ವಿವಾಹಿತೆಯನ್ನು ಅಪಹರಿಸಿದ್ದು ಸೋದರತ್ತೆ, ಆಕೆಯ ಸಂಬಂಧಿ

KannadaprabhaNewsNetwork |  
Published : Sep 22, 2026, 04:15 AM ISTUpdated : Sep 22, 2026, 05:21 AM IST
Bengaluru kidnap case

ಸಾರಾಂಶ

ಇತ್ತೀಚೆಗೆ ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿವಾಹಿತ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅಪಹರಣಗೊಂಡಿದ್ದ ಪೂಜಾ ಅತ್ತೆ ಪಾಣಿದೇವಿ, ಈಕೆಯ ಸಂಬಂಧಿ ಕನ್ನಯ್ಯಲಾಲ್ ಮತ್ತು ಪೂಜಾ ಚಿಕ್ಕಪ್ಪ ಅಂದಾರಾಮ್ ಬಂಧಿತರು

 ಬೆಂಗಳೂರು : ಇತ್ತೀಚೆಗೆ ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿವಾಹಿತ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅಪಹರಣಗೊಂಡಿದ್ದ ಪೂಜಾ ಅತ್ತೆ ಪಾಣಿದೇವಿ, ಈಕೆಯ ಸಂಬಂಧಿ ಕನ್ನಯ್ಯಲಾಲ್ ಮತ್ತು ಪೂಜಾ ಚಿಕ್ಕಪ್ಪ ಅಂದಾರಾಮ್ ಬಂಧಿತರು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಕಾರಿನ ಚಾಲಕ ಸದ್ದಾಂಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಸ್ಟರ್‌ ಮೈಂಡ್‌ ಕನ್ನಯ್ಯಲಾಲ್

ಆರೋಪಿ ಕನ್ನಯ್ಯಲಾಲ್ ಇಡೀ ಪ್ರಕರಣದ ಮಾಸ್ಟರ್‌ ಮೈಂಡ್‌ ಆಗಿದ್ದು, ಈತ ಪೂಜಾಳ ಸೋದರತ್ತೆಯಾದ ಪಾಣಿದೇವಿಯ ಸಂಬಂಧಿಯಾಗಿದ್ದು, ಪೂಜಾ ಅಪಹರಣಕ್ಕೆ ಸಂಚು ರೂಪಿಸಿದ್ದ. ಇದಕ್ಕೆ ಪಾಣಿದೇವಿ ಹಣದ ವ್ಯವಸ್ಥೆ ಮಾಡಿದ್ದರು. ಪೂಜಾ, ಓಂ ಪ್ರಕಾಶ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿ ಬೆಂಗಳೂರಿಗೆ ಬಂದು ನೆಲೆಸಿದ್ದ ವಿಚಾರ ತಿಳಿದು ಪಾಣಿದೇವಿ ಆಕ್ರೋಶಗೊಂಡಿದ್ದರು. ಹೇಗಾದರೂ ಮಾಡಿ ಪೂಜಾಳನ್ನು ಅಪಹರಣ ಮಾಡಿ ಪತಿ-ಪತ್ನಿಯನ್ನು ದೂರ ಮಾಡಬೇಕು ಎಂದು ಹಠಕ್ಕೆ ಬಿದ್ದಿದ್ದಳು. ಪೂಜಾಳನ್ನು ಕಿಡ್ನಾಪ್‌ ಮಾಡಲು ಕನ್ನಯ್ಯಲಾಲ್ ನೇತೃತ್ವದಲ್ಲಿ ನಾಲ್ವರನ್ನು ಬೆಂಗಳೂರಿಗೆ ಕಳುಹಿಸಿದ್ದರು. ಆರೋಪಿಗಳು ಕೃತ್ಯಕ್ಕೆ ಪೂಜಾ ಚಿಕ್ಕಪ್ಪ ಅಂದಾರಾಮ್ ಕೂಡ ಸಾಥ್‌ ನೀಡಿದ್ದ. ಆರೋಪಿ ಕನ್ನಯ್ಯ ಲಾಲ್‌ ಕೂಡ ಬೆಂಗಳೂರಿಗೆ ಬಂದು ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ. ಕಿಡ್ನಾಪ್‌ ಮಾಡಿದ ಬಳಿಕ ಪೂಜಾಳನ್ನು ಹೈದಾರಾಬಾದ್‌ಗೆ ಕರೆದೊಯ್ಯಲು ತಯಾರಿ ನಡೆಸಿದ್ದ. ಇನ್ನು ಪಾಣಿದೇವಿ ಹಾಗೂ ಅಂದಾರಾಮ್ ಕೂಡ ಹೈದಾರಾಬಾದ್‌ನಲ್ಲಿ ಇದ್ದರು. ಆರೋಪಿಗಳು ಪೊಲೀಸರಿಗೆ ಸಿಕ್ಕಿ ಬೀಳುತ್ತಿದಂತೆ ತಮ್ಮ ಪೋನ್‌ಗಳನ್ನು ಸ್ವಿಚ್ ಆಫ್‌ ಮಾಡಿ ತಲೆಮರೆಸಿಕೊಂಡಿದ್ದರು.

ಏನಿದು ಪ್ರಕರಣ?:

ರಾಜಸ್ಥಾನದ ಪಾಲಿ ಜಿಲ್ಲೆ ಮೂಲದ ಪೂಜಾ ಮತ್ತು ಓಂ ಪ್ರಕಾಶ್ ಪ್ರೀತಿಸುತ್ತಿದ್ದರು. ಆದರೆ ತಮ್ಮ ಮದುವೆಗೆ ಪಾಲಕರು ವಿರೋಧ ವ್ಯಕ್ತಪಡಿಸಿದ್ದರಿಂದ ಫೆಬ್ರವರಿಯಲ್ಲಿ ಪಾಲಿ ಜಿಲ್ಲೆಯ ಕೋರ್ಟ್‌ನಲ್ಲಿ ಇಬ್ಬರು ಮದುವೆಯಾಗಿದ್ದರು. ನಂತರ ಪಾಲಕರ ಪ್ರಾಣ ಭಯದಿಂದ ರಾಜಸ್ಥಾನ ತೊರೆದು, ಅಗ್ರಹಾರ ದಾಸರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸೆ.16ರ ಸಂಜೆ ಪೂಜಾಳ ಮನೆಗೆ ಬಂದಿದ್ದ ಆರೋಪಿಗಳು ಆಕೆಯ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಕೂರಿಸಿಕೊಂಡು ಅಪಹರಣ ಮಾಡಿದ್ದರು. ಅಪಹರಣ ಮಾಡಿಕೊಂಡು ಹೋಗುವಾಗ ಕಾರನ್ನು ಅಡ್ಡಾದಿಡ್ಡಿ ಚಾಲನೆ ಮಾಡಿ, ಪೊಲೀಸ್ ವಾಹನ, ನ್ಯಾಯಾಧೀಶರ ವಾಹನ ಸೇರಿ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದ್ದರು. ಘಟನೆಯಲ್ಲಿ ಐದಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಸ್ಥಳೀಯರು ಆರೋಪಿಗಳನ್ನು ಹಿಡಿದು ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರೈತರ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ರೆ ರಾಜ್ಯಾದ್ಯಂತ ಹೋರಾಟ
ಸದೃಢ ದೇಶ ನಿರ್ಮಾಣಕ್ಕಾಗಿ ಯುವಪೀಳಿಗೆ ಕ್ರೀಡೆಯಲ್ಲಿ ಭಾಗವಹಿಸಿ