ಗದಗ: ವೈದ್ಯ ವೃತ್ತಿ ಅತ್ಯಂತ ಪವಿತ್ರವಾದುದು. ರೋಗಿಗಳಿಗೆ ವೈದ್ಯಕೀಯ ಸೇವೆ ಒದಗಿಸುವ ಮೂಲಕ ಸಂತೃಪ್ತಿ ಕಾಣಬಹುದಾಗಿದೆ ಎಂದು ವೈದ್ಯ ಡಾ. ಜಗದೀಶ ಶಿರೋಳ ಹೇಳಿದರು.
ಅವರು ಸೋಮವಾರ ರೋಟರಿ ಐಕೇರ್ ಸೆಂಟರ್‌ದಲ್ಲಿ ರೋಟರಿ ಕ್ಲಬ್, ಇನ್ನರ್‌ವೀಲ್ ಕ್ಲಬ್, ವಿಜಯ ಕಾಲೇಜ್ ಆಫ್ ಫೈನ್ ಆರ್ಟ್ಸ್ ಹಾಗೂ ಬಸವೇಶ್ವರ ಬ್ಲಡ್ ಸೆಂಟರ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಡಾ. ಬಿ.ಸಿ. ರಾಯ್ ಅವರು ವೈದ್ಯಕೀಯ ಲೋಕಕ್ಕೆ ಸಲ್ಲಿಸಿದ ಅನುಪಮ ಸೇವೆಯ ಹಾಗೂ ಅವರ ಜನ್ಮದಿನಾಚರಣೆಯ ಸ್ಮರಣೆಯಲ್ಲಿ ಪ್ರತಿ ವರ್ಷ ಜು. 1ರಂದು ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತಿದೆ. ಡಾ. ರಾವ್ ಜನಿಸಿದ್ದು ಮತ್ತು ನಿಧನರಾದದ್ದು ಜು. 1 ಎಂಬುದು ವಿಶೇಷ. ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಸಾಕಷ್ಟು ಪ್ರಗತಿ ಆಗಿದ್ದು, ಜನಸಮುದಾಯ ಆರೋಗ್ಯ ಕಾಯ್ದುಕೊಳ್ಳಲು ವೈದ್ಯರು ಬದ್ಧತೆಯಿಂದ ಹಗಲಿರುಳು ಕಾರ್ಯ ಮಾಡುತ್ತಿದ್ದಾರೆ ಎಂದರು.