ಕೊಹ್ಲಿ, ರೋಹಿತ್‌ ಜೊತೆ ಕುಮಟಾ ಯುವಕನ ಫೋಟೋ ವೈರಲ್‌

KannadaprabhaNewsNetwork |  
Published : Jul 02, 2024, 01:32 AM IST
ರೋಹಿತ್ ಶರ್ಮಾ ಜೊತೆ ರಾಘವೇಂದ್ರ ದಿವಗಿ  | Kannada Prabha

ಸಾರಾಂಶ

ದಿವಗಿಯ ಯುವಕನೊಬ್ಬ ವಿರಾಟ್, ರೋಹಿತ್, ಹಾರ್ದಿಕ್ ಮತ್ತಿತರ ಜತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕನ್ನಡಪ್ರಭ ವಾರ್ತೆ ಕಾರವಾರ

ಬಾರ್ಬಡೋಸ್‌ನಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಎತ್ತಿ ಹಿಡಿಯುತ್ತಿದ್ದಂತೆ ದೇಶಾದ್ಯಂತ ಸಂಭ್ರಮ ಮನೆ ಮಾಡಿತ್ತು. ಜತೆಗೆ ಕುಮಟಾದ ದಿವಗಿಯಲ್ಲಿ ವಿಶೇಷ ಸಡಗರ ಉಂಟಾಯಿತು. ದಿವಗಿಯ ಯುವಕನೊಬ್ಬ ವಿರಾಟ್, ರೋಹಿತ್, ಹಾರ್ದಿಕ್ ಮತ್ತಿತರ ಜತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ರಾಘವೇಂದ್ರ ದಿವಗಿ. ಭಾರತ ತಂಡದ ಥ್ರೋಡೌನ್ ಸ್ಪೆಷಲಿಸ್ಟ್. 13 ವರ್ಷಗಳಿಂದ ಭಾರತೀಯ ತಂಡದ ಬೆನ್ನೆಲುಬಾಗಿ ಎಲ್ಲ ಬ್ಯಾಟ್ಸ್‌ಮನ್‌ಗಳಿಗೂ ಬಾಲ್ ಎಸೆದು ಅವರಲ್ಲಿರುವ ಪ್ರತಿಭೆಯನ್ನು ಇನ್ನಷ್ಟು ಗಟ್ಟಿಗೊಳಿಸಿದ ಯುವಕ. ಭಾರತೀಯ ಕ್ರಿಕೆಟ್ ಆಟಗಾರರು ಆ ಮಾಡುವಾಗ ರಾಘವೇಂದ್ರ ದಿವಗಿ ಇರಲೇಬೇಕು. ಎಲ್ಲ ವಿಧದಲ್ಲೂ ಬಿರುಗಾಳಿ ವೇಗದಲ್ಲಿ ಚೆಂಡನ್ನು ಎಸೆಯುತ್ತಿದ್ದರೆ ಈ ಸವಾಲನ್ನು ಸ್ವೀಕರಿಸಿ ಕೊಯ್ಲಿ, ರೋಹಿತ್, ಧೋನಿ, ತೆಂಡೂಲ್ಕರ್ ಮತ್ತಿತರರು ಚೆಂಡನ್ನು ಸಿಕ್ಸರ್, ಬೌಂಡರಿಗೆ ಅಟ್ಟುವ ಕಲೆ ಕರಗತ ಮಾಡಿಕೊಂಡರು. ಹೀಗಾಗಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಯಾವುದೇ ದೇಶದ ಬೌಲರ್‌ನನ್ನೂ ಸಲೀಸಾಗಿ ಎದುರಿಸುವಂತಾಗಿದೆ.

ಭಾರತ ತಂಡ ಸೇರಿದ್ದು ಹೇಗೆ?:

ಕ್ರಿಕೆಟ್ ಹುಚ್ಚಿನಿಂದ ರಾಘವೇಂದ್ರ ದಿವಗಿ ಅವರು ಮನೆ ಬಿಟ್ಟು ಹುಬ್ಬಳ್ಳಿಗೆ ತೆರಳಿ ಅಲ್ಲಿನ ಕ್ರಿಕೆಟಿಗರಿಗೆ ಅಭ್ಯಾಸಕ್ಕೆ ನೆರವಾಗುತ್ತಿದ್ದರು. ನಂತರ ಪರಿಚಿತರೊಬ್ಬರ ಮೂಲಕ ಬೆಂಗಳೂರಿಗೆ ತೆರಳಿದರು. ಅಲ್ಲೂ ಅದೇ ಕೆಲಸ ಮುಂದುವರಿಸಿದರು. ಇವರ ಚುರುಕಾದ ಕೆಲಸವನ್ನು ಜಾವಗಲ್ ಶ್ರೀನಾಥ್‌ ಗಮನಕ್ಕೆ ತಂದರು. ಶ್ರೀನಾಥ್‌ ರಣಜಿ ತಂಡದ ಜತೆ ಇರುವಂತೆ ಸೂಚಿಸಿದರು. ಅಲ್ಲೇ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಸೇರಿದರು. ಇವರ ಪ್ರತಿಭೆ ಗುರುತಿಸಿದ ಸಚಿನ್ ತೆಂಡುಲ್ಕರ್ 2011ರಲ್ಲಿ ಭಾರತ ತಂಡಕ್ಕೆ ಸಹಾಯಕ ಸಿಬ್ಬಂದಿಯಾಗಿ ಸೇರಿಸಿದರು. ಅಲ್ಲಿಂದ ಇಲ್ಲಿನ ತನಕ ರಾಘವೇಂದ್ರ ಭಾರತೀಯ ತಂಡದ ಕಾಯಂ ಸದಸ್ಯರಾಗಿದ್ದಾರೆ. ರಾಘವೇಂದ್ರ ಮಷಿನ್‌ನಲ್ಲಿ ಚೆಂಡನ್ನು ಎಸೆಯುವ ಕಲೆಯನ್ನೂ ಕರಗತ ಮಾಡಿಕೊಂಡಿದ್ದಾರೆ.

ಫೋಟೊ ವೈರಲ್‌:

ಈಗ ಟಿ20 ವಿಶ್ವಕಪ್ ಭಾರತಕ್ಕೆ ಒಲಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಲ್ಲಿ ವಿರಾಟ್ ಕೊಹ್ಲಿ ಜತೆ ರಾಘವೇಂದ್ರ ಕಪ್ ಎತ್ತಿ ಹಿಡಿದ, ರೋಹಿತ್ ಜತೆ ಸಂಭ್ರಮಿಸುತ್ತಿರುವ, ಇತರ ಆಟಗಾರರರೊಂದಿಗೆ ಸಂತಸ ಹಂಚಿಕೊಳ್ಳುತ್ತಿರುವ ಫೋಟೋಗಳು ವೈರಲ್ ಆಗಿವೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ