ತಾರಕಕ್ಕೇರಿದ ಟೌನ್ ಶಿಪ್ ಪರ ವಿರೋಧದ ಚಳವಳಿ

KannadaprabhaNewsNetwork |  
Published : Jun 27, 2026, 01:30 AM ISTUpdated : Jun 27, 2026, 06:23 AM IST
Bidadi

ಸಾರಾಂಶ

ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್)ಯೋಜನೆ ಪರ ಮತ್ತು ವಿರೋಧಿಸಿ ರೈತರು ಪ್ರತ್ಯೇಕವಾಗಿ ನಡೆಸುತ್ತಿರುವ ಚಳವಳಿ ತೀವ್ರ ಸ್ವರೂಪ ಪಡೆದಿದ್ದು, ಬೈರಮಂಗಲ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ

ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್)ಯೋಜನೆ ಪರ ಮತ್ತು ವಿರೋಧಿಸಿ ರೈತರು ಪ್ರತ್ಯೇಕವಾಗಿ ನಡೆಸುತ್ತಿರುವ ಚಳವಳಿ ತೀವ್ರ ಸ್ವರೂಪ ಪಡೆದಿದ್ದು, ಬೈರಮಂಗಲ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.

ಬೈರಮಂಗಲ ವೃತ್ತದಲ್ಲಿ ಟೌನ್ ಶಿಪ್ ಯೋಜನೆ ವಿರುದ್ಧ ರೈತರು ಅನಿರ್ದಿಷ್ಟಾವಧಿ ಧರಣಿ ಗುರುವಾರ 475ನೇ ದಿನಕ್ಕೆ ಕಾಲಿಟ್ಟಿದೆ. ಆ ವೃತ್ತದಿಂದ ಕೂಗಳತೆ ದೂರದಲ್ಲಿಯೇ ಮತ್ತೊಂದು ರೈತರ ಗುಂಪು ಟೌನ್ ಶಿಪ್ ಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೊಂಡು ಪರಿಹಾರ ವಿತರಣೆ ಮಾಡಬೇಕೆಂದು ಆಗ್ರಹಿಸಿ ಪ್ರಾರಂಭಿಸಿರುವ ಪ್ರತಿಭಟನೆ 2ನೇ ದಿನವೂ ಮುಂದುವರೆದಿದೆ.

ಪರ - ವಿರೋಧದ ಚಳವವಳಿ ತಾರಕಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಬೈರಮಂಗಲ ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತಿಗಾಗಿ ನಿಯೋಜನೆ ಮಾಡಲಾಗಿದೆ. ಎರಡೂ ಪ್ರತಿಭಟನೆಗಳ ಸ್ಥಳಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ರೈತ ಮುಖಂಡನಿಗೆ ರೈತರಿಂದಲೇ ಘೇರಾವ್:

ಯೋಜನೆ ವಿರುದ್ಧವಾಗಿರುವ ರೈತರ ಹೋರಾಟಕ್ಕೆ ಬೆಂಬಲ ನೀಡಿ ವಾಪಸ್ ತೆರಳುತ್ತಿದ್ದ ರೈತಸಂಘ ರಾಜ್ಯ ಘಟಕ ಸಂಚಾಲಕ ಮೀಸೆ ಮಂಜಣ್ಣ ಅವರಿದ್ದ ಕಾರನ್ನು ಯೋಜನೆ ಪರವಾಗಿರುವ ರೈತರು ಅಡ್ಡಗಟ್ಟಿ ತರಾಟೆ ತೆಗೆದುಕೊಂಡರು.

ಈ ವಿಚಾರ ತಿಳಿದ ಬೈರಮಂಗಲ ವೃತ್ತದಲ್ಲಿದ್ದ ರೈತರು ಅಲ್ಲಿಗೆ ಓಡಲು ಪ್ರಾರಂಭಿಸಿದರು. ಬಂದೋಬಸ್ತಿನಲ್ಲಿದ್ದ ಪೊಲೀಸರು ರೈತರನ್ನು ತಡೆದು ಅಲ್ಲಿಗೆ ಹೋಗ ಬೇಡಿ ಪರಿಸ್ಥಿತಿ ಬಿಗಡಾಯಿಸುತ್ತದೆ. ಅಲ್ಲಿರುವ ಪೊಲೀಸರು ಬಿಡಿಸಿ ಕಳುಹಿಸುತ್ತಾರೆ ಎಂದು ಸಮಾಧಾನ ಪಡಿಸಿದರು.

ಕಾರಿನಲ್ಲಿದ್ದ ರೈತ ಮುಖಂಡರೊಂದಿಗೆ ವಾಗ್ವಾದ ನಡೆಸಿದ ಯೋಜನೆ ಪರವಿರುವ ರೈತರು, ನಮಗೆ ಯೋಜನೆ ಬೇಕು. ಅದನ್ನು ವಿರೋಧ ಮಾಡಲು ನೀವ್ಯಾರು. ಹೊರಗಡೆಯಿಂದ ಬಂದು ಗೊಂದಲ ಸೃಷ್ಟಿ ಮಾಡುತ್ತಿದ್ದೀರಾ. ನೀವೆಲ್ಲರು ಪೇಮೆಂಟ್ ಗಿರಾಕಿಗಳು, ಎಷ್ಟು ಪೇಮೆಂಟ್ ಪಡೆದು ಬಂದಿದ್ದೀರಾ ಎಂದು ಕಿಡಿಕಾರಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರ ಮನವೊಲಿಸಿ ಕಾರನ್ನು ಮುಂದಕ್ಕೆ ಕಳುಹಿಸಿಕೊಟ್ಟರು.

ಪರ-ವಿರೋಧದ ಚಳವಳಿಗೆ ಸಾಥ್:

ಮಾಜಿ ಶಾಸಕ ಎ.ಮಂಜುನಾಥ್ , ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್ )ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗುತ್ತಾ ಯೋಜನೆ ವಿರುದ್ಧದ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ಟೌನ್ ಶಿಪ್ ಯೋಜನೆ ಪರವಾಗಿರುವ ರೈತರು ಪ್ರತಿಭಟನೆ

ಟೌನ್ ಶಿಪ್ ಯೋಜನೆ ಪರವಾಗಿರುವ ರೈತರು, ಬೈರಮಂಗಲ - ಕಂಚುಗಾರನಹಳ್ಳಿ ವ್ಯಾಪ್ತಿಯ ಜಿಬಿಐಟಿ ಯೋಜನೆಯ ಪರ ರೈತರ ಹೋರಾಟ ಸಮಿತಿ ಎಂಬ ಬ್ಯಾನರ್ ನಲ್ಲಿ ನಮ್ಮ ಭೂಮಿ - ನಮ್ಮ ಹಕ್ಕು. ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಜಿಬಿಐಟಿ ಯೋಜನೆಗೆ ಭೂಮಿ ನೀಡಲು ನಾವು ಸಿದ್ಧ - ಪಾಲುದಾರರಾಗಲೂ ಸಿದ್ಧ. 20 ವರ್ಷಗಳ ರೆಡ್ ಜೋನ್ ವನವಾಸಕ್ಕೆ ಮುಕ್ತಿ ಕೊಡುವಂತೆ ಘೋಷಣೆ ಬರೆದುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಂಗಳೂರು ಪಕ್ಕದಲ್ಲಿಯೇ ಇದ್ದರೂ ಬಿಡದಿ ಅಭಿವೃದ್ಧಿ ಆಗಿಲ್ಲ. ಈ ಭಾಗದಲ್ಲಿ ನೀರಿನ ಕೊರತೆ ಇದ್ದು, ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಮಕ್ಕಳೂ ಇದೇ ಭೂಮಿ ನಂಬಿ ಕೂರಲು ಆಗುವುದಿಲ್ಲ. ಹಾಗಾಗಿ ನಮಗೆ ಅಭಿವೃದ್ಧಿ ಬೇಕು. ಈ ಯೋಜನೆಗೆ ಭೂಮಿ ಕೊಟ್ಟೇ ಕೊಡುತ್ತೇವೆ. ಕುಮಾರಸ್ವಾಮಿರವರು ರಾಜಕೀಯ ಕಾರಣಕ್ಕಾಗಿ ಯೋಜನೆ ವಿರೋಧ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಯೋಜನೆ ಪರ ರೈತರ ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ಬ್ಯಾಟಪ್ಪ, ಭೂ ಮಾಲೀಕ ಹೊಸೂರು ರಾಜಣ್ಣ, ಜಿಬಿಡಿಎ ನಿರ್ದೇಶಕಿ ಕಲ್ಯಾಣ ಕುಮಾರಿ, ವಿಎಸ್ ಎಸ್ ಎನ್ ಅಧ್ಯಕ್ಷ ಮಂಜುನಾಥ್ ,ಮಾಜಿ ಅಧ್ಯಕ್ಷ ಎಚ್.ಎಸ್.ಸಿದ್ಧರಾಜು, ತಾಪಂ ಮಾಜಿ ಅಧ್ಯಕ್ಷರಾದ ಜಯಚಂದ್ರ, ಭೂ ಮಾಲೀಕರಾದ ಶಿವರಾಮು, ಅಪ್ಪಾಜಿ, ಯೋಗಾನಂದ್ , ಎಚ್.ಎಂ.ನಾಗರಾಜ್ , ನರಸಿಂಹರಾಜು ಮತ್ತಿತರರು ಭಾಗವಹಿಸಿದ್ದರು. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನೈಸ್‌ ರಸ್ತೆಯಲ್ಲಿ ಟೋಲ್‌ ಕಟ್ಟಬೇಡಿ: ಕುಮಾರಸ್ವಾಮಿ
ಕೆಪಿಎಸ್ಸಿ ನೇಮಕ ಹಗರಣ : ಮತ್ತೆ ಸಾಹುಕಾರ್‌ ಸಸ್ಪೆಂಡ್‌ಗೆ ಸಚಿವ ಸಂಪುಟ ಶಿಫಾರಸು