ಕನ್ನಡಪ್ರಭ ವಾರ್ತೆ ಬೆಳಗಾವಿ
ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರ ಪ್ರಸ್ತುತ ಅವಶ್ಯಕತೆ ಇಲ್ಲ. ನಾವ್ಯಾರೂ ಡಿಸಿಎಂ ಹುದ್ದೆ ಕೇಳಿಲ್ಲ. ಬೇಡಿಕೆಯನ್ನೂ ಇಟ್ಟಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೂ ಮೊದಲು ಡಿಸಿಎಂ ಹುದ್ದೆ ಕೇಳಿದ್ದೇವು. ಆದರೆ, ಈಗ ಡಿಸಿಎಂ ಹುದ್ದೆ ಅವಶ್ಯಕತೆ ಇಲ್ಲ. ಚುನಾವಣೆಯಲ್ಲಿ ಅನುಕೂಲವಾಗುವ ದೃಷ್ಟಿಯಿಂದ ಕೇಳಿದ್ದೇವು ಅಷ್ಟೇ.ಇನ್ನು ನಾಲ್ಕು ವರ್ಷ ಕೆಲಸ ಮಾಡುವ ಸಚಿವ ಸ್ಥಾನ ಅವಕಾಶವಿದೆ. ಚಿಕ್ಕೋಡಿ ಕ್ಷೇತ್ರದ ಜನತೆ ವಿಶ್ವಾಸವಿಟ್ಟು ಪುತ್ರಿ ಪ್ರಿಯಾಂಕಾಗೆ ಅವಕಾಶ ನೀಡಿದ್ದಾರೆ. ಅವರ ವಿಶ್ವಾಸ ಉಳಿಸಲು ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಂಬಂಧ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಪಕ್ಷ ಎಲ್ಲಿ ಎಡವಿದೆ ಎಂಬುದನ್ನು ಪರಾಮರ್ಶೆ ಮಾಡಲಾಗುತ್ತದೆ. ಸಂಪುಟ ವಿಸ್ತರಣೆ ಮುಖ್ಯಮಂತ್ರಿಗೆ ಬಿಟ್ಟ ವಿಚಾರ ಎಂದರು. ಜಿಲ್ಲಾ ಕಾಂಗ್ರೆಸ್‌ನಲ್ಲಿ ಕೋಲ್ಡ್‌ವಾರ್ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೋ ವಾರ್, ಕೋಲ್ಡ್ ಅಷ್ಟೇ ಇದೆ ಎಂದರು.ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ. ಈ ಕುರಿತು ಮುಖ್ಯಮಂತ್ರಿಗಳೇ ಸ್ಪಷ್ಟನೆ ನೀಡಿದ್ದಾರೆ. ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಸಿಗುತ್ತಿದೆ. ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಅನುದಾನ ಬಿಡುಗಡೆಯಾಗುತ್ತಿದೆ ಎಂದರು.
ಮಾಜಿ ಶಾಸಕ ಕುಮಟಳ್ಳಿ ನಮ್ಮ ಮನೆಗೆ ಬಂದಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ನಾವು ಅವರ ಮನೆಗೆ ಹೋಗುತ್ತಿದ್ದೇವು, ಈಗ ನಾವು ಅಧಿಕಾರದಲ್ಲಿ ಇದ್ದಿದ್ದರಿಂದ ನಮ್ಮ ಮನೆಗೆ ಅವರು ಬಂದಿದ್ದಾರೆ ಅಷ್ಟೇ. ಕುಮಟಳ್ಳಿ ಅಷ್ಟೇ ಅಲ್ಲ, ಶ್ರೀಮಂತ ಪಾಟೀಲ್, ದುರ್ಯೋಧನ ಐಹೊಳೆ, ಎಸ್.ಟಿ. ಸೋಮಶೇಖರ್, ವಿಠ್ಠಲ್ ಹಲಗೆಕರ್ ಸೇರಿದಂತೆ ಬಿಜೆಪಿ ಹಲವು ಶಾಸಕರು, ನಾಯಕರು ನಮ್ಮ ಮನೆಗೆ ಬರುತ್ತಾರೆ. ಕೆಲಸ, ಕಾರ್ಯಗಳಿದ್ದರೆ ನಾಯಕರು ಬರುವುದು ಸಹಜ. ಆದರೆ, ಕುಮಟಳ್ಳಿ ನಮ್ಮ ಮನೆಗೆ ಭೇಟಿ ವಿಚಾರದಲ್ಲಿ ಅಥಣಿಯವರ ದೃಷ್ಟಿ ಸರಿಯಿಲ್ಲ ಎಂದರು.ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಶಾಸಕ ಆಸೀಫ್ ( ರಾಜು) ಸೇಠ್, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಉಪಸ್ಥಿತರಿದ್ದರು.