ವಾಲ್ಮೀಕಿ ಸಮಾಜ ತುಳಿಯುವ ಹುನ್ನಾರ, ಹೊಸಪೇಟೆಯಲ್ಲಿ ಪ್ರತಿಭಟನೆ

KannadaprabhaNewsNetwork |  
Published : Sep 26, 2025, 01:00 AM IST

ಸಾರಾಂಶ

ಕುರುಬ ಹಾಗೂ ಇತರ ಸಮಾಜಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹೊಸಪೇಟೆ ತಾಲೂಕು ವಾಲ್ಮೀಕಿ ನಾಯಕ ಸಮಾಜದ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಹೊಸಪೇಟೆ: ಕುರುಬ ಹಾಗೂ ಇತರ ಸಮಾಜಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ತಾಲೂಕು ವಾಲ್ಮೀಕಿ ನಾಯಕ ಸಮಾಜದ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ಮಹರ್ಷಿ ವಾಲ್ಮೀಕಿ ವೃತ್ತದಿಂದ ಆರಂಭಗೊಂಡ ಮೆರವಣಿಗೆ ನಗರದ ಮದಕರಿ ನಾಯಕ ವೃತ್ತದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯಾಗಿ ಮಾರ್ಪಟ್ಟಿತು. ಈ ವೇಳೆ ಮುಖಂಡರು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ನಗರದ ವಿವಿಧ ವೃತ್ತಗಳಲ್ಲಿ ಸಾಗಿ ಬಂದು ಡಾ. ಪುನೀತ್ ರಾಜಕುಮಾರ ವೃತ್ತದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಯಾಗಿ ಮಾರ್ಪಟಿತು. ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಕಪ್ಪು ಶಾಲು ಹಾಗೂ ಕಪ್ಪು ದಿರಿಸು ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.

ಬಲಿಷ್ಠ ಕುರುಬ ಸಮಾಜವನ್ನು ಎಸ್ಟಿ ಕೆಟಗರಿಗೆ ಸೇರ್ಪಡೆ ಮಾಡುವ ಮೂಲಕ ವಾಲ್ಮೀಕಿ ಸಮಾಜ ತುಳಿಯುವ ಹುನ್ನಾರ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾರ್ಯದಿಂದ ಹಿಂದೆ ಸರಿಯಬೇಕು.‌ ಸಮಾಜದ ಶಾಸಕರು, ಸಚಿವರು, ಸಂಸದರು ರಾಜೀನಾಮೆ ಕೊಟ್ಟು ಹೊರಬರಬೇಕು. ವಾಲ್ಮೀಕಿ ಸಮಾಜದ ಬೆನ್ನಿಗೆ ನಿಂತು ಗೆಲ್ಲಿಸುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗೋಸಲ ಭರ್ಮಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ, ಜಾತಿ ನಡುವೆ ಕಲಹ ಸೃಷ್ಟಿ ಮಾಡಲು ಹೊರಟಿದ್ದಾರೆ. ಎಸ್‌ಟಿ ಸಮುದಾಯಗಳನ್ನು ಕನಿಷ್ಠ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ನಡೆದಿದೆ. ವಾಲ್ಮೀಕಿ ಸಮಾಜದ 14 ಶಾಸಕರು ಕೈಯನ್ನು ಸಿದ್ದರಾಮಯ್ಯ ಕಟ್ಟಿ ಹಾಕಿದ್ದಾರೆ. ಶಾಸಕರು, ಎಂಎಲ್‌ಸಿಗಳು ಸಹ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ. ವಾಲ್ಮೀಕಿ ಸಮಾಜದ ಬೆಂಬಲದಿಂದ ಶಾಸಕರಾಗಿರುವ ಅವರು

ಸಮಾಜದ ಪರವಾಗಿ ನಿಲ್ಲದೇ ಹೋದಲ್ಲಿ‌ ಮುಂದಿನ ದಿನಗಳಲ್ಲಿ ಅವರ ನಿವಾಸದ‌ ಮುಂದೆ ಪ್ರತಿಭಟನೆ ನಡೆಸಲಾಗುವುದು. ಸರ್ಕಾರಕ್ಕೂ ಹತ್ತು ದಿನಗಳ ಗಡುವು ನೀಡಲಾಗಿದ್ದು, ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಮಾಜದ ಕಾರ್ಯದರ್ಶಿ ದೇವರಮನಿ ಶ್ರೀನಿವಾಸ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಸಿ-ಎಸ್‌ಟಿ ಸಮಾಜ ತುಳಿಯಲು ಬಂದಿದ್ದಾರೆ. ಅವರು ಒಂದು ಜಾತಿ, ಸಮುದಾಯಕ್ಕೆ ಸೀಮಿತವಾಗಿ ಎಸ್‌ಟಿ ಸಮಾಜದ ಮಕ್ಕಳ ಅನ್ನ ಹಾಗೂ ಶಿಕ್ಷಣದ ಹಕ್ಕು ಕಿತ್ತುಕೊಳ್ಳಲು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಬಿ.ಎಸ್. ಜಂಬಯ್ಯ ನಾಯಕ ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಕುರುಬ ಮತ್ತು‌ ಇತರ ಸಮುದಾಯಗಳನ್ನು ಸೇರಿಸುವ ಯೋಜನೆಯನ್ನು ತಕ್ಷಣವೇ ನಿಲ್ಲಿಸಬೇಕು. ಈಗಾಗಲೇ ಎಸ್‌ಟಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದುಕೊಂಡವವರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಬೇಕು ಎಂದರು.

ಮುಖಂಡ ಗುಜ್ಜಲ ನಾಗರಾಜ ಮಾತನಾಡಿ, ವಾಲ್ಮೀಕಿ ನಾಯಕ ಸಮಾಜಕ್ಕೆ ಅನ್ಯಾಯವಾದರೆ, ಬಳ್ಳಾರಿ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವೆ ಎಂದು ಈಗಾಗಲೇ ಸಂಸದ ಈ. ತುಕಾರಾಂ ಅವರು ಸಮಾಜದ ರಾಜ್ಯಮಟ್ಟದ ಸಭೆಯಲ್ಲೇ ಹೇಳಿಕೆ ನೀಡಿದ್ದಾರೆ. ಸಮಾಜದ ಮೀಸಲಾತಿಗೆ ಧಕ್ಕೆ ಉಂಟಾದರೆ, ಸಮಾಜದ ಜನಪ್ರತಿನಿಧಿಗಳು ಧ್ವನಿ ಎತ್ತಬೇಕಿದೆ ಎಂದರು.

ಜಿಲ್ಲಾಧಿಕಾರಿ ಆಗಮನಕ್ಕೆ ಪಟ್ಟು: ನಗರದ ಪುನೀತ್ ರಾಜಕುಮಾರ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿಪತ್ರ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು.

ವಾಲ್ಮೀಕಿ ಸಮಾಜದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ರವಾನಿಸಲಾಯಿತು.

ಎಡಿಸಿ ಬಾಲಕೃಷ್ಣಪ್ಪ ಮತ್ತು ತಹಸೀಲ್ದಾರ್‌ ಶ್ರುತಿ ಅವರು ಮನವಿಪತ್ರ ಸ್ವೀಕಾರಕ್ಕೆ ಆಗಮಿಸಿದ್ದರು. ಈ ವೇಳೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಎಸ್ಪಿ ಜಾಹ್ನವಿ ಅವರ ಜತೆಗೂಡಿ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರು ಆಗಮಿಸಿ‌ ಮನವಿ ಸ್ವೀಕರಿಸಿದರು.

ಮುಖಂಡರಾದ ಎಸ್.ಎಸ್. ಚಂದ್ರಶೇಖರ, ಬೆಳಗೋಡ್ ಅಂಬಣ್ಣ, ಗುಡಿ ಗುಡಿ ಸೋಮನಾಥ, ಕಿನ್ನಾಳ್ ಹನುಮಂತಪ್ಪ, ಪೂಜಾರಿ ದುರ್ಗಪ್ಪ, ಜಗದೀಶ್ ಕಮಟಗಿ, ಪಿ.ವಿ. ವೆಂಕಟೇಶ್, ಗುಜ್ಜಲ ಗಣೇಶ ಮತ್ತು ಏಳುಕೇರಿ ದೈವಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ