ಶಿರಸಿ: ಕೃಷಿಯಲ್ಲಿ ಉದಾಸೀನತೆ ದೂರಮಾಡಿಕೊಂಡು ಕೃಷಿ ಕ್ಷೇತ್ರದ ಸಾಧನೆ ಇನ್ನಷ್ಟು ಹೆಚ್ಚಬೇಕು ಎಂದು ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಅವರು ಭಾನುವಾರ ಸ್ವರ್ಣವಲ್ಲೀ ಮಠದ ಸುಧರ್ಮಾ ಸಭಾಂಗಣದಲ್ಲಿ ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ ಸೋಂದಾ, ಟಿಎಸ್.ಎಸ್, ಟಿಎಂಎಸ್, ಗ್ರಾಮಾಭ್ಯುದಯ , ಜಾಗೃತ ವೇದಿಕೆ ಸೋಂದಾ ಆಶ್ರಯದಲ್ಲಿ ಹಮ್ಮಿಕೊಂಡ ಕೃಷಿ ಜಯಂತಿಯ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ, ಮಾತನಾಡಿದರು.ಪೌಷ್ಠಿಕಾಂಶ ನೀಡುವ ಬಗ್ಗೆ ಉದಾಸೀನತೆ ಎಲೆಚುಕ್ಕೆ ರೋಗಕ್ಕೆ ಕಾರಣ. ಮಣ್ಣಿಗೆ ಪೋಷಕಾಂಶಗಳನ್ನು ನೀಡದಿದ್ದರೆ ಭೂಮಿ ಬರಡಾಗುತ್ತದೆ. ನಿರಂತರ ಕೃಷಿಯ ಬಗ್ಗೆ ಗಮನ ವಹಿಸಿ, ನಿರಂತರ ಪ್ರಯತ್ನ ಮಾಡಬೇಕು. ಮಲೆನಾಡು ಭಾಗದ ರೈತರಿಗೆ ಬೆಟ್ಟಗಳ ವಿಷಯದಲ್ಲಿ ಕಾನೂನು ತೊಡಕಾಗುತ್ತಿದ್ದು, ಬೆಟ್ಟಗಳನ್ನು ಉತ್ಪನ್ನಗಳನ್ನು ತೋಟಕ್ಕೆ ಬಳಕೆ ಮಾಡಿಕೊಂಡು ರೋಗ ಬಾರದಂತೆ ನೋಡಿಕೊಳ್ಳಬೇಕು. ಕೃಷಿಕರು ಮಣ್ಣಿನ ಪರೀಕ್ಷೆ ಮಾಡದೇ ಗೊಬ್ಬರದ ನಿರ್ಣಯ ಮಾಡಬಾರದು. ಮಣ್ಣಿನ ಆರೋಗ್ಯ ಕಾಪಾಡುವುದು ಮುಖ್ಯ. ಜೈವಿಕ ಗೊಬ್ಬರಕ್ಕೆ ಹೆಚ್ಚು ಮಹತ್ವ ನೀಡಬೇಕು. ಪ್ರಮುಖ ವಾಣಿಜ್ಯ ಬೇಸಾಯವಾದ ಯಾಲಕ್ಕಿ ಕೃಷಿಯಿಂದ ಇಂದು ವಿಮುಖರಾಗುತ್ತಿದ್ದೇವೆ. ಮಿಶ್ರ ಬೆಳೆ ಕೃಷಿಯ ಬಗ್ಗೆಯೂ ಆಸಕ್ತಿ ಮೂಡಿಸಿಕೊಳ್ಳಬೇಕು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಭಗವಂತನ ಸರ್ವ ವ್ಯಾಪಕತೆ, ತೇಜಸ್ಸು, ಭಕ್ತ ವಾತ್ಸಲ್ಯ ನಮ್ಮ ಸ್ಮೃತಿಗೆ ತರುವ ದಿನ ನೃಸಿಂಹ ಜಯಂತಿ. ಭಕ್ತನೊಬ್ಬನಿಗೇ ಅವತರಿಸಿ ಬಂದವನು ನೃಸಿಂಹ ದೇವರು ಎಂದರು.ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿದರು. ವಿಚಾರಗೋಷ್ಠಿಯ ನಿರ್ಣಯಗಳನ್ನು ಡಾ.ಜಿ.ವಿ.ಹೆಗಡೆ ಹುಳಗೋಳ ಮಂಡಿಸಿದರು. ಶ್ರೀಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ, ಕಾರ್ಯದರ್ಶಿ ಜಿ.ವಿ.ಹೆಗಡೆ ಗೊಡವೆಮನೆ ಉಪಸ್ಥಿತರಿದ್ದರು. ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆರ್.ಎನ್.ಹೆಗಡೆ ಉಳ್ಳೀಕೊಪ್ಪ ಸ್ವಾಗತಿಸಿದರು. ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಕಾರ್ಯದರ್ಶಿ ಸುರೇಶ ಹೆಗಡೆ ಹಕ್ಕಿಮನೆ ನಿರೂಪಿಸಿದರು.
ಉತ್ತಮ ಕೃಷಿಕ(ಕೃಷಿ ಕಂಠೀರವ)- ಮಹೇಶ ಚಂದ್ರಶೇಖರ ಹೆಗಡೆ ಅರಗಿನಮನೆ, ಸಾಧಕ ಕೃಷಿ ಮಹಿಳೆ-ವೀಣಾ ಮಹಾಬಲೇಶ್ವರ ಹೆಗಡೆ ಹೆಬ್ಳೆಮನೆ, ಸಾಧಕ ಕೃಷಿ ಪೂರಕ ಸಂಸ್ಥೆ- ಪ್ರಗತಿ ಮಿತ್ರ ರೈತ ಉತ್ಪಾದಕ ಕಂಪನಿ ಬಾಳೆಗದ್ದೆ, ಸಾಧಕ ಕೃಷಿ ಕುಶಲಕರ್ಮಿ-ಗಣಪತಿ ಭೈರವೇಶ್ವರ ಭಟ್ಟ ಕಲ್ಲೇಮನೆ, ಅಚವೆ, ಮಹಾಬಲೇಶ್ವರ ಅನಂತ ಹೆಗಡೆ ಮೆಣಸುಮನೆ ವಾನಳ್ಳಿ. ಉತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿಪುರಸ್ಕೃತರು ಪ್ರಥಮ-ಗಣಪತಿ ವೆಂಕಟರಮಣ ಹೆಗಡೆ ಎಮ್ಮೆನಹೋಂಡಾ, ದ್ವಿತೀಯ- ಬಿ.ಜಿ.ಹೆಗಡೆ ಹೆಗಡೆ ಮತ್ತು ಎನ್.ಜಿ.ಹೆಗಡೆ ಗೇರಾಳ, ದ್ವಿತೀಯ-ಸುಬ್ರಾಯ ಗಜಾನನ ಹೆಗಡೆ ಊರತೋಟ. ಶತಾಯುಷಿ ವಿಶೇಷ ಪ್ರಶಸ್ತಿ- ಶ್ರೀಕೃಷ್ಣ ಜಯದೇವರಾವ್ ಕಲ್ಗುಂಡಿಕೊಪ್ಪ.