2-3 ತಿಂಗಳಿಂದ ಕೋತಿ ಕಾಟಕ್ಕೆ ಬೇಸತ್ತ ಜನ
ಸೂಕ್ತ ಕ್ರಮಕ್ಕೆ ಗ್ರಾಪಂಗೆ ಮನವಿಪರಶಿವಮೂರ್ತಿ ದೋಟಿಹಾಳಕನ್ನಡಪ್ರಭ ವಾರ್ತೆ ಕುಷ್ಟಗಿ
ತಾಲೂಕಿನ ಕೇಸೂರು ಗ್ರಾಮದಲ್ಲಿ ಕಪ್ಪು ಮಂಗಗಳ ಹಾವಳಿಯು ಮಿತಿಮೀರಿದ್ದು, ಗ್ರಾಮಸ್ಥರಿಗೆ ದೊಡ್ಡ ತಲೆನೋವಾಗಿ ಕಾಡುತ್ತಿದೆ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಗ್ರಾಮದಲ್ಲಿ ನೂರಾರು ಮಂಗಗಳು 2-3 ತಿಂಗಳಿಂದ ಬೀಡುಬಿಟ್ಟಿವೆ. ಹಲವು ಗುಂಪುಗಳಿವೆ. ಮಕ್ಕಳನ್ನು ಮನೆ ಹೊರಗೆ ಬಿಡುವಂತಿಲ್ಲ. ಮಹಿಳೆಯರು ಓಡಾಡಲು ಭಯಪಡುವಂತಾಗಿದೆ. ಅವುಗಳ ಕಾಟಕ್ಕೆ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.ಮನೆಯ ಎಲ್ಲ ಬಾಗಿಲು ಸದಾಕಾಲ ಮುಚ್ಚಿಯೇ ಇಡಬೇಕಿದೆ. ಮನೆಯಂಗಳ ಅಥವಾ ಛಾವಣಿ ಮೇಲೆ ಏನನ್ನೂ ಒಣಗಿಸಲು ಸಾಧ್ಯವಾಗುತ್ತಿಲ್ಲ. ಹಣ್ಣಿನ ಅಂಗಡಿಯವರಿಗೂ ಹಣ್ಣು ಕಾದುಕೊಳ್ಳುವುದು ಕಷ್ಟವಾಗಿದೆ. ಕೈಲಿ ಬೆತ್ತ ಹಿಡಿದೇ ಕುಳಿತಿರಬೇಕಾದ ಪರಿಸ್ಥಿತಿ ಇದೆ.
ತಗಡು ಜಖಂ:ಮನೆಗಳು ಹಾಗೂ ಅಂಗಡಿಗಳ ಮೇಲೆ ಹಾಕಿರುವ ತಗಡುಗಳ ಮೇಲೆ ಮಂಗಗಳು ಜಿಗಿದು ಜಿಗಿದು ಕೆಲವೆಡೆ ಬಾಗಿವೆ. ಮಂಗ ಬೆದರಿಸಲು ಮಾಳಿಗೆ ಏರಿದರೆ ಮಂಗಗಳು ಜನರನ್ನೇ ಬೆದರಿಸುತ್ತಿವೆ.
ಬೆಳಗಾಗುತ್ತಲೆ ಮಂಗಗಳು ಗುಂಪು ಗುಂಪಾಗಿ ದಾಂಗುಡಿ ಇಡುತ್ತವೆ. ಎಲ್ಲ ಮನೆಗಳ ಮೇಲೆ ಹಾರಾಡುತ್ತವೆ. ಮನೆ ಬಾಗಿಲು ತೆರೆದಿದ್ದರೆ ಅಡುಗೆ ಕೋಣೆಗಳಿಗೆ ನುಗ್ಗುತ್ತವೆ. ಕೈಗೆ ಸಿಕ್ಕ ವಸ್ತುಗಳನ್ನು ಎತ್ತಿಕೊಂಡು ಹೋಗುತ್ತವೆ. ಈ ಮಂಗಗಳ ಕಾಟದಿಂದ ಹೇಗಾದರೂ ಮಾಡಿ ನಮ್ಮನ್ನು ಪಾರು ಮಾಡಿ ಎಂದು ಗ್ರಾಮಸ್ಥರು ಗ್ರಾಪಂಗೆ ಮನವಿ ಮಾಡಿದ್ದಾರೆ.ಕೇಸೂರು ಗ್ರಾಮದಲ್ಲಿ ಮಂಗಗಳ ಹಾವಳಿ ಮಿತಿ ಮೀರಿದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಸಲ ಹೇಳಿದರೂ ಪ್ರಯೋಜನವಾಗಿಲ್ಲ ಕೇಸೂರು ನಿವಾಸಿ ನಾಗರಾಜ ಪಟ್ಟಣಶೆಟ್ಟರ ಹೇಳಿದ್ದಾರೆ.
ಮಂಗಗಳ ಹಾವಳಿಯ ಕುರಿತು ದೂರುಗಳು ಬಂದಿದ್ದು, ಮಂಗಗಳನ್ನು ಹಿಡಿಯುವವರನ್ನು ಶೀಘ್ರದಲ್ಲಿ ಕರೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ಅಮೀನ್‌ಸಾಬ್ ಅಲಾಂದಾರ ತಿಳಿಸಿದ್ದಾರೆ.