ನೀತಿ ನಿರೂಪಣೆ ರೂಪಿಸಬೇಕಾದ ಜನಪ್ರತಿನಿಧಿಗಳೇ ಖಾಸಗಿ ಶಾಲೆ ಮಾಲೀಕರು

KannadaprabhaNewsNetwork | Published : Dec 23, 2024 1:05 AM

ಸಾರಾಂಶ

ಸರ್ಕಾರಿ ಕನ್ನಡ ಶಾಲೆಗಳು ಹೆಚ್ಚು ಸಬಲೀಕರಣ ಆಗಬೇಕಾದ ಅವಶ್ಯಕತೆ ಇದೆ. ಸಾರ್ವಜನಿಕ ಕನ್ನಡ ಶಾಲೆಗಳನ್ನು ಉಳಿಸಿ-ಬೆಳೆಸಬೇಕಾದ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದ ಅವರು, ಕಳೆದ ಹತ್ತು ವರ್ಷದಲ್ಲಿ 2012-13ರಲ್ಲಿ ರಾಜ್ಯದಲ್ಲಿ 44,672 ಕನ್ನಡ ಶಾಲೆಗಳು ಇದ್ದವು. ಈ ಸಂಖ್ಯೆ ಈಗ 41,911ಕ್ಕೆ ಬಂದು ನಿಂತಿದೆ. ಕಳೆದ ಹತ್ತು ವರ್ಷಗಳಲ್ಲಿ ಬರೋಬ್ಬರಿ 2759 ಶಾಲೆಗಳನ್ನು ಮುಚ್ಚಿದ್ದೇವೆ.

ಸಂಪತ್ ತರೀಕೆರೆ

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸುಮಾರು 2759 ಕನ್ನಡ ಶಾಲೆಗಳು ಮುಚ್ಚಿದ್ದು, ಪ್ರತಿ ವರ್ಷ ಸರಾಸರಿ 250 ಶಾಲೆಗಳು ಮುಚ್ಚುತ್ತಿವೆ. ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಮಂಡ್ಯ ಜಿಲ್ಲೆಯಲ್ಲಿ 197 ಶಾಲೆಗಳು ಮುಚ್ಚಿವೆ ಎಂದು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಆತಂಕ ವ್ಯಕ್ತಪಡಿಸಿದರು.

ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಧಾನ ವೇದಿಕೆಯಲ್ಲಿ ಭಾನುವಾರ ‘ಸರ್ಕಾರಿ ಶಾಲೆಗಳ ಇಂದಿನ ಸ್ಥಿತಿಗತಿಯ ಅವಲೋಕನ’ ಕುರಿತ ವಿಷಯದ ಮೇಲೆ ಅವರು ಮಾತನಾಡಿದರು.

ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕಾದ ಹಾಗೂ ಉಳಿವಿಗೆ ನೀತಿ ನಿರೂಪಣೆ ರೂಪಿಸಬೇಕಾದ ಜನಪ್ರತಿನಿಧಿಗಳೇ ಖಾಸಗಿ ಶಾಲೆಯ ಮಾಲೀಕರಾಗಿದ್ದಾರೆ. ಅಂತಹವರಿಂದ ಸರ್ಕಾರಿ ಶಾಲೆಗಳು ಉಳಿಯುತ್ತವೆ ಎಂಬುದು ನಂಬಲಾಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಕನ್ನಡ ಶಾಲೆಗಳು ಹೆಚ್ಚು ಸಬಲೀಕರಣ ಆಗಬೇಕಾದ ಅವಶ್ಯಕತೆ ಇದೆ. ಸಾರ್ವಜನಿಕ ಕನ್ನಡ ಶಾಲೆಗಳನ್ನು ಉಳಿಸಿ-ಬೆಳೆಸಬೇಕಾದ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದ ಅವರು, ಕಳೆದ ಹತ್ತು ವರ್ಷದಲ್ಲಿ 2012-13ರಲ್ಲಿ ರಾಜ್ಯದಲ್ಲಿ 44,672 ಕನ್ನಡ ಶಾಲೆಗಳು ಇದ್ದವು. ಈ ಸಂಖ್ಯೆ ಈಗ 41,911ಕ್ಕೆ ಬಂದು ನಿಂತಿದೆ. ಕಳೆದ ಹತ್ತು ವರ್ಷಗಳಲ್ಲಿ ಬರೋಬ್ಬರಿ 2759 ಶಾಲೆಗಳನ್ನು ಮುಚ್ಚಿದ್ದೇವೆ. ಇದು ಸರ್ಕಾರ ನಡೆಸುತ್ತಿರುವವರು, ಶಿಕ್ಷಣದ ಸಾಂಗತ್ಯ ವಹಿಸಿದವರು ನಾಚಿಕೆ ಪಡಬೇಕಾದ ವಿಚಾರವಿದು ಎಂದು ಕಿಡಿಕಾರಿದರು.

ನಮ್ಮ ರಾಜಕಾರಣಿಗಳಿಗೆ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಲು ಇಚ್ಛಾಶಕ್ತಿಯ ಕೊರತೆಯಿಂದೆ. ಕನ್ನಡ ಶಾಲೆಗಳಿಗೆ ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸಲಾಗದ ಸ್ಥಿತಿಯಲ್ಲಿ ನಮ್ಮ ಸರ್ಕಾರವಿದೆ. ಇದು ನಾಚಿಕೆಗೇಡಿನ ಸಂಗತಿ. ಹತ್ತು ವರ್ಷಗಳ ಹಿಂದೆ ಕನ್ನಡ ಸರ್ಕಾರಿ ಶಾಲೆಯಲ್ಲಿ ಸುಮಾರು 56 ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ, ಈ ಹತ್ತು ವರ್ಷಗಳ ಈಚೆಗೆ ಇದರ ಸಂಖ್ಯೆ 42 ಲಕ್ಷಕ್ಕೇರಿದೆ. ಇದು ಆತಂಕಕಾರಿ ಸಂಗತಿ ಎಂದರು

ಇದು ಮುಂದುವರೆದರೆ ಕನ್ನಡ ಶಾಲೆಗಳೇ ರಾಜ್ಯದಲ್ಲಿ ಇರುವುದಿಲ್ಲ. ನಮ್ಮ ಮುಂದಿನ ಪೀಳಿಗೆ ಕನ್ನಡ ಶಾಲೆಯಲ್ಲಿ ಓದದ ಪರಸ್ಥಿತಿ ನಿರ್ಮಾಣವಾಗುತ್ತದೆ. ಕೊಠಾರಿ ಆಯೋಗ 1964-66ರಲ್ಲಿ ಮಂಡಿಸಿದ ವರದಿಯ ಶಿಫಾರಸನ್ನು ನಮ್ಮ ಸರ್ಕಾರಗಳು ಈವರೆಗೂ ಜಾರಿ ಮಾಡಿಲ್ಲ. ಸರ್ಕಾರಿ ಶಾಲೆಗಳ ಇಂದಿನ ಸ್ಥಿತಿಗತಿಗೆ ನೇರವಾಗಿ ರಾಜ್ಯ ಸರ್ಕಾರವೇ ಕಾರಣ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದ ರಾಜ್ ಮಾತನಾಡಿ, ಕನ್ನಡ ಅನ್ನದ ಭಾಷೆಯಲ್ಲ. ಕನ್ನಡದಲ್ಲಿ ಓದಿದರೆ ನಾವು ಉದ್ದಾರ ಆಗೋಲ್ಲ ಎನ್ನುವ ಭಾವನೆ ಜನರ ಮನಸ್ಸಿನಲ್ಲಿದೆ. ಆದರೆ, ಸಾವಿರಾರು ವರ್ಷಗಳಿಂದ ಕನ್ನಡದ ಹೆಸರಿನಲ್ಲಿ ಅನ್ನ ತಿನ್ನುತ್ತಿದ್ದೇವೆ ಎಂಬುದನ್ನು ಮರೆತಿದ್ದೇವೆ. ರಾಜ್ಯದಲ್ಲಿ ತ್ರಿಭಾಷಾ ನೀತಿ ಜಾರಿಗೆ ತರದೆ ದ್ವಿಭಾಷಾ ನೀತಿ ಜಾರಿಗೆ ತರಬೇಕು. ಹೀಗಾದಾಗ ಮಾತ್ರ ಕನ್ನಡ ಉಳಿಯುತ್ತದೆ ಎಂದರು.

ಗೋಷ್ಠಿಯಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ್, ಶಿಕ್ಷಣ ತಜ್ಞ ಎಫ್. ಸಿ. ಚೇಗರಡ್ಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.2017ರಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದ ಕನ್ನಡ ಶಾಲೆ ಸಬಲೀಕರಣ ವರದಿಯನ್ನು ಪುನಃ ಇನ್ನೆರಡು ದಿನಗಳಲ್ಲಿ ಮತ್ತೊಮ್ಮೆ ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರಿ ಶಾಲೆಗಳ ಜಮೀನು ಅತಿಕ್ರಮಣದ ವಿರುದ್ಧ ಜನಾಂದೋಲನದ ರೀತಿಯಲ್ಲಿ ಹೋರಾಟ ನಡೆಯಬೇಕಿದೆ. ಕನ್ನಡ ಶಾಲೆಗಳ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಳ್ಳುವಂತೆ ಒತ್ತಾಯಿಸುತ್ತೇವೆ.

- ಡಾ.ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

2009ರಲ್ಲಿ ಮನಮೋಹನ್‌ಸಿಂಗ್‌ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಶಿಕ್ಷಣ ಹಕ್ಕು ಕಾಯ್ದೆಯನ್ನು ಕಡ್ಡಾಯವಾಗಿ ರಾಜ್ಯದಲ್ಲಿ ಜಾರಿಗೆ ತರಬೇಕು. ಸರಿಯಾದ ಶಿಕ್ಷಕರು, ಮೂಲ ಸೌಕರ್ಯ, ಶೌಚಾಲಯ, ಗ್ರಂಥಾಲಯ, ಲೈಬ್ರರಿ ಇರಲೇ ಬೇಕು ಅಂದಾಗ ಮಾತ್ರ ಕನ್ನಡ ಶಾಲೆಗೆ ಮಕ್ಕಳು ಬರುತ್ತವೆ.

- ವಿ.ಪಿ.ನಿರಂಜನಾರಾಧ್ಯ.

ಶಿಕ್ಷಣ ಹಕ್ಕು ಕಡ್ಡಾಯ ಜಾರಿಯಾಗಲಿ

ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಮಕ್ಕಳ ಶಿಕ್ಷಣ ಹಕ್ಕು ಕಡ್ಡಾಯವಾಗಿ ಜಾರಿ ಮಾಡಬೇಕು. 2017ರಲ್ಲಿ ನೀಡಿರುವ ಕನ್ನಡ ಶಾಲೆ ಸಬಲೀಕರಣ ವರದಿ ಜಾರಿಯಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಖಾಲಿಯಿರುವ 43 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು. ಹೀಗಾದರೆ ಮಾತ್ರ ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಧ್ಯ.

Share this article