ಸಂಘ, ಸಂಸ್ಥೆಗಳು ಪಾರದರ್ಶಕವಾಗಿದ್ದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ

KannadaprabhaNewsNetwork | Published : Apr 14, 2025 1:17 AM

ಸಾರಾಂಶ

ಸಮಾಜದಲ್ಲಿರುವ ಸಮಸ್ಯೆಗಳನ್ನು ಬಿಂಬಿಸಿ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳ ಗಮನ ಸೆಳೆದು ಅವುಗಳಿಗೆ ಪರಿಹಾರ ಕಂಡು ಹಿಡಿಯುವ ಕೆಲಸ ಮಾಧ್ಯಮಗಳಿಂದ ಮಾತ್ರ ಸಾಧ್ಯ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಯಾವುದೇ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾರದರ್ಶಕವಾಗಿ ಕೆಲಸ ಮಾಡಬೇಕು. ಆಗ ಮಾತ್ರ ಅವುಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹೇಳಿದರು.

ಪಟ್ಟಣದ ಪಿಕಾರ್ಡ್ ಬ್ಯಾಂಕಿನ ರೈತ ಸಮುದಾಯ ಭವನದಲ್ಲಿ ಸೃಜನ ಲೇಖಕರು ಮತ್ತು ಕಲಾವಿದರ ಬಳಗವು ಭಾನುವಾರ ಏರ್ಪಡಿಸಿದ್ದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸೃಜನ-ಸದ್ಭಾವನಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿರುವ ಸಮಸ್ಯೆಗಳನ್ನು ಬಿಂಬಿಸಿ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳ ಗಮನ ಸೆಳೆದು ಅವುಗಳಿಗೆ ಪರಿಹಾರ ಕಂಡು ಹಿಡಿಯುವ ಕೆಲಸ ಮಾಧ್ಯಮಗಳಿಂದ ಮಾತ್ರ ಸಾಧ್ಯ. ಸಮಾಜಮುಖಿ ಮತ್ತು ಜನಪರ ಪತ್ರಿಕೆಗಳನ್ನು ಜನತೆ ಗುರುತಿಸಿ ಬೆನ್ನು ತಟ್ಟುವ ಕೆಲಸ ಮಾಡುತ್ತಾರೆ ಎಂದರು.

ಸಮಾಜದ ಉತ್ತಮರನ್ನು ಗುರುತಿಸಿ ಸನ್ಮಾನಿಸಿದರೆ ಜನ ಗೌರವಿಸುತ್ತಾರೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಮಾಧ್ಯಮ. ಪತ್ರಕರ್ತರು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಅದೇ ರೀತಿಯಲ್ಲಿ ಪ್ರಶಸ್ತಿ ಪಡೆದವರು ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಪ್ರತಿಯೊಬ್ಬರಿಗೂ ಶಿಕ್ಷಣ ಮತ್ತು ಆರೋಗ್ಯ ಬಹಳ ಮುಖ್ಯ. ಭಾರತದ ಸಂಸ್ಕೃತಿಗೆ ಒಳ್ಳೆಯ ಹೆಸರಿದ್ದು, ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕಲಿಸಬೇಕು. ಸಮಾಜಮುಖಿ ಕೆಲಸ ಮಾಡಿ ರಾಷ್ಟ್ರದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಸರ್ವರೂ ಸದಾ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವನ್ನು ರೂಢಿಸಿಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಕಾಗಿನೆಲೆ ಕನಕ ಗುರುಪೀಠ ಕೆ.ಆರ್.ನಗರ ಶಾಖಾ ಮಠದ ಶ್ರೀ.ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಆನಂದದಾಯಕ ಜೀವನ ನಡೆಸುವವರ ಸಂಖ್ಯೆ ತುಂಬಾ ವಿರಳ. ದುಃಖಕ್ಕೆ ಎಡೆಮಾಡಿಕೊಡದ ಜೀವನಕ್ಕೆ ವಿಚಾರವಿರಬೇಕು. ಅವಿಚಾರವಾಗಿ ನಡೆದರೆ ದುಃಖ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬ ಮನುಷ್ಯನಲ್ಲಿಯೂ ಸದ್ವಿಚಾರವಿರಬೇಕು. ಮಾನವನು ಪಾಪವನ್ನು ತ್ಯಾಗ ಮಾಡಿ ಪುಣ್ಯ ಸಂಪಾದಿಸಬೇಕು. ವಿಚಾರದೊಂದಿಗೆ ಪ್ರಜ್ಞೆಯಿಲ್ಲದಿದ್ದರೆ ಮುನ್ನಡೆಯುವುದು ಸಾಧ್ಯವಿಲ್ಲ. ನಾವು ಬದುಕಿ, ಇತರರಿಗೂ ಜೀವನ ನಡೆಸಲು ಅವಕಾಶ ಮಾಡಿಕೊಡುವ ರೀತಿಯಲ್ಲಿ ಪತ್ರಿಕೆಯನ್ನು ನಡೆಸಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಸೃಜನ-ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಗದ ಅಧ್ಯಕ್ಷ ರಾ.ಸುರೇಶ್, ಪುರಸಭೆ ಅಧ್ಯಕ್ಷ ಡಿ.ಶಿವಕುಮಾರ್, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ರಾಘವೇಂದ್ರ, ತಾಲೂಕು ವಿದ್ಯಾರ್ಥಿ ರೈತ ವೇದಿಕೆ ಅಧ್ಯಕ್ಷ ಎ.ಎಸ್.ರಾಮಪ್ರಸಾದ್, ತಾ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಆದ ವೈದ್ಯಾಧಿಕಾರಿ ಡಾ.ಡಿ. ನಟರಾಜ್‌, ಜೀವ ಆರ್ಥೋಕೇರ್‌ ಮೂಳೆ ತಜ್ಞ ಡಾ.ಕೆ.ಆರ್‌.ಗೌತಮ್‌ ಮಾತನಾಡಿದರು.

ಪಿಕಾರ್ಡ್ ಬ್ಯಾಂಕಿನ ನಿರ್ದೇಶಕ ಎಂ.ಎಸ್.ಹರಿಚಿದಂಬರ, ಪುರಸಭೆ ಮಾಜಿ ಸದಸ್ಯ ಕೆ.ವಿನಯ್, ಮುಖಂಡರಾದ ಎಂ.ಬಿ.ಲೋಕನಾಥ್, ಡಿ.ಜಿ.ಗುರುಶಾಂತಪ್ಪ, ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ದೊಡ್ಡಯ್ಯ, ಬಿ.ಎಸ್.ಅಶ್ವಿನಿ, ನಟರಾಜು, ರೈತ ಮುಖಂಡ ಅರುಣ್‌ ಕುಮಾರ್‌ ಮೊದಲಾದವರು ಇದ್ದರು.

Share this article