ಶಿವಮೊಗ್ಗ: ರಾಜ್ಯ ಸರ್ಕಾರ ಕಳೆದ 70 ವರ್ಷಗಳಿಂದ ರೈತರು ಗೇಣಿ ಸಾಗುವಳಿ ಮಾಡಿಕೊಂಡು ಬರುತ್ತಿರುವ ಶಾಲಾ ಜಮೀನುಗಳನ್ನು ವಶಕ್ಕೆ ಪಡೆಯಲು ಮುಂದಾಗಿರುವುದು ಅವೈಜ್ಞಾನಿಕವಾಗಿದ್ದು, ಒಂದು ವೇಳೆ ವಶಕ್ಕೆ ಪಡೆದಲ್ಲಿ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ರಾಜ್ಯ ಭೂ-ವಿದ್ಯಾದಾನದ ಶಾಲಾ ಜಮೀನು ಗೇಣಿ ರೈತರ ಹೋರಾಟ ಸಮಿತಿ ಅಧ್ಯಕ್ಷ ಕಲ್ಲೂರು ಮೇಘರಾಜ್ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.
ಭೂ ವಿದ್ಯಾದಾನ ಚಳವಳಿಯಲ್ಲಿ ಸರ್ಕಾರಿ ಶಾಲೆಗಳಿಗೆ ಉಪಯೋಗಕ್ಕೆ ಬರಲಿದೆ ಎಂಬ ಉದ್ದೇಶದಿಂದ ರಾಜ್ಯಾದ್ಯಂತ ಸಾವಿರಾರು ಎಕರೆ ಜಮೀನನ್ನು ಭೂದಾನಿಗಳು ವಿವಿಧ ಸರ್ಕಾರಿ ಶಾಲೆಗಳಿಗೆ ದಾನ ಮಾಡಿದ್ದರಿಂದ ಆಟದ ಮೈದಾನ, ಕಟ್ಟಡ ಇನ್ನಿತರ ಉದ್ದೇಶಕ್ಕೆ ಬಳಸಿಕೊಳ್ಳಲಾಗಿತ್ತು. ಶಾಲೆಯಿಂದ ಹಾಗೂ ಗ್ರಾಮದಿಂದ ದೂರವಿದ್ದ ದಾನ ನೀಡುವಾಗಲೇ ಬರಡಾಗಿದ್ದ ಜಮೀನನ್ನು ಶಾಲಾ ಮುಖ್ಯಸ್ಥರು ಆ ಗ್ರಾಮದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ದಾನ ನೀಡಲಾಗಿತ್ತು. ಈ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬರಲಾಗುತ್ತಿತ್ತು ಎಂದರು.ಈ ಶಾಲಾ ಜಮೀನು ಗೇಣಿದಾರರಿಂದ ಆಲ್ಪಸ್ವಲ್ಪ ಗೇಣಿ ಬಾಬ್ತು ಧವಸ ಧಾನ್ಯ ಇಲ್ಲವೇ ಹಣ ವಸೂಲಿ ಮಾಡಲಾಗುತ್ತಿತ್ತು. ಹೀಗೆ ರಾಜ್ಯದಲ್ಲಿ ಜಾರಿಗೆ ಬಂದಂತಹ ಶಾಲಾ ಜಮೀನು ಗೇಣಿ ಪದ್ಧತಿಯನ್ನು ಯಾವ ಸರ್ಕಾರಗಳು ರದ್ದುಪಡಿಸಿ ಶಾಲಾ ಜಮೀನು ಗೇಣಿದಾರರಿಗೆ ಭೂಒಡೆತನದ ಹಕ್ಕುಪತ್ರ ನೀಡದೆ ಅನ್ಯಾಯ ಮಾಡುತ್ತಾ ಬಂದಿದೆ. ಕಳೆದ 20 ವರ್ಷಗಳಿಂದ ಗೇಣಿದಾರರು ಭೂ ಒಡೆತನಕ್ಕಾಗಿ ನಿರಂತರವಾಗಿ ಸರ್ಕಾರಗಳ ಮುಂದೆ ಬೇಡಿಕೆ ಇಟ್ಟಿದ್ದರೂ ಪ್ರಯೋಜನವಾಗಲಿಲ್ಲ. ಈಗ ಶಿಕ್ಷಣ ಸಚಿವ ಮಧುಬಂಗಾರಪ್ಪನವರು ಕಳೆದ 6 - 7 ದಶಕಗಳಿಂದ ಗೇಣಿ ಸಾಗುವಳಿ ಮಾಡಿಕೊಂಡು ಬರುತ್ತಿರುವ ಶಾಲಾ ಜಮೀನು ಗೇಣಿದಾರರನ್ನು ಒಕ್ಕಲೆಬ್ಬಿಸಿ ವಶಪಡಿಸಿಕೊಳ್ಳಲು ವಿಶೇಷ ಮಸೂದೆಯನ್ನು ತರಲು ಮುಂದಾಗಿರುವುದು ಖಂಡನೀಯ ಎಂದರು. ಒಂದು ವೇಳೆ ಶಾಲಾ ಜಮೀನುಗಳನ್ನು ವಶಪಡಿಸಿಕೊಂಡಲ್ಲಿ ರಾಜ್ಯದ ಶಾಲಾ ಜಮೀನುಗೇಣಿದಾರರು ತುರ್ತಾಗಿ ಸಂಘಟಿತರಾಗುವ ಕಾಲ ಸನ್ನಿಹಿತವಾಗಿದೆ ಹಾಗೂ ಈ ಬಗ್ಗೆ ಕಾನೂನು ಹೋರಾಟ ನಡೆಸುವುದು ಅಗತ್ಯವಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಆರ್.ಶಿವಣ್ಣ, ಕೋಡ್ಲೂರು ಶ್ರೀಧರ್, ಅರಸಾಳು ರಂಗನಾಥ್, ಅಲೀಂ ಖಾನ್, ಲೋಕೇಶ್ ಶಿರಾಳಕೊಪ್ಪ, ಶಂಕ್ರಾನಾಯ್ಕ, ಎಚ್.ಎಂ.ಸಂಗಯ್ಯ ಉಪಸ್ಥಿತರಿದ್ದರು.