಲ್ಲದಿದ್ದರೆ ಎರಡು ಗ್ರಾಮಗಳ ಮುಖಂಡರನ್ನು ಒಂದೆಡೆ ಸೇರಿಸಿ ಶಾಂತಿ ಸಮನ್ವಯತೆಯಿಂದ ಗ್ರಾಮಗಳಲ್ಲಿ ವಾಸಿಸಲು ಧೈರ್ಯ ತುಂಬುವರೇ ಕಾದು ನೋಡಬೇಕಾಗಿದೆ.ಮೆಂದಾರೆ ಗ್ರಾಮದಲ್ಲಿ ವಿದ್ಯುತ್ ಇಲ್ಲ, ಸರಿಯಾದ ರಸ್ತೆ ಇಲ್ಲ ಕಾಡು ಪ್ರಾಣಿಗಳ ಹಾವಳಿ ನಡುವೆ ನಮ್ಮ ಜೀವನ ಕಷ್ಟಕರವಾಗಿದೆ. ಇಂತಹ ಗ್ರಾಮದಲ್ಲಿ ಚುನಾವಣೆ ವೇಳೆ ನಡೆದ ಘಟನೆಯಿಂದ ನಿವಾಸಿಗಳು ಭಯಭೀತರಾಗಿದ್ದಾರೆ ಜೊತೆಗೆ ಇಲ್ಲಿನ ನಿವಾಸಿಗಳು ಕಾಡು ಪ್ರಾಣಿಗಳಿಗಿಂತಲೂ ಕೀಳಾಗಿ ಬದುಕು ಸವೆಸುತಿದ್ದೇವೆ. ತಲತಲಾಂತರದಿಂದ ವಾಸಿಸುತ್ತಿರುವ ನಮಗೆ ಸರ್ಕಾರ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಮತದಾನ ವೇಳೆ ನಡೆದ ಘಟನೆಯಿಂದ ನಮ್ಮ ಗ್ರಾಮದಲ್ಲಿ ಎಲ್ಲರ ಮುಖದಲ್ಲೂ ನಗು ಮಾಯವಾಗಿದೆ. ಹೀಗಾಗಿ ನಾನು ಏನು ಹೇಳಲು ಆಗುತ್ತಿಲ್ಲ ಎಂದು ಗ್ರಾಮದ ಮಹಿಳೆ ಮಾದೇವಮ್ಮ ತಮ್ಮ ಅಳಲನ್ನು ಕನ್ನಡಪ್ರಭಕ್ಕೆ ತಿಳಿಸಿದರು.26ರಂದು ತಾಲೂಕು ಮುಖಂಡರ ಸಭೆ:

ಇದೇ ಮೇ 26ರಂದು ಹನೂರು ಪಟ್ಟಣದಲ್ಲಿ ಆದಿವಾಸಿ ಸೋಲಿಗರ ತಾಲೂಕು ಮುಖಂಡರ ಸಭೆ ಕರೆಯಲಾಗಿದೆ. ಮೆಂದಾರೆ ಗ್ರಾಮದ ನಿವಾಸಿಗಳ ಸ್ಥಿತಿ-ಗತಿ ಹಾಗೂ ನಡೆದಿರುವ ಘಟನೆಯ ಬಗ್ಗೆ ಚರ್ಚೆ ನಡೆಯಲಿದೆ. ಸ್ಥಳೀಯ ಶಾಸಕರ ಜೊತೆ ಸಹ ಈ ಬಗ್ಗೆ ಮಾತನಾಡಿದ್ದೇವೆ. ಲೋಕಸಭಾ ಚುನಾವಣೆ ಮುಗಿದ ನಂತರ ಘಟನೆಯ ಬಗ್ಗೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಇಂದು ಸೋಲಿಗ ಸಂಘದ ಮುಖಂಡರು ತಿಳಿಸಿದ್ದಾರೆ.ಮೆಂದಾರೆ ಗ್ರಾಮದ ಆದಿವಾಸಿಗಳ ಆತಂಕ ದೂರ ಮಾಡಲು ಸರ್ಕಾರ ಮಧ್ಯ ಪ್ರವೇಶಿಸಿ ಗ್ರಾಮಗಳ ನಡುವೆ ಇರುವ ವೈ ಮನಸ್ಸನ್ನು ದೂರ ಮಾಡಲು ಕ್ರಮ ಕೈಗೊಳ್ಳಬೇಕು. ಜತೆಗೆ ಆದಿವಾಸಿ ಸೋಲಿಗ ಜನಾಂಗದ ರಕ್ಷಣೆ ಮಾಡಬೇಕು. ಇನ್ನು ಮುಂದೆ ಇಂತಹ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು.

-ಮುತ್ತಯ್ಯ, ಕಾರ್ಯದರ್ಶಿ, ರಾಜ್ಯ ಮೂಲ ನಿವಾಸಿ ಬುಡಕಟ್ಟು ಜನರ ವೇದಿಕೆ.

Share this article