ಜಿಲ್ಲಾ ಛಾಯಾಗ್ರಾಹಕರ ಸಮಾವೇಶ, ಸಮ್ಮೀಲನ ಕಾರ್ಯಕ್ರಮದಲ್ಲಿ ಸಂಸದ
ಕನ್ನಡಪ್ರಭ ವಾರ್ತೆ ಕೊಪ್ಪಳ
ಛಾಯಾಗ್ರಾಯಕನ ಕೈಚಳಕದ ಒಂದು ಪೋಟೊ ಸಾವಿರ ಪುಟಗಳ ಇತಿಹಾಸ ಸಾರುವ ಶಕ್ತಿ ಹೊಂದಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಬಣ್ಣಿಸಿದರು.ನಗರದ ಶ್ರೀ ಶಿವಶಾಂತವೀರ ಮಂಗಳ ಭವನದಲ್ಲಿ ಭಾನುವಾರ ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದಿಂದ ಜರುಗಿದ ಜಿಲ್ಲಾ ಛಾಯಾಗ್ರಾಹಕರ ಸಮಾವೇಶ ಹಾಗೂ ಛಾಯಾಗ್ರಾಹಕರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಛಾಯಾಗ್ರಾಹಕರ ಪೋಟೊಗಳು ಇತಿಹಾಸವಾಗಿ ಉಳಿಯುತ್ತವೆ. ಇತಿಹಾಸ ಸಾರುತ್ತವೆ. ಛಾಯಾಗ್ರಾಹಕ ಇಲ್ಲ ಎನ್ನುವುದನ್ನು ಕಲ್ಪನೆ ಮಾಡಲು ಅಸಾಧ್ಯ. ಛಾಯಾಗ್ರಾಹಕರನ್ನು ಪ್ರತಿಯೊಬ್ಬರು ಗೌರವಿಸಬೇಕು. ಛಾಯಾಗ್ರಾಹಕ ಸಮಾಜದ ಕೈಗನ್ನಡಿಯಾಗಿ ಕಾರ್ಯ ಮಾಡುತ್ತಾನೆ. ಯಾವುದೇ ಕಾರಣದಿಂದ ಛಾಯಾಗ್ರಾಹಕ ಎದೆಗುಂದದೆ ತಮ್ಮ ಜವಾಬ್ದಾರಿಯುತ ವೃತ್ತಿಯನ್ನು ಮಾಡಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಿದೆ ಎಂದರು.ಉದ್ಯಮಿ ಶ್ರೀನಿವಾಸ ಗುಪ್ತಾ ಮಾತನಾಡಿ, ಛಾಯಾಗ್ರಾಹಕರಿಲ್ಲದೆ ಯಾವುದೇ ಶುಭ ಸಮಾರಂಭಗಳು ಪೂರ್ಣವಾಗುವುದಿಲ್ಲ. ಛಾಯಾಗ್ರಾಹಕರು ತಮ್ಮ ವೃತ್ತಿಯನ್ನು ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗುತ್ತಿದ್ದು, ಈ ಸಾರಿ ಕರ್ನಾಟಕ ಸರ್ಕಾರ ಆಸಂಘಟಿತ ಕಾರ್ಮಿಕರ ವಲಯಕ್ಕೆ ಸೇರಿಸಿರುವುದು ಛಾಯಾಗ್ರಾಹಕರಿಗೆ ಸ್ವಲ್ಪಮಟ್ಟಿಗೆ ಸಂತೋಷ ಉಂಟು ಮಾಡಿದೆ ಎಂದರು.
ಮೈನಳ್ಳಿಯ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಮಾತನಾಡಿ, ಒಳ್ಳೆಯ ತಂತ್ರಜ್ಞಾನದಿಂದ ಈಗಿನ ಛಾಯಾಗ್ರಹಣ ಮುನ್ನಡೆದಿದೆ. ಈ ರೀತಿಯಲ್ಲಿರುವ ಎಲ್ಲ ಛಾಯಾಗ್ರಾಹಕರು ತಮಗೆ ಸಿಕ್ಕ ಕೆಲಸವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಬೇಕು ಎಂದರು.ಡಿವೈಎಸ್ಪಿ ಮುತ್ತಣ್ಣ ಸಬರಗೋಳ, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಛಾಯಾಗ್ರಾಹಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಜಯಕುಮಾರ್ ವಸ್ತ್ರದ್ ಮಾತನಾಡಿದರು.
ಜಿಲ್ಲಾ ಛಾಯಾಗ್ರಾಹಕ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ರಾಜಶೇಖರ್ ಶಾಗೋಟಿ, ರಫಿ ಹಿರೇಹಾಳ, ಶಿವಸ್ವಾಮಿ ಮ್ಯಾಗಳಮಠ, ಜಿಲ್ಲಾ, ತಾಲೂಕು ಛಾಯಾಗ್ರಾಹಕ ಸಂಘದವರು, ಛಾಯಾಗ್ರಾಹಕರು ಇದ್ದರು. ಛಾಯಾಚಿತ್ರ ಪ್ರದರ್ಶನ:ಸಮಾವೇಶದಲ್ಲಿ ಉತ್ತಮ ಛಾಯಾಚಿತ್ರಗಳ ವೀಕ್ಷಣೆಗೆ ಅಳವಡಿಸಲಾಗಿತ್ತು. ಸಂಸದ ರಾಜಶೇಖರ ಹಿಟ್ನಾಳ ಹಾಗೂ ಗಣ್ಯರು ಅವುಗಳನ್ನು ವೀಕ್ಷಿಸಿ ಪ್ರಶಂಸಿದರು.