ನೆತ್ತಿ ಸುಡುತ್ತಿದೆ ಬಿಸಿಲು, ಇನ್ನೆರಡು ತಿಂಗಳು ಗೋಳು!

KannadaprabhaNewsNetwork |  
Published : Mar 31, 2024, 02:08 AM IST
ವಿಜಯಪುರ ನಗರದ ಗಗನ ಮಹಲ್ ಗಾರ್ಡನ್ ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಜನತೆ. | Kannada Prabha

ಸಾರಾಂಶ

ಮಾರ್ಚ್ ತಿಂಗಳು ಮುಗಿಯುವಷ್ಟರಲ್ಲೇ ಬಿಸಿಲಿನಿಂದ ಪಾರಾಗಲು ಪರದಾಡುತ್ತಿದ್ದು, ಕೆಎಸ್‌ಎನ್‌ಡಿಎಂಸಿ ವರದಿಯ ಪ್ರಕಾರ ಕಳೆದ ಎರಡು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಉಷ್ಣತೆ ೪೨ ಡಿಗ್ರಿ ತಲುಪಿದೆ. ಹೊರಗೆ ಬರಲು ಆಗದೆ ಜನತೆ ಹೈರಾಣಾಗುತ್ತಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ರಣರಣ ಬಿಸಿಲು, ೪೨ಡಿಗ್ರಿ ತಲುಪಿತ ತಾಪಮಾನ. ಹೊರಗೆ ಬರಲು ಹೆದರುತ್ತಿದ್ದಾರೆ ಜನ. ಹೌದು ಬೇಸಿಗೆ ಆರಂಭವಾದ ಮೇಲೆ ಕುಡಿಯಲು ನೀರಿಲ್ಲ ಎಂದು ಗೋಳಾಡುತ್ತಿದ್ದ ಜನತೆ ಇದೀಗ ಮಾರ್ಚ್ ತಿಂಗಳು ಮುಗಿಯುವಷ್ಟರಲ್ಲೇ ಬಿಸಿಲಿನಿಂದ ಪಾರಾಗಲು ಪರದಾಡುತ್ತಿದ್ದಾರೆ. ಕೆಎಸ್‌ಎನ್‌ಡಿಎಂಸಿ ವರದಿಯ ಪ್ರಕಾರ ಕಳೆದ ಎರಡು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಉಷ್ಣತೆ ೪೨ ಡಿಗ್ರಿ ತಲುಪಿದೆ. ಹೀಗಾಗಿ ಬೆಳಗ್ಗೆ ಹೊರಗೆ ಬರಲು ಆಗದೆ ಜನತೆ ಹೈರಾಣಾಗುತ್ತಿದ್ದಾರೆ. ಇನ್ನು ತಡರಾತ್ರಿಯಾದರೂ ಬಿಸಿಲ ಝಳದ ಧಗೆ ಮನೆ ಆವರಿಸುವುದರಿಂದ ನಿದ್ರೆಯೇ ಬಾರದೆ ಹೊರಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನೀರು, ನೆರಳು ಹುಡುಕುತ್ತಿರುವ ಜನತೆ:

ಬಿಸಿಲಿನ ಶಾಖ ತಡೆಯಲಾರದೆ ಜನ ಎಲ್ಲಿ ನೀರು ಸಿಗುತ್ತದೋ, ಎಲ್ಲಿ ನೆರಳು ಇದೆಯೋ ಎಂದು ತಡಕಾಡುತ್ತಿದ್ದಾರೆ. ನಗರದ ಗಗನ ಮಹಲ್ ಗಾರ್ಡನ್‌ನಲ್ಲಿ ದೊಡ್ಡ ದೊಡ್ಡ ಮರಗಳು ಹಾಗೂ ಪಕ್ಕದಲ್ಲೇ ಕಂದಕ ಇರುವುದರಿಂದ ಸ್ವಲ್ಪ ತಂಪಾದ ಗಾಳಿ ಬೀಸುತ್ತದೆ. ಗ್ರಾಮೀಣ ಭಾಗದಿಂದ ಬರುವ ಜನರು ಹಾಗೂ ವಿದ್ಯಾರ್ಥಿಗಳು, ಪ್ರವಾಸಿಗರು ಇಲ್ಲೊಂದಿಷ್ಟು ರೆಸ್ಟ್ ಮಾಡೋಣ ಎಂದು ಕುಳಿತರೆ ಸಾಕು ಕ್ಷಣಾರ್ಧದಲ್ಲಿ ಹಾಯಾಗಿ ಮಲಗಿಬಿಡುತ್ತಾರೆ. ಮಧ್ಯಾಹ್ನದ ವೇಳೆ ಇಲ್ಲಿಗೆ ಬಂದರೆ ಸಂಜೆ ಆದರೂ ಹೊರಗೆ ಹೋಗುವ ಮನಸ್ಸೇ ಬರುವುದಿಲ್ಲ. ಇನ್ನು ನಗರದಲ್ಲಿರುವ ಹೊಟೇಲ್‌ಗಳಿಗೆ ಹೋಗಿ ನೀರು ಕೇಳಿದರೆ ಬೇಕಿದ್ದರೆ ಚಹಾ ಕುಡಿಯಿರಿ, ನಾಸ್ಟಾ ಮಾಡಿ ಆದರೆ, ನೀರು ಮಾತ್ರ ಕೇಳಬೇಡಿ ಎನ್ನುವಂತಹ ಸ್ಥಿತಿ ಬಂದಿದೆ. ನಗರಕ್ಕೆ ೧೨ ದಿನಗಳಾದರೂ ನೀರು ಸರಬರಾಜು ಆಗದ ಹಿನ್ನೆಲೆ ಬಹುತೇಕ ಕಡೆಗಳಲ್ಲಿ ಸಮಸ್ಯೆ ಎದುರಾಗಿವೆ.

ರೈತರು ಕಾರ್ಮಿಕರ ಪಾಡು ಹೇಳತೀರದು: ಇದೀಗ ಬೇಸಿಗೆ ಇರುವುದರಿಂದ ಬಿಸಿಲಿನಲ್ಲೇ ಕೆಲಸ ಮಾಡುವ ಅನಿವಾರ್ಯತೆ ಕೂಲಿ ಕಾರ್ಮಿಕರಿಗೆ ಹಾಗೂ ರೈತರಿಗೆ ಇರುವುದರಿಂದ ಬಿರು ಬಿಸಿಲಿನಲ್ಲೇ ಕೆಲಸ ಮಾಡುತ್ತಿದೆ ಈ ಕಾರ್ಮಿಕ ವರ್ಗ. ದಿನಕ್ಕೆ ಸಿಗುವ ₹ ೪೦೦ ರಿಂದ ₹೭೦೦ ಕೂಲಿಗಾಗಿ ದಿನವಿಡಿ ಸುಡುವ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದಾರೆ ಕಾರ್ಮಿಕರು. ಇನ್ನೊಂದೆಡೆ ಭೂತಾಯಿ ಕೈ ಹಿಡೀತಾಳೆ ಎಂಬ ಭರವಸೆಯ ಮೇಲೆ ನಸುಕಿನಲ್ಲಿ ಹೋಗಿ ಜಮೀನಿನಲ್ಲಿ ಕೆಲಸ ಮಾಡುತ್ತಿದೆ ರೈತಾಪಿ ವರ್ಗ.

ಕೆಎಸ್‌ಎನ್‌ಡಿಎಂಸಿ ಅಲರ್ಟ್:ಮಾ.೨೬ರಿಂದಲೇ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗಗಳಲ್ಲಿ ಉಷ್ಣತೆ ಹೆಚ್ಚಾಗುತ್ತಿದ್ದು, ಇದೀಗ ೪೨ ಡಿಗ್ರಿಗೆ ಬಂದು ತಲುಪಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ksndmc (Karnataka State Disaster Management Authority) ಅಲರ್ಟ್ ಮಾಡಿದೆ. ಈಗಾಗಲೇ ತಾಪಮಾನ ಹೆಚ್ಚಾಗಿದ್ದು, ಇನ್ಮುಂದೆ ಇನ್ನಷ್ಟು ಉಷ್ಣಾಂಶ ಹೆಚ್ಚಾಗಲಿದೆ ಎಂದು ksndmc (ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ) ಹೇಳಿದ್ದು ಜನತೆಯ ನಿದ್ದೆಗೆಡಿಸಿದೆ. ಇನ್ನೊಂದೆಡೆ India Meteorological Department(ಭಾರತದ ಹವಾಮಾನ ಇಲಾಖೆ) ಇಂದಲೂ ಸಹ ಹೊರಬಿದ್ದಿರುವ ಅಂಕಿ ಸಂಖ್ಯೆಗಳ ಪ್ರಕಾರ ಮಾರ್ಚ್ ೨೯ಕ್ಕೆ ೩೯ಡಿಗ್ರಿ ತಾಪಮಾನ ಇದ್ದು, ಇದು ಏಪ್ರಿಲ್ ನಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ.

ಸನ್‌ಸ್ಟ್ರೋಕ್‌ ಬಗ್ಗೆ ಇರಲಿ ಎಚ್ಚರಿಕೆ:

ಇದೇ ರೀತಿ ಬಿಸಿಲು ಹೆಚ್ಚಾಗುತ್ತಾ ಹೋದರೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮನೆಯಿಂದ ಹೊರಬರುವುದು ಇನ್ನೂ ಕಷ್ಟವಾಗಲಿದೆ. ಅದರಲ್ಲೂ ಮಕ್ಕಳು ಹಾಗೂ ವೃದ್ಧರಿಗೆ ಸನ್‌ಸ್ಟ್ರೋಕ್(ಬಿಸಿಲಾಘಾತ)ಆಗುವ ಸಾಧ್ಯತೆ ಹೆಚ್ಚಾಗಿವೆ. ಹೀಗಾಗಿ ಆದಷ್ಟು ಎಚ್ಚರಿಕೆಯಲ್ಲಿರುವುದು ಅಗತ್ಯವಾಗಿದೆ. ಇದರಿಂದ ಅದೆಷ್ಟೋ ಮಕ್ಕಳು, ವೃದ್ಧರು ಜೀವಕಳೆದುಕೊಂಡ ಉದಾಹರಣೆ ಇದೆ. ಆದ್ದರಿಂದ ಜಿಲ್ಲೆಯ ಜನತೆ ತಮ್ಮ ಮಕ್ಕಳು ಹಾಗೂ ಹೆತ್ತವರನ್ನು ಬಿಸಿಲಿನಲ್ಲಿ ಹೊರಗೆ ಕಳಿಸದೆ ಇರುವುದೇ ಸೂಕ್ತ.

ಹೆಸ್ಕಾಂ ಸಿಬ್ಬಂದಿಯ ಗೋಳಾಟ:

ಬೇಸಿಗೆ ಸಮಯ ಆಗಿದ್ದರಿಂದ ವಿದ್ಯುತ್ ವಿತರಣೆ ಕೇಂದ್ರದ ಜವಾಬ್ದಾರಿಯೂ ಹೆಚ್ಚಳವಾಗಿದೆ. ಇಂತಹ ಬಿರು ಬಿಸಿಲಿನ ಮಧ್ಯಾಹ್ನದ ಸಮಯದಲ್ಲಿ ಲೈನ್‌ಮ್ಯಾನ್‌ಗಳು ವಿದ್ಯುತ್‌ ಫಾಲ್ಟ್(ವ್ಯತ್ಯಾಸ), ಮೆಂಟೇನೆನ್ಸ್ ಕೆಲಸ ಬಂದರೆ ಸಾಕು ಲೈನ್‌ಮನ್ ಗಳಿಗೆ ನಡುಕ ಶುರುವಾಗಿದೆ. ಕಂಬದ ಮೇಲೆ ಹತ್ತಿ ಕೆಲಸ ಮಾಡಬೇಕಾದರೆ, ಕಂಬ ಕಾದಿರುತ್ತದೆ. ಅದಕ್ಕೆ ಅಳವಡಿಸಿದ ಕಬ್ಬಿಣದ ಪಟ್ಟಿಯೂ ಸುಡುತ್ತಿರುತ್ತದೆ. ಹೀಗಾಗಿ ಕಾಯಿಸಿದ ಹಂಚಿನ ಮೇಲೆ ಕುಳಿತು ಕೆಲಸ ಮಾಡುವಂತೆ ಆಗುತ್ತದೆ ಎಂದು ಮನಗೂಳಿ ಶಾಖಾಧಿಕಾರಿ ಚನ್ನಗೌಡ ಎಸ್. ಪಾಟೀಲ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೇಗನೆ ಅಂದರೆ ಫೆಬ್ರವರಿ ತಿಂಗಳಲ್ಲಿಯೇ ಬಿಸಿಲಿನ ತಾಪ ಹೆಚ್ಚಾಗಿದ್ದು, ಉಷ್ಣಾಂಶದಲ್ಲಿ ಸಾಕಷ್ಟು ಏರಿಕೆಯಾಗಿ ಈಗಲೇ ೪೧ ಡಿಗ್ರಿ ಸೆಲ್ಸಿಯಸ್ ತಲುಪಿದೆ. ಮುಂದಿನ ಏಪ್ರಿಲ್ ಮತ್ತು ಮೇ ನಲ್ಲಿ ಜೀವನ ಸಾಗಿಸುವುದು ಬಹಳ ಕಷ್ಟಕರವಾಗಿದೆ.

-ಚನ್ನಗೌಡ. ಎಸ್. ಪಾಟೀಲ್, ಬಸವನ ಬಾಗೇವಾಡಿ ನಿವಾಸಿ, ಹೆಸ್ಕಾಂ ಉದ್ಯೋಗಿ.

----

ಬೇಸಿಗೆ ಇರುವುದರಿಂದ ಜನರು ಹೊರಗೆ ಓಡಾಡಬಾರದು, ಅವಶ್ಯಕತೆ ಇದ್ದರೆ ಮಾತ್ರ ಬಿಸಲಿನಲ್ಲಿ ಹೊರಗೆ ಬರಬೇಕು. ಇಲ್ಲವಾದಲ್ಲಿ ಮನೆಯಲ್ಲಿ, ತಂಪು ಸ್ಥಳಗಳಲ್ಲಿ ಇದ್ದು ಉಷ್ಣತೆಯಿಂದ ಪಾರಾಗಬೇಕಿದೆ. ಎಳೆರು, ಕಲ್ಲಂಗಡಿ, ಮಜ್ಜಿಗೆ ಮುಂತಾದ ಪಾನಿಯಗಳನ್ನು ಹೆಚ್ಚಾಗಿ ಸೇವಿಸಿ ದೇಹದ ತಾಪಮಾನ ಕಡಿಮೆ ಮಾಡಿಕೊಳ್ಳಬೇಕಿದೆ. ಅಷ್ಟಾಗಿಯೂ ಕಣ್ಣಿಗೆ ಕತ್ತಲು ಬರುವುದು, ಸುಸ್ತು, ಆಯಾಸ ಎನಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

- ಡಾ.ಬಾಬು ಕುಚನೂರ, ವೈದ್ಯರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ