ಕನ್ನಡಪ್ರಭ ವಾರ್ತೆ ಶಿರಾ ವೈದ್ಯರು ಜೀವ ರಕ್ಷಕರು ಜೀವ ತೆಗೆಯುವರಲ್ಲ, ತಮ್ಮ ವೈಯಕ್ತಿಕ ಸುಖವನ್ನು ಬದಿಗೊತ್ತಿ ಸಮಾಜದ ಸೇವೆಗೆ ಮುಂದಾಗಿರುವ ಇವರ ವೃತ್ತಿಗೆ ಹಾಗೂ ಹೆಸರಿಗೆ ಕಳಂಕ ಬರಬಾರದು. ವೈದ್ಯರು ಹಾಗೂ ರೋಗಿಗಳ ಬಾಂಧವ್ಯ ಚೆನ್ನಾಗಿದ್ದರೆ ಮಾತ್ರ ಉತ್ತಮ ಚಿಕಿತ್ಸೆ ನೀಡಲು ಸಾಧ್ಯ ಎಂದು ಶಿರಾ ತಾಲೂಕು ವೈದ್ಯರ ಸಂಘದ ಅಧ್ಯಕ್ಷೆ ಡಾ. ಮಾಲಿನಿ ಹೇಳಿದರು.ಅವರು ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಶಿರಾದಲ್ಲಿ ವೈದ್ಯರೊಬ್ಬರು ಮಗುವಿಗೆ ಚಿಕಿತ್ಸೆ ನೀಡುವಾಗ ಸಂಭವಿಸಿದ ಮಗುವಿನ ಸಾವಿನ ಬಗ್ಗೆ ಆ ವೈದ್ಯರ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗಿದ್ದು, ತನಿಖಾ ವರದಿಯ ನಂತರ ವೈದ್ಯರ ತಪ್ಪಿಲ್ಲವೆಂದು ತಿಳಿದು ಬಂದಿದ್ದರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಆ ವಿಷಯ ಪ್ರಸ್ತಾವನೆ ಆಗುತ್ತಾ ಇರುವುದರಿಂದ ವೈದ್ಯರಿಗೆ ಮಾನಸಿಕವಾಗಿ ತೊಂದರೆಯಾಗುತ್ತಿದೆ. ಶಿರಾದಲ್ಲಿ ೨೦೨೫ರ ಮೇ ೨೪ರಂದು ಅಕ್ಕರೆ ಮಕ್ಕಳ ಚಿಕಿತ್ಸಾಲಯದಲ್ಲಿ ಡಾ. ನವೀನ್ ಎಸ್ ಆರ್ ನವಜಾತ ಶಿಶುವಿಗೆ ಚಿಕಿತ್ಸೆ ನಡೆಸಿ, ತುರ್ತು ಪರಿಸ್ಥಿತಿಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಬಾಣಂತಿಯರ ಪಥ್ಯದಿಂದ ಎದೆ ಹಾಲಿನಲ್ಲಿ ಥಯಾಮಿನ್ ಎಂಬ ವಿಟಮಿನ್ ಕೊರತೆಯಿಂದ ಮಕ್ಕಳಲ್ಲಿ ಹೃದಯ ಸ್ಥಂಬನ ವಾಗುವ ಸಾಧ್ಯತೆ ಹೆಚ್ಚಿದೆ. ಆದರೆ ಈ ಸತ್ಯ ತಿಳಿಯದೆ ಮಗು ಮೃತಪಟ್ಟಿದ್ದು ವೈದ್ಯರು ನೀಡಿದ ಓವರ್ ಡೋಸೇಜ್ ಔಷಧಿಯಿಂದ ಎಂದು ಪೋಷಕರು ಸಂಬಂಧಿಕರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈದ್ಯರ ವಿರುದ್ಧ ಆರೋಪ ಮಾಡಲಾಗಿತ್ತು. ಈಗ ವೈದ್ಯಕೀಯ ಮರಣೋತ್ತರ ವರದಿ ಬಂದಿದ್ದು, ಹೃದಯ ಸ್ತಂಭನ ದಿಂದ ಮಗು ಮೃತಪಟ್ಟಿದೆ ಎಂಬುದು ತಿಳಿದು ಬಂದಿರುತ್ತದೆ. ಈ ಸಂದರ್ಭದಲ್ಲಿ ಶಿರಾ ತಾಲೂಕು ವೈದ್ಯರ ಸಂಘದ ಕಾರ್ಯದರ್ಶಿ ಅಫ್ಜಲ್ ಉರ್ ರಹಮಾನ್, ಖಜಾಂಚಿ ಡಾ. ರಘು ಕೆ ಸಿ, ಗೌರವಾಧ್ಯಕ್ಷ ಡಾಕ್ಟರ್ ಶ್ರೀನಿವಾಸ್, ಡಾಕ್ಟರ್ ರಾಮಕೃಷ್ಣ , ಡಾ. ಬಿಕೆ ಮಂಜುನಾಥ್, ಡಾ. ಸಿದ್ದೇಶ್ವರ,ಡಾ. ಚಿಕ್ಕಣ್ಣ, ಡಾ. ನವೀನ್, ಡಾ. ಶ್ರೀಕಾಂತ್ , ಡಾ. ದರ್ಶನ್ ,ಡಾ.ಭಾಸ್ಕರ್ ಬಾಬು, ಡಾ. ಶೃತಿ, ಡಾ. ವಿನಯ್ ಕುಮಾರ್ ಸಿಂಗ್, ಡಾ. ದರ್ಶನ್, ಡಾ.ಪುನೀತ್, ಡಾ. ವಿನಯ್ ಡಾ. ಅನ್ನಪೂರ್ಣ, ಡಾ. ನಿತಿನ್ ಸೇರಿದಂತೆ ಹಲವರು ಹಾಜರಿದ್ದರು.