ಕನ್ನಡದ ಗಜಲ್ ಪ್ರಕಾರಕ್ಕೆ ಜೀವಂತಿಕೆ ಕೊಟ್ಟದ್ದು ಕವಿ ಶಾಂತರಸರು

KannadaprabhaNewsNetwork |  
Published : Apr 09, 2026, 02:00 AM IST
ಚಿತ್ರ 2 | Kannada Prabha

ಸಾರಾಂಶ

ಹಿರಿಯೂರು ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಕವಿ ಶಾಂತರಸರವರ 101ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಸಾಹಿತಿ ಎಂ.ಜಿ.ರಂಗಸ್ವಾಮಿ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವಿ, ಕತೆಗಾರ, ಕಾದಂಬರಿಕಾರ, ಸಂಶೋಧಕ, ಪತ್ರಕರ್ತ, ಶಿಕ್ಷಕ, ಸಂಘಟಕ, ಸ್ವಾತಂತ್ರ್ಯ ಹೋರಾಟಗಾರ ಹೀಗೆ ಹಲವಾರು ಕ್ಷೇತ್ರಗಳಲ್ಲಿ ದುಡಿದು ಕನ್ನಡದ ಗಜಲ್ ಪ್ರಕಾರಕ್ಕೆ ಜೀವಂತಿಕೆ ಕೊಟ್ಟವರು ಕವಿ ಶಾಂತರಸ ಆಗಿದ್ದಾರೆ ಎಂದು ಸಾಹಿತಿ ಹಾಗೂ ಅನುವಾದಕ ಪ್ರೊ.ಎಂ.ಜಿ.ರಂಗಸ್ವಾಮಿ ಹೇಳಿದರು.

ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಬಹುಮುಖಿ ಕಲಾಕೇಂದ್ರ ಚಿತ್ರದುರ್ಗ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಿರಿಯೂರು ಹಾಗೂ ಸಂಸ ಥಿಯೇಟರ್ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕವಿ ಶಾಂತರಸ ರವರ 101ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕವಿ ಶಾಂತರಸ ಅವರು 1939ರಲ್ಲಿ ವಂದೇ ಮಾತರಂ ಚಳುವಳಿಯಲ್ಲಿ ಪಾಲ್ಗೊಂಡು ಅಲ್ಲಿಂದ ಹೋರಾಟ ಆರಂಭಿಸಿ ಅಸಮಾನತೆ ರೂಢಿ ಸಂಪ್ರದಾಯ ಕಂದಾಚಾರ ಬಂಡವಾಳ ಶಾಹಿ ಪದ್ಧತಿಗಳ ವಿರುದ್ಧ ಹೋರಾಡಿದ ಧೀಮಂತ ಹೋರಾಟಗಾರರಾಗಿದ್ದಾರೆ. ಹೈದರಾಬಾದ್ ನಿಜಾಮನನ್ನು ನಿಂದಿಸಿದ ಕಾರಣ 9ನೇ ತರಗತಿಯಲ್ಲಿ ಫೇಲಾಗಿ ನಂತರ ಓದುವ ಸಲುವಾಗಿ ಊರೂರು ಸುತ್ತಿ ಕಲಬುರ್ಗಿ ರಾಯಚೂರು ನಾತೂರುಗಳಲ್ಲಿ ಶಿಕ್ಷಣ ಪಡೆದು ಶಿಕ್ಷಕರಾದರು. ದೂರ ಶಿಕ್ಷಣದಲ್ಲಿ ಬಿಎ, ಎಂಎ ಪದವಿ ಪಡೆದು ಉಪನ್ಯಾಸಕರಾಗಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು. ಸಾಹಿತ್ಯ, ಸಂಘಟನೆ, ಸಂಸ್ಕೃತಿಯ ಅಭಿವೃದ್ಧಿ ಹಾಗೂ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗಾಗಿ ಹೋರಾಡಿದರು. ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಹೋರಾಟ ಮಾಡಿ ಕನ್ನಡ ಭಾಷೆಗೆ ಸರಿಯಾದ ಸ್ಥಾನಮಾನ ಸಿಕ್ಕಿಲ್ಲವೆಂಬ ಕಾರಣಕ್ಕಾಗಿ 1992ರಲ್ಲಿ ನೀಡಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಹಿಂದಿರುಗಿಸಿದ ಬಂಡಾಯಗಾರರಾಗಿದ್ದರು. ಗಜಲ್ ರುಬಾಯಿ ಪರ್ದುಗಳನ್ನು ಉರ್ದುಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದರು. 1995ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 2006ರಲ್ಲಿ ಬೀದರ್‌ನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ರಾಯಚೂರಿನಲ್ಲಿ ಸತ್ಯ ಸ್ನೇಹ ಎಂಬ ಪ್ರಕಾಶನವನ್ನು ತೆರೆದು ಕನ್ನಡ ನಾಡಿಗೆ 42ಕ್ಕಿಂತ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಇವರ ಸೇವೆ ಸಾಹಿತ್ಯ ಕ್ಷೇತ್ರದಲ್ಲಿ ಅಜರಾಮರವಾಗಿ ಉಳಿದಿದೆ ಎಂದರು.

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತುದಾರ ಜಿ.ಟಿ.ಲೋಕೇಶ್ ಮಾತನಾಡಿ, ಕವಿ ಶಾಂತರಸ ಅವರು 1974 ಸೆ.7ರಂದು ರಾಯಚೂರು ಜಿಲ್ಲೆಯ ಹೆಂಬೆರಾಳು ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿ 1942ರಲ್ಲಿ ನಡೆದ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಹೋರಾಟದಿಂದ ಸ್ಫೂರ್ತಿಗೊಂಡು ಕಥೆ ಕವನ ನಾಟಕ ಬರೆಯಲು ಆರಂಭಿಸಿದರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆ ನೀಡಿರುವ ಅವರು ಹೈದರಾಬಾದ್ ಕರ್ನಾಟಕದಲ್ಲಿನ ಅವರ ಸೇವೆ ಜನಮಾನಸದಲ್ಲಿ ಹಾಗೆ ಉಳಿದಿದೆ ಎಂದರು.

ಸ್ವಾಮಿ ವಿವೇಕಾನಂದ ರಾಜ್ಯ ಯುವಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಶಾಂತರಸ ಕನ್ನಡ ಸಾಹಿತ್ಯ ಕ್ಷೇತ್ರದ ಪಾದರಸ. ಕನ್ನಡದ ಎಲ್ಲಾ ಕ್ಷೇತ್ರಗಳಲ್ಲಿ ದುಡಿದು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದ್ದಾರೆ. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಗುಲ್ಬರ್ಗ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. 2008ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಪದವಿಯನ್ನು ನೀಡಿ ಗೌರವಿಸಿದೆ. ಇಂತಹ ಸಹೃದಯಿ ಕವಿಯ ಜನ್ಮದಿನಾಚರಣೆಯನ್ನು ಆಚರಣೆ ಮಾಡುತ್ತಿರುವುದು ಅನನ್ಯವಾದ ಕಾರ್ಯವಾಗಿದೆ ಎಂದರು.

ಈ ವೇಳೆ ಸರ್ಕಾರಿ ತರಬೇತಿ ಕೈಗಾರಿಕಾ ಸಂಸ್ಥೆಯ ಪ್ರಾಚಾರ್ಯ ಮಹಮದ್ ಜಬಿವುಲ್ಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ, ಬಹುಮುಖಿ ಕಲಾಕೇಂದ್ರದ ಸಂಚಾಲಕ ಟಿ. ಮಧು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನನ್ನಿವಾಳ ಹನುಮಂತಪ್ಪ, ಮದಕರಿಪುರದ ರಂಗಭೂಮಿ ಕಲಾವಿದ ಟಿ, ಶ್ರೀನಿವಾಸಮೂರ್ತಿ, ಕಾಲೇಜಿನ ಆಡಳಿತ ಅಧಿಕಾರಿ ಈರಗೋಪಯ್ಯ, ಮಣಿಯಮ್ಮ,

ಕೆ.ನವೀನ್, ಅಬ್ದುಲ್ ಸಮದ್, ಪರ್ಹತಂಕಿನ್, ವೇಣುಗೋಪಾಲ್, ಪರಮೇಶ್ವರಪ್ಪ, ಯಮುನಾ.ಟಿ, ಸುಮಲತಾ, ಬಸವರಾಜ್,ಸಚಿನ್ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂಬದಿ ರಾಜಕೀಯ ಬಿಟ್ಟು ಚುನಾವಣೆ ನಡೆಸಲಿ: ಹಾರೋಹಳ್ಳಿ ಕೃಷ್ಣ
150 ವಸಂತ ಪೂರೈಸಿರುವ ಸರ್ಕಾರಿ ಶಾಲೆ ಬಲವರ್ಧನೆ ಮಾಡಿ: ಕೆ.ಆರ್.ಶ್ರೀನಿವಾಸ್