ದೇಶ ಪ್ರಗತಿ ಯುವಪೀಳಿಗೆ ಆರೋಗ್ಯ ಅವಲಂಬಿಸಿದೆ

KannadaprabhaNewsNetwork | Published : Jun 30, 2024 12:56 AM

ಸಾರಾಂಶ

ಒಂದು ದೇಶ ಬಲಿಷ್ಠವಾಗಿದೆ ಎಂದರೆ ಆ ದೇಶದ ಯುವಪೀಳಿಗೆ ಆರೋಗ್ಯ ಮತ್ತು ಸದೃಢರಾಗಿದ್ದಾರೆ ಎಂದರ್ಥ. ಆದರೆ, ಬಹುಪಾಲು ಅಭಿವೃದ್ಧಿಶೀಲ ದೇಶಗಳಲ್ಲಿ ಮಾದಕ ದ್ರವ್ಯ ಸೇವನೆ ಒಂದು ಸಾಮಾಜಿಕ ಪಿಡುಗಾಗಿದೆ ಎಂದು ಸರ್ಕಾರಿ ವೈದ್ಯಾಧಿಕಾರಿ ಡಾ.ರಾಜ್‌ಕುಮಾರ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಮಾದಕ ವಸ್ತುಗಳ ವಿರೋಧಿ ದಿನಾಚರಣೆಯಲ್ಲಿ ವೈದ್ಯಾಧಿಕಾರಿ ಡಾ.ರಾಜಕುಮಾರ್‌ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಒಂದು ದೇಶ ಬಲಿಷ್ಠವಾಗಿದೆ ಎಂದರೆ ಆ ದೇಶದ ಯುವಪೀಳಿಗೆ ಆರೋಗ್ಯ ಮತ್ತು ಸದೃಢರಾಗಿದ್ದಾರೆ ಎಂದರ್ಥ. ಆದರೆ, ಬಹುಪಾಲು ಅಭಿವೃದ್ಧಿಶೀಲ ದೇಶಗಳಲ್ಲಿ ಮಾದಕ ದ್ರವ್ಯ ಸೇವನೆ ಒಂದು ಸಾಮಾಜಿಕ ಪಿಡುಗಾಗಿದೆ ಎಂದು ಸರ್ಕಾರಿ ವೈದ್ಯಾಧಿಕಾರಿ ಡಾ.ರಾಜ್‌ಕುಮಾರ್ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ಅಂತರ ರಾಷ್ಕ್ರೀಯ ಮಾದಕ ವಸ್ತುಗಳ ವಿರೋಧಿ ದಿನ ಅಂಗವಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಜಗತ್ತಿನ 193 ದೇಶಗಳಲ್ಲಿ ಮಾದಕ ವಸ್ತುಗಳ ವಿರೋಧಿ ದಿನ ಆಚರಿಸಲಾಗುತ್ತಿದೆ ಎಂದರೆ ಈ ಸಮಸ್ಯೆ ಗಂಭೀರತೆ ಎಷ್ಟೆಂಬುದು ಆರ್ಥವಾಗುತ್ತದೆ. ಬಹುತೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಮಾದಕ ವಸ್ತುಗಳ ವ್ಯಸನಿಗಳಾಗಿದ್ದಾರೆ ಎಂದು ಹೇಳಿದರು.

ಯುವಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಸಹವಾಸ ದೋಷ ಹಾಗೂ ಇನ್ನಿತರ ಕಾರಣಗಳಿಂದ ಮಾದಕ ಸೇವನೆ ಚಟಕ್ಕೆ ಬಿದ್ದು, ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಾಮಾಜಿಕ ಪಿಡುಗಿನ ವಿರುದ್ಧ ಕಾಲೇಜು ವಿದ್ಯಾರ್ಥಿಗಳು ಹೋರಾಟ ಮಾಡಬೇಕಿದೆ. ಅದಕ್ಕಿಂತ ಮುಖ್ಯವಾಗಿ ಮಾದಕ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

ಡಿವೈಎಸ್‌ಪಿ ರುದ್ರಪ್ಪ ಉಜ್ಜಿನಕೊಪ್ಪ ಮಾತನಾಡಿ, ಹದಿಹರೆಯದಲ್ಲಿ ಯಾರ ಮಾತಿಗೂ ಬೆಲೆ ಕೊಡದ ಯುವ ಮನಸ್ಸುಗಳು ಮಾದಕ ಸೇವನೆಯ ಚಟ ಹತ್ತಿಸಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಇದಕ್ಕಾಗಿ ಇಂತಹ ಪಿಡುಗನ್ನು ಬುಡಸಮೇತ ಕಿತ್ತು ಹಾಕಲು ಇಡೀ ವ್ಯವಸ್ಥೆ ಪೊಲಿಸ್ ಇಲಾಖೆ ಜೊತೆ ಕೈಜೋಡಿಸಬೇಕು ಎಂದರು.

ಯುವಕರ ಬಳಿ ಮಾದಕ ವಸ್ತುಗಳು ಹಾಗೂ ಸಾಕ್ಷ್ಯ ಪುರಾವೆಗಳು ಇದ್ದರೆ ಅಂತಹ ವ್ಯಕ್ತಿಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಇತ್ತೀಚಿಗೆ ಎನ್‌ಡಿಪಿಎಸ್ ಆ್ಯಕ್ಟ್ ಪ್ರಕಾರ ಅನುಮಾನ ಬಂದ ವ್ಯಕ್ತಿಯನ್ನು ಕರೆತಂದು ಯೂರಿನ್ ಪರೀಕ್ಷೆ ಮಾಡಿಸಿದರೆ ಸಾಕು, ಅಲ್ಲಿ ಪಾಸಿಟಿವ್ ಬಂದಿದೆ ಎಂದಾದರೆ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಬಹುದು. ವಿದ್ಯಾರ್ಥಿಗಳು ಅದಕ್ಕೆ ಆಸ್ಪದ ಕೊಡದೇ ಮಾದಕ ಸೇವನೆಯಿಂದ ದೂರವಿದ್ದು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಪೊಲೀಸ್‌ ಇನ್‌ಸ್ಪೆಕ್ಟರ್‌ ಸುನೀಲ್‌ಕುಮಾರ್, ಲಯನ್ಸ್ ಕ್ಲಬ್ ಜಿಲ್ಲಾ ಸಂಚಾಲಕ ಶಿವಕುಮಾರ್ ಕಮ್ಮಾರಗಟ್ಟೆ ಮಾತನಾಡಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಮುರುಗೇಶ್, ಅಶೋಕ್‍, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಹರೀಶ್, ಗ್ರಂಥಪಾಲಕ ನಾಗರಾಜ್ ನಾಯ್ಕ, ಹಿರಿಯ ಪ್ರಾಧ್ಯಾಪಕ ಡಿ.ಸಿ.ಪಾಟೀಲ್, ಕಾಲೇಜಿನ ಪ್ರಾಧ್ಯಾಪಕರಾದ ಎ.ಎಸ್.ಐ ತಿಪ್ಪೇಸ್ವಾಮಿ, ಸ್ಪೆಷಲ್ ಬ್ರಾಂಜ್ ಜಗದೀಶ್, ಪೊಲೀಸ್ ಸಿಬ್ಬಂದಿ ಬಸವರಾಜ್, ಸುನೀಲ್, ರಾಘವೇಂದ್ರ, ರಾಜು ಕೆ. ಹಾಗೂ ಇತರರು ಇದ್ದರು.

ಹೊನ್ನಾಳಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ, ನಂತರ ಪಟ್ಟಣದ ಟಿ.ಬಿ. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮಾದಕ ವಸ್ತುಗಳ ಸೇವನೆ ವಿರುದ್ಧ ಜನಜಾಗೃತಿ ಮೂಡಿಸಲಾಯಿತು.

- - -

ಕೋಟ್‌ ನಮ್ಮ ಕಾಲೇಜಿನ ಆವರಣದಲ್ಲಿ ಗಾಂಜಾ ಅಥವಾ ಇನ್ನಿತರ ಡ್ರಗ್ಸ್ ದಂಧೆ ನಡೆಯುತ್ತಿಲ್ಲ. ಒಂದುವೇಳೆ ಅಂತಹ ಪ್ರಕರಣ ನಡೆದರೆ ಅಂತಹ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲು ಮಾಡುತ್ತೇನೆ. ಕಾಲೇಜು ತಂಬಾಕು ಸೇರಿದಂತೆ ಯಾವುದೇ ಮಾದಕ ವಸ್ತುಗಳಿಂದ ಮುಕ್ತವಾಗಿದೆ. ಇದಕ್ಕೆ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆ ಇದೆ. ನನಗೆ ನನ್ನ ವಿದ್ಯಾರ್ಥಿಗಳ ಹಿತ ಮುಖ್ಯವಾಗಿದೆ

- ಡಾ.ಧನಂಜಯ, ಪ್ರಾಚಾರ್ಯ

- - - -26ಎಚ್.ಎಲ್.ಐ2:

ಹೊನ್ನಾಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕ ಸೇವನೆ ವಿರೋಧಿ ದಿನ ಕಾರ್ಯಕ್ರಮವನ್ನು ಡಿವೈಎಸ್‌ಪಿ ರುದ್ರಪ್ಪ ಉಜ್ಜಿನಕೊಪ್ಪ ಉದ್ಘಾಟಿಸಿದರು.

Share this article