ಕಾಗವಾಡ : ಕೃಷ್ಣಾ ನದಿಯಿಂದ ಕಾಗವಾಡ ವಿಧಾನಸಭಾ ಮತಕ್ಷೇತ್ರದ ವಿವಿಧ ಗ್ರಾಮಗಳಿಗೆ ನೀರಾವರಿ ಇಲಾಖೆಯ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ವೇಗ ದೊರೆತಿದೆ. ಆದರೆ, ಈಗ ಮಳೆ ಇರುವುದರಿಂದ ಕಾಮಗಾರಿಗೆ ಅಡಚಣೆಯುಂಟಾಗಿದ್ದು, ಯಾರೂ ಆತಂಕ ಪಡಬಾರದು ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಮತಕ್ಷೇತ್ರದ ಬಳ್ಳಿಗೇರಿ ಗ್ರಾಮದ ಬಸವಣ್ಣ ದೇವಸ್ಥಾನದ ಹತ್ತಿರ ಸಮುದಾಯ ಭವನಕ್ಕೆ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿ, ಕಾಗವಾಡ ವಿಧಾನಸಭಾ ಮತಕ್ಷೇತ್ರದ ಮದಭಾವಿ ಹಾಗೂ ಅನಂತಪೂರ ಹೋಬಳಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ವೇಗ ನೀಡಿದ್ದು, ಬರುವ ವರ್ಷ ಎಲ್ಲ ಕೆರೆಗಳನ್ನು ತುಂಬಿಸಲಾಗುವುದು ಎಂದು ಭರವಸೆ ನೀಡಿದರು.
ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಮೂಲಕ ಎರಡು ಮೋಟಾರುಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಬರುವ ದಿನಮಾನಗಳಲ್ಲಿ ಯೋಜನೆಯನ್ನು ಸಂಪೂರ್ಣಗೊಳಿಸಿ ಕಾಗವಾಡ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ನೀರು ಪೂರೈಸುವುದೇ ನನ್ನ ಗುರಿಯಾಗಿದೆ ಎಂದರು.ರಾಜ್ಯ ಸರ್ಕಾರದಿಂದ ₹25 ಕೋಟಿ ವಿಶೇಷ ಅನುದಾನ ಮಂಜೂರಾಗಿದ್ದು, ಅದರಲ್ಲಿ ₹12 ಕೋಟಿ ರಸ್ತೆ ಕಾಮಗಾರಿಗೆ ಹಾಗೂ ₹13 ಕೋಟಿ ವಿವಿಧ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ.
ಬಳ್ಳಿಗೇರಿ ಗ್ರಾಮದ ಬಸವಣ್ಣ ದೇವಸ್ಥಾನದ ಹತ್ತಿರ ಸಮುದಾಯ ಭವನ, ಅಬ್ಬಿಹಾಳ ಗ್ರಾಮದಲ್ಲಿ ಮರಗುಬಾಯಿ ದೇವಸ್ಥಾನದ ಹತ್ತಿರ, ಗುಂಡೇವಾಡಿ ಗ್ರಾಮದ ಕಾಡಸಿದ್ದೇಶ್ವರ ದೇವಸ್ಥಾನದ ಹತ್ತಿರ ಮಲಾಬಾದ ಗ್ರಾಮದಲ್ಲಿ ವಿಠರಾಯ ದೇವಸ್ಥಾನದ ಹತ್ತಿರ ಪಾಂಡೇಗಾಂವ ಗ್ರಾದಲ್ಲಿ ಬಿರೋಬಾ ದೇವಸಗಥಾನದ ಹತ್ತಿರ ಸಮುದಾಯ ಭವನ ಹಾಗೂ ಅನಂತಪೂರ ಗ್ರಾಮದಲ್ಲಿ ಶಾದಿ ಮಹಲ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಕಾಮಗಾರಿಗೆ ಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಖ್ಯಾತ ವೈದ್ಯರು, ರಡ್ಡಿ ಸಮಾಜದ ಮುಖಂಡರಾದ ಡಾ.ಸಿ.ಎ.ಸಂಕ್ರಟ್ಟಿ, ಕ್ರೀಯಾಶೀಲ ಜಿಲ್ಲಾ ಪಂಚಾಯತಿ ಅಧಿಕಾರಿ ವೀರಣ್ಣ ವಾಲಿ, ಮುಖಂಡರಾದ ಘೂಳಪ್ಪ ಜತ್ತಿ, ಶಿವಾನಂದ ಗೊಲಭಾಂವಿ, ಚಂದ್ರಕಾಂತ ಇಮ್ಮಡಿ, ಅಶೋಕ ಕೌಲಗುಡ್ಡ, ರಫೀಕ್ ಪಟೇಲ, ಶಿದರಾಯ ತೇಲಿ, ಶಿವಾನಂದ ಹುಚಗೌಡರ, ಭೀಮಪ್ಪ ಕುರ್ಳಳೋಳ್ಳಿ, ಬಸವರಾಜ ತುಬಚಿ,ಸಿದ್ದಾರೂಢ ನೇಮಗೌಡರ, ಬಿ.ಕೆ.ಚನ್ನರಡ್ಡಿ, ಬಸವರಾಜ ನಾವಿ, ಅಕ್ಷಯ ಕುಲಕರ್ಣಿ, ಮಹಾಂತಯ್ಯ ಹಿರೇಮಠ, ಓಂಪ್ರಕಾಶ ಡೊಳ್ಳಿ, ರಾಜು ಮದಭಾಂವಿ, ಬಾಹುಸಾಹೇಬ ಪತ್ತಾರ, ಶಿವಾನಂದ ಪಾಟೀಲ ಸೇರಿದಂತೆ ಅನೇಕರು ಇದ್ದರು.
₹277 ಕೋಟಿ ವೆಚ್ಚದಲ್ಲಿ 11 ಕೆರೆಗಳಿಗೆ ನೀರು ತುಂಬುವ ಯೋಜನೆಯ ಕಾಮಗಾರಿ ಪ್ರಾರಂಭವಾಗಿದೆ.ಈ ಯೋಜನೆಯಿಂದ ಸುಮಾರು ಹತ್ತಾರು ಹಳ್ಳಗಳು ಹಾಗೂ ಸಾವಿರಾರು ಬಾವಿ ಹಾಗೂ ಕೊಳವೆಬಾವಿಗಳ ಅಂತರಜಲಮಟ್ಟ ಹೆಚ್ಚಾಗಲಿದೆ. ಈಗಾಗಲೇ ಅಥಣಿ ತಾಲೂಕಿನ ಅನಂತಪೂರ, ಗುಂಡೇವಾಡಿ, ಬಳ್ಳಿಗೇರಿ, ಪಾರ್ಥನಳ್ಳಿ ಚಮಕೇರಿ ಬೇಡರಹಟ್ಟಿ, ಮಲಾಬಾದ ಬೇವನೂರ ಹೀಗೆ 11 ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಪೂರೈಕೆ ಮಾಡಲು ಬೃಹತ್ ಯೋಜನೆ ಕೈಕೊಳ್ಳಲಾಗಿದೆ.
-ರಾಜು ಕಾಗೆ, ಶಾಸಕರು.