ಪರ್ಯಾಯ ಗೇಟ್‌ ಇಲ್ಲದಿರುವುದರಿಂದ ಸಮಸ್ಯೆ: ಡಿಕೆಶಿ

KannadaprabhaNewsNetwork | Published : Aug 12, 2024 1:03 AM

ಸಾರಾಂಶ

ಜಲಾಶಯ ನಿರ್ಮಾಣವಾದ ವೇಳೆಯಲ್ಲಿ ಎರಡು ಗೇಟ್ ವ್ಯವಸ್ಥೆ ಇರುತ್ತದೆ. ಇಲ್ಲಿ ಮಾತ್ರ ಕೇವಲ ಒಂದು ಗೇಟ್ ವ್ಯವಸ್ಥೆ ಇದೆ. ಪರ್ಯಾಯ ಗೇಟ್‌ಗಳು ಇಲ್ಲದಿರುವುದರಿಂದ ಸಮಸ್ಯೆಯಾಗಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಲಾಶಯ ನಿರ್ಮಾಣವಾದ ವೇಳೆಯಲ್ಲಿ ಎರಡು ಗೇಟ್ ವ್ಯವಸ್ಥೆ ಇರುತ್ತದೆ. ಇಲ್ಲಿ ಮಾತ್ರ ಕೇವಲ ಒಂದು ಗೇಟ್ ವ್ಯವಸ್ಥೆ ಇದೆ. ಪರ್ಯಾಯ ಗೇಟ್‌ಗಳು ಇಲ್ಲದಿರುವುದರಿಂದ ಸಮಸ್ಯೆಯಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಹೇಳಿದರು.

ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಆ ಕಡೆ ಗಮನ ಹರಿಸಲಾಗುವುದು, ನವಲಿ ಜಲಾಶಯ ನಿರ್ಮಾಣಕ್ಕೆ ನಾವು ಬದ್ಧ ಎಂದರು.

ತುಂಗಭದ್ರಾ ಜಲಾಶಯ ದುರಂತಕ್ಕೆ ನಾನು ಯಾರನ್ನು ಹೊಣೆ ಮಾಡುವುದಿಲ್ಲ. ಯಾವ ಅಧಿಕಾರಿಯನ್ನೂ ಗುರಿಯಾಗಿಸಿಕೊಂಡು ಕ್ರಮವಹಿಸುವುದಿಲ್ಲ. ಆದರೆ, ಈಗ ನಮ್ಮ ಮುಂದಿರುವ ಸವಾಲು ದುರಸ್ತಿ ಮಾಡಿ, ನೀರು ಉಳಿಸಿಕೊಳ್ಳುವುದಾಗಿದೆ. ಈಗಾಗಲೇ ನಾನು ಆಂಧ್ರ, ತೆಲಂಗಾಣ ರಾಜ್ಯಗಳೊಂದಿಗೆ ಚರ್ಚೆ ಮಾಡಿ, ದುರಂತ ನಿಭಾಯಿಸುವ ದಿಸೆಯಲ್ಲಿ ಚರ್ಚೆ ಮಾಡಿದ್ದೇನೆ ಎಂದರು.

ಈಗ ಮುರಿದಿರುವ ಒಂದೇ ಗೇಟ್‌ನಲ್ಲಿ 35 ಸಾವಿರ ಕ್ಯುಸೆಕ್ ನೀರು ಹೋಗುತ್ತಿದೆ. ಉಳಿದ 32 ಗೇಟ್‌ಗಳ ಮೂಲಕ ಸೇರಿ 98 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಗುತ್ತದೆ. 65 ಟಿಎಂಸಿ ಕಾಲಿ ಮಾಡಿದ ಮೇಲೆಯೇ ದುರಸ್ತಿ ಕಾರ್ಯ ನಡೆಯುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ, ನದಿ ಪಾತ್ರದಲ್ಲಿ ಎಚ್ಚರಿಕೆ ನೀಡಿ, ನದಿಗೆ ನೀರು ಬಿಡುವ ಪ್ರಮಾಣ ಹೆಚ್ಚಿಸಲಾಗುತ್ತದೆ ಎಂದರು.

ಸಿಎಂ ಭೇಟಿ:

ಸಿಎಂ ಸಿದ್ದರಾಮಯ್ಯ ಅವರು ಆ. 13ರಂದು ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು, ಈಗ ಅದನ್ನು ಮುಂದೂಡಿದ್ದೇವೆ, ಆದರೆ, ಜಲಾಶಯಕ್ಕೆ ಅವರು ಸಹ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ. ಜಲಾಶಯ ಕ್ರಸ್ಟ್ ಗೇಟ್ ದುರಸ್ತಿಯಾಗಿ, ದೇವರ ದಯೆಯಿಂದ ಮತ್ತೆ ಮಳೆಯಾದರೆ ಜಲಾಶಯ ಭರ್ತಿಯಾದ ಮೇಲೆ ಬಾಗಿನ ಅರ್ಪಿಸುವ ಕಾರ್ಯ ನಡೆಯಲಿದೆ ಎಂದರು.

ಬತ್ತದ ಎರಡು ಬೆಳೆಗಳಿಗೆ ನೀರಿನ ಸಮಸ್ಯೆ, ರೈತರಲ್ಲಿ ಆತಂಕ:

ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ನಲ್ಲಿ ಸಂಭವಿಸಿದ ಅವಘಡದಿಂದಾಗಿ ರೈತರಲ್ಲಿ ಆತಂಕ ಉಂಟಾಗಿದೆ.ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಸುಮಾರು 3500 ಎಕರೆಯಲ್ಲಿ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ರೈತರು ಬತ್ತ ನಾಟಿ ಮಾಡಿದ್ದಾರೆ. ಎರಡು ಬೆಳೆಗಳಿಗೆ ಸಮರ್ಪಕ ನೀರು ಬರುತ್ತಿದೆ ಎಂದು ರೈತರು ಸಂತೋಷದಲ್ಲಿರುವಾಗಲೆ ಈಗ ಜಲಾಶಯದಲ್ಲಿ ಉಂಟಾದ ಸಮಸ್ಯೆಯಿಂದ ನದಿಗೆ ಮತ್ತು ಕಾಲುವೆಗಳಿಗೆ ವ್ಯರ್ಥವಾಗಿ ನೀರು ಹೋಗುತ್ತಿದ್ದರಿಂದ ಮುಂದಿನ ಬೆಳೆಗೆ ನೀರು ಬರುತ್ತದೆಯೋ ಇಲ್ಲವೋ ಎನ್ನುವ ಅನುಮಾನ ಉಂಟಾಗಿದೆ.

ಮೊದಲನೆಯದು ನಾಲ್ಕು ತಿಂಗಳ ಬೆಳೆಯಾಗಿದ್ದು, ಆಕ್ಟೋಬರ್ ಅಥವಾ ನವೆಂಬರ್‌ ತಿಂಗಳಲ್ಲಿ ಬತ್ತದ ಫಸಲು ರೈತರ ಕೈ ಸೇರುತ್ತಿದೆ. ಎರಡನೆ ಬೆಳೆ ಫೆಬ್ರುವರಿಯಲ್ಲಿ ನಾಟಿ ಮಾಡಿ ಮೇ ತಿಂಗಳಲ್ಲಿ ಫಸಲು ತೆಗೆಯುತ್ತಿದ್ದರು. ಈಗ ಜಲಾಶಯದಿಂದ ನೀರು ಪೋಲಾಗುತ್ತಿದ್ದರಿಂದ ಎರಡು ಬೆಳೆಗಳಿಗೆ ನೀರು ತಲುಪುವದೆ ಎನ್ನುವ ಪ್ರಶ್ನೆ ರೈತರಲ್ಲಿ ಉಂಟಾಗಿದೆ.ರೈತರು ಗದ್ದೆಗಳಿಗೆ ನೀರು ಬಳಕೆ ಮಾಡುವುದಕ್ಕಿಂತ ಪೂರ್ವದಲ್ಲಿ ನೀರು ವ್ಯರ್ಥವಾಗುತ್ತಿದ್ದು, ಉಳಿದ ಸಮಯಕ್ಕೆ ನೀರು ಲಭ್ಯತೆ ಬಗ್ಗೆ ಕಂಗಾಲಾಗುತ್ತಿದ್ದಾರೆ.

Share this article